ಸ್ವಾಯತ್ತತೆ ಉಳಿಸಿಕೊಳ್ಳುವುದೇ ಸರ್ಕಾರಿ ವಿವಿಗಳಿಗೆ ದೊಡ್ಡ ಸವಾಲು: ಪ್ರೊ. ಎಂ. ವೆಂಕಟೇಶ್ವರಲು
ಶಂಕರಘಟ್ಟ, ಸೆ. 26: ಕಳೆದ ದಶಕದಿಂದೀಚೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ತೀವ್ರ ಪ್ರತಿಸ್ಫರ್ಧೆಯ ನಡುವೆ ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳು ಸ್ವಾಯತ್ತತೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಿನ ವಿಚಾರವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘದ ವತಿಯಿಂದ ಜ್ಞಾನಸಹ್ಯಾದ್ರಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥೆಯೇ ಸಂಪೂರ್ಣ ಬುಡಮೇಲಾಗುತ್ತಿದೆ. ಒಂದೆಡೆ ಸರ್ಕಾರದ ಅನುದಾನ ಕಡಿತಗೊಳ್ಳುತ್ತಿದ್ದರೆ, ಇನ್ನೊಂದೆಡೆ ವಿವಿಗಳು ಬಹುತೇಕ ಸ್ವಾಯತ್ತತೆ ಕಳೆದುಕೊಳ್ಳುತ್ತಿದೆ.
ಹೊಸ ಶಿಕ್ಷಣ ನೀತಿಯ ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರ ಕೂಡ ಮುಕ್ತವಾಗಿದ್ದು, ಸರ್ಕಾರಿ ವಿವಿಗಳು, ಖಾಸಗಿ ವಿವಿಗಳು, ಕಾಲೇಜುಗಳು, ಡೀಮ್ಡ್ ಶಿಕ್ಷಣ ಸಂಸ್ಥೆಗಳು, ಹೀಗೆ ಎಲ್ಲವೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ತಮ್ಮ ಸಂಪನ್ಮೂಲಗಳನ್ನು ತಾವೇ ಕ್ರೋಢೀಕರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂಥಹಾ ಸವಾಲಿನ ಸಮಯದಲ್ಲಿ ವಿವಿಗಳು ಸ್ವಾವಲಂಬಿಗಳಾಗುವತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ದೂರಶಿಕ್ಷಣ ಕೋರ್ಸ್ಗಳನ್ನು ನಡೆಸುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯ ಈಗ ಸರ್ಕಾರದ ಅನುದಾನಕ್ಕೆ ಕಾದು ಕೂರುವಂತಹ ಗಂಭೀರ ಸ್ಥಿತಿಯಲ್ಲಿದೆ. ಸರ್ಕಾರ ಎಲ್ಲ ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೋರ್ಸ್ಗಳಿಗೆ ಕಡಿವಾಣ ಹಾಕಿದ್ದು ದೊಡ್ಡ ಹಿನ್ನಡೆ ಎಂದರು.
ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಸಂಘದ ಅಧ್ಯಕ್ಷ ಪ್ರೊ. ಭೋಜ್ಯಾನಾಯಕ್, ಕಾರ್ಯದರ್ಶಿ ಪ್ರೊ. ಪ್ರಶಾಂತ್ ನಾಯಕ್, ಪ್ರೊ. ವೆಂಕಟೇಶ್, ಪ್ರೊ. ಯಾದವ್ ಬೋಡ್ಕೆ, ಪ್ರೊ. ನಾಗರಾಜ್, ಮತ್ತಿತರ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.