ಶಿವಮೊಗ್ಗ ಮೇ.31 : ಲೋಕಸಭಾ ಚುನಾವಣೆ-2024 ಮತ ಎಣಿಕೆ ಜೂನ್ 04 ರಂದು ನಡೆಯಲಿದ್ದು ಚುನಾವಣಾ ಆಯೋಗದ ನಿಯಮಾನುಸಾರ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜೂನ್ 04 ರಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬೆಳಗ್ಗೆ 8.00 ಗಂಟೆ ಆರಂಭಿಸಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಒಟ್ಟು 1752885 ಮತದಾರರು ಇದ್ದು ಒಟ್ಟು 1372949 ಮತ ಚಲಾವಣೆಯಾಗಿದೆ. ಮತ ಎಣಿಕೆಗೆ ಒಟ್ಟು 523 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಕುರಿತು ಅಭ್ಯರ್ಥಿಗಳಿಗೆ ಅಥವಾ ಚುನಾವಣಾ ಏಜೆಂಟರಿಗೆ ಜೂನ್ 04 ರಂದು ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ತಿಳಿಸಲಾಗಿದೆ. ಬೆಳಿಗ್ಗೆ 7.00 ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲು ಕ್ರಮವಹಿಸುವ ಮಾಹಿತಿಯನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್ ಗಳು ಇರುತ್ತದೆ. ಮತ ಎಣಿಕೆ ಟೆಬಲ್ ಕೌಂಟರ್‍ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ.
ಅಂಚೆ ಮತಪತ್ರಗಳನ್ನು ಬೆಳಿಗ್ಗೆ 8.00 ಗಂಟೆಗೆ ಚುನಾವಣಾಧಿಕಾರಿಗಳ ಮೇಜಿನಲ್ಲಿ ಆರಂಭಿಸಲಾಗುವುದು. ಅಂಚೆ ಮತಪತ್ರಗಳ ಎಣಿಕೆ ಆರಂಭವಾದ 30 ನಿಮಿಷಗಳ ನಂತರ ಕಂಟ್ರೋಲ್ ಯೂನಿಟ್ ಮೂಲಕ ಮತ ಎಣಿಕೆಯನ್ನು ಆರಂಬಿಸಲಾಗುವುದು. ಪ್ರತೀ ಮತ ಎಣಿಕೆ ಟೇಬಲ್ ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಮತ್ತು ಒಬ್ಬರು ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕಗೊಳಿಸಿ ತರಬೇತಿ ನೀಡಲಾಗಿದೆ. ಇ.ವಿ.ಎಂ ಮತ ಎಣಿಕೆಗಳು ಪೂರ್ಣಗೊಂಡ ನಂತರ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‍ಗಳ ಎಣಿಕೆಯನ್ನು ಒಂದಾದ ಮೇಲೆ ಒಂದರಂತೆ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮತ ಎಣಿಕೆ ಹಾಲ್ ನಲ್ಲಿ ಮೊಬೈಲ್ ಗಳಿಗೆ ಅವಕಾಶವಿರುವುದಿಲ್ಲ.
ಮತ ಎಣಿಕೆ ಆವರಣದ ಸುತ್ತಮುತ್ತ ಸೆಕ್ಷನ್ 144 ನ್ನು ಜಾರಿ ಮಾಡಲಾಗಿದೆ ಮಾಧ್ಯಮ ಕೇಂದ್ರವನ್ನು ಮತ ಎಣಿಕೆ ಆವರಣದಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ ವಿಧಾನಸಭಾ ಕ್ಷೇತ್ರ 18ರಿಂದ21 ಸುತ್ತಿನ ಎಣಿಕೆ ನಡೆಯಲಿದ್ದು ಪ್ರತಿಯೊಂದು ಸುತ್ತಿನ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಸಹಿ ಹಾಕಿದ ನಂತರ ಮಾಧ್ಯಮ ಹಾಗೂ ಮೈಕ್ ಮೂಲಕ ತಿಳಿಸಲಾಗುತ್ತದೆ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಮಾತನಾಡಿ ಲೋಕಸಭಾ ಚುನಾವಣೆ ಮತ ಏಣಿಕೆ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಸಹ್ಯಾದ್ರಿ ಕಾಲೇಜು ಮುಖ್ಯರಸ್ತೆ, ಎಂಆರ್ ಎಸ್ ವೃತ್ತ ವಾಹನ ಸಂಚಾರ ನಿಷೇಧಿಸಲಾಗಿದ್ದು ವಾಹನ ಸವಾರರಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ. 1000ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ, ಹೋಂ ಗಾರ್ಡ್, ಕೆಎಸ್‍ಆರ್‍ಪಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಗಳನ್ನು ನಡೆಸಿ ಮಾಹಿತಿಯನ್ನು ನೀಡಿಲಾಗಿದೆ ಎಂದರು.