ಮಂತ್ರಿ ಪದವಿ ಕಳೆದುಕೊಂಡ ನಂತರ. ತೀರಾ ವ್ಯಾಕುಲಕ್ಕೆ ಒಳಗಾದ ಈಶ್ವರಪ್ಪ ಅಭಿವೃದ್ಧಿ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬದುಕಿನುದ್ದಕ್ಕೂ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾ ಧರ್ಮಗಳ ನಡುವೆ ದ್ವೇಷದ ಕಿಚ್ಚು ಹೊತ್ತಿಸಿಕೊಳ್ಳುವುದನ್ನು ಬಿಟ್ಟರೆ ಮಂತ್ರಿಯಾಗಿಯೂ ಏನೂ ಮಾಡಲಿಲ್ಲ. ಶಾಸಕರಾಗಿಯೂ ಏನೂ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.
ನಗರದಲ್ಲಿ ಬಡವರಿಗೆ ಆಶ್ರಯ ಮನೆಯ ಹಕ್ಕುಪತ್ರ ಕೊಡುವುದು ಒತ್ತಟ್ಟಿಗಿರಲಿ. ಇದೀಗ ಕೊಟ್ಟಿರುವುದನ್ನೂ ಕಸಿದುಕೊಂಡಿದ್ದಾರೆ. ಕೊರೋನಾ, ಅತಿವೃಷ್ಠಿ ಮುಂತಾದ ಅನೇಕ ವಿಕೋಪಗಳ ಕಾರಣಕ್ಕಾಗಿ ಆಶ್ರಯ ನಿವೇಶನ ಪಡೆದ ಬಡವರು ಮನೆ ಕಟ್ಟಲು ಆಗಿರಲಿಲ್ಲ. ಇದೇ ಕಾರಣವಿಟ್ಟುಕೊಂಡು ಅವರ ನಿವೇಶನಗಳನ್ನು ರದ್ದು ಮಾಡಿರುವುದು ತೀರಾ ಖಂಡನೀಯ ಎಂದು ದೂರಿದ್ದಾರೆ.
ನಗರದ ನಿರಂತರ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಕೊಳಚೆ ಪ್ರದೇಶದ ನಿವಾಸಿಗಳು ಸೂರಿನ ಆಸೆಗಾಗಿ ಹಣ ಕಟ್ಟಿದ್ದರೂ ಅವರಿಗೆ ಮನೆ ಕಟ್ಟಿಸಿಕೊಡಲಾಗುತ್ತಿಲ್ಲ. ನೀರು ಇಲ್ಲದೇ ಶುಲ್ಕ ಕಟ್ಟ ಬೇಕಾಗಿರುವುದು ಶಿವಮೊಗ್ಗ ನಗರದ ನಾಗರಿಕರ ಪಾಡಾಗಿದೆ.
ಸ್ಮಾರ್ಟ್ ಸಿಟಿ ಅವಾಂತರವಂತೂ ಹೇಳುವುದೇ ಬೇಕಾಗಿಲ್ಲ. ಕಳಪೆ ಎಂದು ಕಂಡು ಬಂದರೂ ಶಾಸಕರು ತುಟಿಕ್ ಪಿಟಿಕ್ ಎಂದಿಲ್ಲ. ಬದಲು ಅಧಿಕಾರಿಗಳ ಮೈದಡವುವ ಕೆಲಸ ಮಾಡುತ್ತಿದ್ದಾರೆ. ಕಳೆಪೆ ಕಾಮಗಾರಿ ಕುರಿತು ನಗರದಲ್ಲಿ ನೂರಾರು ಪ್ರತಿಭಟನೆಗಳಾಗಿವೆ. ಅದಕ್ಕೂ ಜುಪ್ ಎನ್ನದ ಶಾಸಕರು ತನಿಖೆಗೂ ಒಳಪಡಿಸಿಲ್ಲ ಎಂದು ಟೀಕಿಸಿದ್ದಾರೆ.
ಇವರಿಗಿರುವ ಒಂದೇ ಒಂದು ಕೆಲಸವೆಂದರೆ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಟೀಕಿಸುವುದು. ಅವರನ್ನು ಟೀಕಿಸುವುದರಿಂದ ತಮ್ಮ ಬೇಳೆ ಬೇಯುತ್ತದೆ ಎಂದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರನ್ನು ಟೀಕಿಸುವ ಯಾವುದೇ ನೈತಿಕ ಹಕ್ಕು ಇವರಿಗೆ ಖಂಡಿತಾ ಇಲ್ಲ. ಮತ್ತೆ ಮಂತ್ರಿ ಸ್ಥಾನ ಪಡೆಯುವ ಹುನ್ನಾರ ಈ ಟೀಕೆಯಲ್ಲಿ ಅಡಗಿದೆ ಎಂದಿದ್ದಾರೆ.
ಮನುಷ್ಯ ಪ್ರೀತಿ ಕಳೆದುಕೊಂಡ ಈಶ್ವರಪ್ಪ ಇನ್ನಾದರೂ ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುವುದನ್ನು ನಿಲ್ಲಿಸಬೇಕು. ಈ ಬಾರಿಯಂತೂ ಅವರಿಗೆ ಟಿಕೆಟ್ ಸಿಗುವುದಿಲ್ಲ. ಸಿಕ್ಕರೂ ಜನ ಅವರನ್ನು ಗೆಲ್ಲಿಸುವುದಿಲ್ಲ ಎಂದು ವೈ.ಹೆಚ್. ನಾಗರಾಜ್ ವ್ಯಂಗ್ಯವಾಡಿದ್ದಾರೆ.