ಐ.ಸಿ.ಎ.ಆರ್. – ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಕೂಡಿ ಗ್ರಾಮದಲ್ಲಿ ಪೋಷಣ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಇಫ್ಕೋ ಸಂಸ್ಥೆ ಶಿವಮೊಗ್ಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಶ್ರೀಮತಿ ಪ್ರತಿಭಾ (ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಮ್ಮಡಿಹಳ್ಳಿ) ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಗೃಹ ವಿಜ್ಞಾನಿಯಾದ ಡಾ. ಜ್ಯೋತಿ ಎಂ. ರಾಠೋಡ್ ರವರು ತಮ್ಮ ಭಾಷಣದಲ್ಲಿ ಪೋಷಣ ಅಭಿಯಾನದ ಪ್ರಾಮುಖ್ಯತೆ, ಉದ್ದೇಶ ಮತ್ತು ಆರೋಗ್ಯದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಪೌಷ್ಟಿಕ ಆಹಾರದ ಅವಶ್ಯಕತೆಗಳ ಬಗ್ಗೆ ವಿವರಿಸಿದರು. ನಂತರ ಪೌಷ್ಟಿಕ ಸಿರಿಧಾನ್ಯಗಳು, ಸಿರಿಧಾನ್ಯಗಳ ವಿಧಗಳು ಮತ್ತು ಅದರ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳ ಪಾತ್ರ ಮತ್ತು ಪ್ರಯೋಜನಗಳ ಬಗ್ಗೆ ಹೇಳಿದರು. ಸಿರಿಧಾನ್ಯಗಳಲ್ಲಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿಕೊಟ್ಟರು.
ಕೆ.ವಿ.ಕೆ, ಶಿವಮೊಗ್ಗದ ಆರ್ಯ ಯೋಜನೆಯ, ಹಿರಿಯ ಸಹಾಯಕ ಸಂಶೋಧಕರಾದ ಡಾ. ಪೂಜಾ. ಜಿ. ಕೆ., ರವರು ಕಾರ್ಯಕ್ರಮದಲ್ಲಿ ಮಾತನಾಡಿ ಪೌಷ್ಟಿಕ ಕೈತೋಟ, ಪೌಷ್ಟಿಕ ಕೈತೋಟದ ಅಗತ್ಯತೆ ಮತ್ತು ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಆರೋಗ್ಯದಲ್ಲಿ ಪೌಷ್ಟಿಕ ಕೈತೋಟದ ಪಾತ್ರ ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು. ಪೌಷ್ಟಿಕ ಕೈತೋಟಗಳಲ್ಲಿ ಬೆಳೆಯುವ ವಿವಿಧ ರೀತಿಯ ಬೆಳೆಗಳ ಬಗ್ಗೆ ತಿಳಿಸಿ, ಕೈತೋಟದ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಮಾರುಕಟ್ಟೆಯ ಅಧಿಕಾರಿಯಾದ (ಇಫ್ಕೋ ಸಂಸ್ಥೆ) ರಾಜು ರವರು ಕಾರ್ಯಕ್ರಮದಲ್ಲಿ ನ್ಯಾನೋ ಯೂರಿಯಾದ ಬಗ್ಗೆ ಮಾಹಿತಿ ನೀಡಿ ಅದರಿಂದ ಬೆಳೆಗಳಲ್ಲಿ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಮೇಲ್ವಿಚಾರಕರಾದ ಸವಿತಾ ಕೆ ಎಸ್ ರವರು ಪೆÇೀಷಣ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾಗೆಯೇ ಗ್ರಾಮೀಣ ಜನರಿಗೆ ದೊರಕುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅದರ ಪ್ರಯೋಜನ ಮತ್ತು ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಹಾಗೆಯೇ ಕಾರ್ಯಕ್ರಮದ ಕೊನೆಯಲ್ಲಿ ನುಗ್ಗೆ ಮತ್ತು ಪಪ್ಪಾಯದ ಸಸಿಗಳನ್ನು ಶಾಲೆಯ ಅಂಗಳದಲ್ಲಿ ನೆಡುವುದರ ಮೂಲಕ ಅಲ್ಲಿ ನೆರೆದಿದ್ದ ಜನರಿಗೆ ನುಗ್ಗೆ, ಪಪ್ಪಾಯ ಸಸಿಗಳನ್ನು ಮತ್ತು ಐದು ವಿವಿಧ ತರಕಾರಿಗಳ ಬೀಜಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ್ ಟಿ ಜಿ. (ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು) ಮತ್ತು ಶ್ರೀ ಕೃಷ್ಣಮೂರ್ತಿ (ಗ್ರಾಮ ಪಂಚಾಯಿತಿ ಸದಸ್ಯರು) ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 95 ಕ್ಕಿಂತ ಹೆಚ್ಚು ಜನರು ಹಾಗೂ ಅಂಗನವಾಡಿ ಸಿಬ್ಬಂದಿಗಳು ಭಾಗವಹಿಸಿದರು.