PLANT FOR MOTHER – CAMPAIGN
ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಜಾಗತಿಕವಾಗಿ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಸಲುವಾಗಿ ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಎಂಬ ಜಾಗತಿಕ ಅಭಿಯಾನವನ್ನು ಜೂನ್ 6ರಂದು ಪ್ರಾರಂಭ ಮಾಡಿದರು. ಈ ಅಭಿಯಾನದಡಿ ದೇಶದಾದ್ಯಂತ ಸೆಪ್ಟಂಬರ್ 2024ರ ವೇಳೆಗೆ 80 ಕೋಟಿ ಸಸಿಗಳನ್ನು ಮತ್ತು ಮಾರ್ಚ್ 2025 ರೊಳಗೆ 140 ಕೋಟಿ ಸಸಿಗಳನ್ನು ನೆಡೆಸುವ ಬೃಹತ್ ಕಾರ್ಯಕ್ರಮವನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಲಯ ಹಾಗೂ ಪರಿಸರ, ಆರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದ ಒಂದು ಭಾಗವಾಗಿ 29 ಆಗಸ್ಟ್ 2024ರಂದು ಗೌರವಾನ್ವಿತ ಕೃಷಿ ಸಚಿವರು, ಭಾರತ ಸರ್ಕಾರ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕ್ಯಾಂಪಸ್‌ನಲ್ಲಿ ಒಂದು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
ಈ ಅಭಿಯಾನದ ಭಾಗವಾಗಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದಲ್ಲಿ ಸಿಬ್ಬಂದಿಗಳು, ವಿಜ್ಞಾನಿಗಳು, ಹಾಗೂ ರೈತರ ಜೊತೆಗೂಡಿ 100 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ವೀರಪ್ಪನಾಯಕ, ಪ್ರಗತಿಪರ ಕೃಷಿಕರು, ಸೊರಬ ತಾಲ್ಲೂಕು ಇವರಿಂದ ಸಸಿ ನೆಡುವ ಕಾರ್ಯಕ್ರಮದ ಚಾಲನೆ ನೀಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಮುಖ್ಯಸ್ಥರಾದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಬಿ.ಸಿ.ಹನುಮಂತಸ್ವಾಮಿ ಇವರು ಮಾತನಾಡಿ, ಗಿಡಗಳನ್ನು ನೆಡುವ ಮೂಲಕ ನಮ್ಮ ತಾಯಿ ಮತ್ತು ಭೂಮಿ ತಾಯಿಗೆ ಗೌರವವನ್ನು ಸಲ್ಲಿಸುವುದರ ಜೊತೆಗೆ ಸುಸ್ಥಿರ ಕೃಷಿ, ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಸುಧಾರಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸಿ. ಸುನಿಲ್, ಡಾ. ಎನ್. ಸುಧಾರಾಣಿ, ವಿಜ್ಞಾನಿ (ಗೃಹ ವಿಜ್ಞಾನ). ಡಾ. ಭರತ್ ಕುಮಾರ್, ವಿಜ್ಞಾನಿ (ತೋಟಗಾರಿಕೆ) ಹಾಗೂ ಕೆ.ವಿ.ಕೆ. ತಾಂತ್ರಿಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು 30 ಜನ ರೈತ ಮಹಿಳೆಯರು ಉಪಸ್ಥಿತರಿದ್ದು, ಸಸಿ ನೆಡುವಲ್ಲಿ ತಾವೂ ಕೈಜೋಡಿಸಿದರು.