ಶಿವಮೊಗ್ಗ, ನವೆಂಬರ್ 24 : ಜಿಲ್ಲಾದ್ಯಂತ ಫ್ರೂಟ್ಸ್ ನೊಂದಣಿ ಅಭಿಯಾನ ಹಮ್ಮಿಕೊಂಡಿದ್ದು, ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ವಿವರಗಳನ್ನು ಕೂಡಲೇ ಜೋಡಣೆ ಮಾಡಲು ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ತಿಳಿಸಿದ್ದಾರೆ.
ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಹಾಗೂ ಇನ್ನಿತರ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಹೊಂದಿರುವುದು ಕಡಾಯವಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 5,11,258 ಕೃಷಿ ಯೋಗ್ಯ ತಾಕುಗಳಿದ್ದು ಅವುಗಳಲ್ಲಿ ಈಗಾಗಲೇ 3,28,807 ತಾಕುಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಲಾಗಿದ್ದು, 1,90,749 ತಾಕುಗಳ ನೊಂದಣಿ ಬಾಕಿ ಇರುತ್ತದೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಣೆಯಾಗಿರುವುದರಿಂದ ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿಯಾಗಿರುವ ಒಟ್ಟು ವಿಸ್ತೀರ್ಣ ಮತ್ತು ಬೆಳೆ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಬೆಳೆ ನಷ್ಟ ಪರಿಹಾರ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆ. ಎಲ್ಲಾ ರೈತರು ತಾವು ಹೊಂದಿರುವ ಜಮೀನಿನ ಎಲ್ಲಾ ಸರ್ವೇ ನಂಬರ್ಗಳನ್ನು ಈ ತಂತ್ರಾಂಶದಲ್ಲಿ ದಾಖಲು ಮಾಡುವಂತೆ ತಿಳಿಯಪಡಿಸಿದೆ.
ಜಿಲ್ಲೆಯಲ್ಲಿ ತಾಲ್ಲೂಕುವಾರು ನೊಂದಣಿಯಾಗದ ಶಿವಮೊಗ್ಗ-34.000, ಭದ್ರಾವತಿ-35.791, ತೀರ್ಥಹಳ್ಳಿ-25,713, ಸಾಗರ-30,913, ಹೊಸನಗರ-11,651, ಶಿಕಾರಿಪುರ-26,551, ಸೊರಬ-26,130 ಸರ್ವೇ ನಂಬರ್ಗಳ ಜಮೀನಿನ ರೈತರು ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕಗಳೊಂದಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮದ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವುದು.