ಶಿವಮೊಗ್ಗ ಅಕ್ಟೋಬರ್ 25 : ಅಡಿಕೆಯಲ್ಲಿ ಎಲೆ ಚುಕ್ಕೆರೋಗ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೇಳಿಬರುತ್ತಿರುವ ರೋಗ. ಅಡಿಕೆ ಕೃಷಿಕರಿಗೆ ತೋಟದಲ್ಲಿ ಈ ರೋಗ ಅರಿವಿಗೆ ಬರುವುದು ತಡವಾಗುತ್ತದೆ.  ಇದರಿಂದ ಅಡಿಕೆ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಎಲ್ಲಾ ಅಡಿಕೆ ಬೆಳೆಗಾರರು ಸಾಮೂಹಿಕವಾಗಿ ಮುಂಜಾಗೃತ ಕ್ರಮಕೈಗೊಂಡು ಸೂಕ್ತ ಔಷಧ ಸಿಂಪರಣೆ ಮಾಡುವುದು ಅಗತ್ಯ ಎಂದು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳಾದ ಡಾ.ನಿರಂಜನ್, ಕೆ.ಎಸ್. ತಿಳಿಸಿದರು.

ಮಾಸ್ತಿಕಟ್ಟೆ ಗ್ರಾಮ ಪಂಚಾಯ್ತಿಯಲ್ಲಿ ಕೆ.ವಿ.ಕೆ., ಶಿವಮೊಗ್ಗ, ಹೊಸನಗರದ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಮಾತನಾಡುತ್ತ, ಎಲೆಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದರು. ಮಲೆನಾಡಿನ ಪ್ರಮುಖ ಪ್ರದೇಶಗಳಲ್ಲಿ ಕಳೆದ ವರ್ಷ ಡಿಸೆಂಬರ್‍ನಲ್ಲಿ ಶುರುವಾದ ಮಳೆ ಈಗಲೂ ಮುಂದುವರೆದಿದೆ. ಅಡಿಕೆಗೆ ಅಗತ್ಯವಿರುವ ಪ್ರಮಾಣದ ಬಿಸಿಲು ಸಿಗುತ್ತಿಲ್ಲ, ಹೀಗಾಗಿ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ಎಲೆಚುಕ್ಕೆ ರೋಗಕ್ಕೆ ಪ್ರಮುಖ ಕಾರಣ ಎಂದು ತಿಳಿಸುತ್ತಾ, ರೋಗ ಹರಡುವ ಪ್ರಮುಖ ಮೂರು ಶಿಲೀಂಧ್ರಗಳಾದ ಕೊಲೆಟೋಟ್ರೈಕಮ್, ಫಿಲೋಸ್ಟಿಕ್ಟಾ ಅರೆಕಾ ಮತ್ತು ಪೆಸ್ಟಲೋಸಿಯಾ ಇವುಗಳ ತೀವ್ರತೆಯ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ತಜ್ಞ ವಿಜ್ಞಾನಿಗಳು ಗ್ರಾಮದ ಸೋಂಕು ಬಾಧಿತಕೃಷಿಕರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಸಲಹೆ ನೀಡಿದರು. ರೈತರಿಗೆ ರೋಗದ ಲಕ್ಷಣಗಳನ್ನು ವಿವರಿಸಿದರು. ಎಲೆಚುಕ್ಕೆರೋಗ ಬಾಧಿತ ಕೆಳಗಿನ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಸೋಗೆಗಳನ್ನು ಆವರಿಸುತ್ತದೆ. ನಂತರ ಸೋಗೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಸೋಗೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದರು.
ಶಿಲೀಂಧ್ರ ನಾಶಕಗಳಾದ ಸಾಫ್ (SAAF) (2 ಗ್ರಾಂ/1 ಲೀಟರ್ ನೀರಿಗೆ) ಅಥವಾ ಹೆಕ್ಸಾಕೊನಜೋಲ್ (1 ಮಿ.ಲೀ./ 1 ಲೀಟರ್ ನೀರಿಗೆ) ಅಥವಾ ಪ್ರೊಪಿಯೊಕೊನಾಜೋಲ್ (1 ಮಿ.ಲೀ./1 ಲೀಟರ್ ನೀರಿಗೆ) ಇವುಗಳಲ್ಲಿ ಯಾವುದಾದರೂ ಒಂದನ್ನು ಸಿಂಪರಣೆ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲರೂ ಸಮೂಹಿಕವಾಗಿ ಕೈಗೊಳ್ಳಬೇಕು ಎಂದು ತಿಳಿಸುತ್ತಾ ಪೆÇೀಷಕಾಂಶಗಳ ನಿರ್ವಹಣೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಡಾ||ಕೆ.ಎಸ್. ನಿರಂಜನ್,ಕ್ಷೇತ್ರ ವ್ಯವಸ್ಥಾಪಕರು, ಕೆ.ವಿ.ಕೆ. ಶಿವಮೊಗ್ಗ, ಕು|| ಸ್ಮಿತ, ಜಿ. ಬಿ., ವಿಜ್ಞಾನಿ (ತೋಟಗಾರಿಕೆ), ಡಾ|| ಶ್ರೀಶೈಲ ಸೊನ್ಯಾಳ್, ಸಹಾಯಕ ಪ್ರಾಧ್ಯಾಪಕರು, ರೋಗಶಾಸ್ತ್ರ, ಡಾ.ಸಚಿನ್,ಸಹಾಯಕ ತೋಟಗಾರಿಕಾಧಿಕಾರಿ, ಹೊಸನಗರ ಇವರು ಈ ತರಬೇತಿಯಲ್ಲಿ ಉಪಸ್ಥಿತರಿದ್ದು, ಭಾಗವಹಿಸಿದ ರೈತರಿಗೆ ಮಾಹಿತಿ ನೀಡಿದರು.

error: Content is protected !!