ಶಿವಮೊಗ್ಗ : ಜುಲೈ 19 : ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆ ಹಾಗೂ ಕೆಲವು ಸ್ಥಳಗಳಲ್ಲಿ ಪೌರ ಕಾರ್ಮಿಕರನ್ನು ಬಳಸಿಕೊಂಡು ಮ್ಯಾನ್‍ಹೋಲ್ ಒಳಗಡೆ ಇಳಿದುವ ಕೆಲಸ ಮಾಡಿಸಿಕೊಳ್ಳುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ನಗರ ಯೋಜನಾ ಅಧಿಕಾರಿ ಅವರಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ವೃತ್ತಿನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.
ಭದ್ರಾವತಿಯ ಪೇಪರ್‍ಟೌನ್, ಹೊಸಮನೆ, ರಂಗಪ್ಪ ಸರ್ಕಲ್ ಮತ್ತು ಕೆಲವು ಪ್ರದೇಶಗಳ ನಿವಾಸಿಗಳು ಹಾಗೂ ನಗರದ ಕೆಲವು ಹೋಟೆಲ್ ಸೇರಿದಂತೆ ಕೆಲವು ವಾಣಿಜ್ಯ ಸಂಸ್ಥೆಗಳು ಮಲ-ಮೂತ್ರವನ್ನು ನೇರವಾಗಿ ಚರಂಡಿಗೆ ಬಿಟ್ಟು ವಾತಾವರಣ ಕಲುಷಿತ ಮಾಡುತ್ತಿರುವವರ ವಿರುದ್ಧ ಈಗಾಗಲೇ ಎಚ್ಚರಿಕೆಯ ನೋಟೀಸ್ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ ಮನೆಯ ಮಲಮೂತ್ರವನ್ನು ಚರಂಡಿಗೆ ಬಿಡದಂತೆ ನಿಯಂತ್ರಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸಾಧ್ಯವಿರುವ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಭದ್ರಾವತಿ ನಗರಸಭೆಯ ಅಭಿಯಂತರರಿಗೆ ಸೂಚಿಸಿದರು.
ಈಲ್ಲೆಯ ಯಾವುದೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮನೆಗಳು, ಕಂಪನಿಗಳು, ಆಸ್ಪತ್ರೆ, ಮತ್ತಿತರ ಯಾವುದೇ ಮ್ಯಾನ್‍ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್‍ಗುಂಡಿಗಳು ಕಟ್ಟಿಕೊಂಡಲ್ಲಿ ಅವುಗಳನ್ನು ಸ್ವಚ್ಚಗೊಳಿಸಲು ಸಾರ್ವಜನಿಕರು ಸ್ಥಳೀಯ ಸಹಾಯವಾಣಿಗೆ ಕರೆ ಮಾಡುವಂತೆ ಹಾಗೂ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಹಾಗೂ ಕರಪತ್ರಗಳನ್ನು ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಹಾಗೂ ಪರಿಸರ ಅಭಿಯಂತರರಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ-ಸಿಬ್ಬಂಧಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ವಸತಿ ರಹಿತ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಲು ಹಾಗೂ ಪೌರಕಾರ್ಮಿಕರ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಆರ್ಥಿಕ ನೆರವು ಒದಗಿಸಲು ಕ್ರಮ ವಹಿಸುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ ಯೋಜನಾ ನಿರ್ದೇಶಕ ನರಸಿಂಹ ಮೂರ್ತಿ ಅವರು ಮಾತನಾಡಿ, ಮಳೆಗಾಲದ ದಿನಗಳಾಗಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಯಾವುದೇ ವಿಪತ್ತನ್ನು ಸಕಾಲದಲ್ಲಿ ನಿಯಂತ್ರಿಸುವಲ್ಲಿ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಕೇಂದ್ರಸ್ಥಾನ ಬಿಡದಂತೆ ಸೂಚಿಸಿದ ಅವರು, ವಾರ್ಡುವಾರು ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಸೂಚಿಸಿದ ಸ್ಥಳದಲ್ಲಿರುವಂತೆ ಸೂಚಿಸಿದರು.
ಈಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯು.ಜಿ.ಡಿ ಗುಂಡಿಗಳನ್ನು ಯಂತ್ರಗಳಿಂದಲೇ ಸ್ವಚ್ಚಗೊಳಿಸಿಕೊಳ್ಳಲು ಹಾಗೂ ಮಾನವ ಸಂಪನ್ಮೂಲ ಬಳಸದಂತೆ ಜನರಿಗೆ ಅರಿವು ಮೂಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್‍ಕುಮಾರ್, ಜಾಗೃತಿ ಸಮಿತಿ ಸದಸ್ಯ ಚನ್ನಯ್ಯ, ಬಾನುಪ್ರಸಾದ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.