ತುಳಿತಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿದ ಮಹಾತ್ಮ : ಕೆ. ಎಸ್ ಈಶ್ವರಪ್ಪ
ಶಿವಮೊಗ್ಗ ಸೆಪ್ಟೆಂಬರ್ 10 : ಕೇರಳದಲ್ಲಿ ಹುಟ್ಟಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಉನ್ನತಿಗೆ ಶ್ರಮಿಸಿ, ಬಸವೇಶ್ವರ, ಕನಕದಾಸರಂತೆ ಇವರು ಸಾಮಾಜಿಕ ಬದ್ಧತೆಯಿಂದ ದೇವರುಗಳಿಗೆ ದೇವರಾಗಿದ್ದವರು ಎಂದು ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತಿಯನ್ನು ಕೆ.ಎಸ್ ಈಶ್ವರಪ್ಪ ಉದ್ಘಾಟಿಸಿ ಮಾತನಾಡಿದರು.
ಮಡಿವಂತ ವ್ಯಕ್ತಿಗಳು ಈಶ್ವರನ ದೇಗುಲಗಳನ್ನು ನಿರ್ಮಾಣ ಮಾಡುತ್ತಾರೆ. ಆದರೆ ಅಲ್ಲಿ ಹಿಂದುಳಿದವರಿಗೆ ಹಾಗೂ ದಲಿತರಿಗೆ ಪ್ರವೇಶವಿರುವುದಿಲ್ಲ ಆದ್ದರಿಂದ ನಾನೇ ಈಶ್ವರನ ದೇವಾಲಯ ನಿರ್ಮಿಸಿ ದಲಿತರಿಗೆ, ಹಿಂದುಳಿದರಿಗೆ ಪ್ರವೇಶಿಸುವಂತೆ ಮಾಡಿಸುತ್ತೇನೆ ಎಂದು ಬ್ರಹ್ಮಶ್ರೀಗಳು ಹೇಳಿದಂತೆ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದು ಹೇಳಿದರು.
ಮಹಾ ಪುರಷರನ್ನೂ ಜಾತಿಗಳಿಗೆ ಸೀಮಿತಗೊಳಿಸಿ ಅವರ ಹೆಸರಿಗೆ ದಕ್ಕೆ ತರಬಾರದು .ಎಲ್ಲ ಮಹನೀಯರು ಜಾತಿ ಮೀರಿ ಕೆಲಸ ಮಾಡಿದ್ದಾರೆ. ಆದ್ದರಿಂದ ನಾವುಗಳು ಕಟ್ಟ ಕಡೆಯ ವ್ಯಕ್ತಿಗಳನ್ನು ಸಮಾಜದ ಮುನ್ನೆಲೆಗೆ ತರುವಂತ ಕೆಲಸ ಮಾಡಿದರೆ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಮೀಸಲಾತಿ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಅನೇಕ ಪ್ರಬಲ ಸಮುದಾಯದವರು ಮೀಸಲಾತಿ ಕೇಳುತ್ತಿರುವುದು ದುರದೃಷ್ಟಕರ.ಮೀಸಲಾತಿಯನ್ನು ಕಡು ಬಡವರಿಗೆ, ನಿರ್ಗತಿಕರಿಗೆ ಹಾಗೂ ಕೆಳವರ್ಗದ ಜನರಿಗೆ ತಲುಪಿಸುವ ಬದಲಾಗಿ ಉಳ್ಳವರೆ ಮೀಸಲಾತಿಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ವಿಷಾದಿಸಿದರು.
ನಾರಯಣ ಗುರುಗಳ ಕುರಿತು ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಅದ ಎಂ ಎಸ್ ಹರೀಶ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಅಧ್ಯಕ್ಷರಾದ ಎನ್.ಜಿ ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯರಾದ ಲಕ್ಷ್ಮಿ ಶಂಕರ್ ನಾಯ್ಕ್, ಜಿ. ಪಂ.ಉಪಾಧ್ಯಕ್ಷ ದೊಡ್ಡಪ್ಪಗೌಡ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್ ಹೊನ್ನಳಿ, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷರಾದ ಆರ್.ಶ್ರೀಧರ್ ಹುಲ್ತಿಕೊಪ್ಪ ಹಾಗೂ ಸಮಾಜದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.