ಶಿವಮೊಗ್ಗ ಸೆಪ್ಟೆಂಬರ್ 6 : ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಅಂಗವಾಗಿ ರೈತರ ಮನೆ ಬಾಗಿಲಿಗೆ ಬೆಳೆ ವಿಮೆ ಪಾಲಿಸಿ ವಿತರಿಸುವ ‘ನನ್ನ ಪಾಲಿಸಿ ನನ್ನ ಕೈಯಲ್ಲಿ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 1 ರಿಂದ 27 ರವರೆಗೆ ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪಾಲಿಸಿಗಳನ್ನು ವಿತರಿಸಿದರು.
ಜಿಲ್ಲಾಧಿಕಾರಿಗಳು 05 ಜನ ರೈತರಿಗೆ ಸಾಂಕೇತಿಕವಾಗಿ ವಿಮಾ ಪಾಲಿಸಿಯನ್ನು ವಿತರಿಸಿ, ಮುಂಬರುವ ಮುಂಗಾರು ಹಂಗಾಮಿನಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಯೋಜನೆಯಡಿ ಭಾಗಿಯಾಗುವಂತೆ ತಿಳಿಸಿದರು.
ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತೆ ಕವಚ ಒದಗಿಸುವುದು ಸರ್ಕಾರದ ಸಂಕಲ್ಪವಾಗಿದ್ದು, ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವುದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ. ಈ ವಿಮಾ ಪಾಲಿಸಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಬೆಳೆ ವಿಮಾ ಪಾಲಿಸಿ ವಿತರಣಾ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.
ಸಾಲ ಪಡೆಯದ ರೈತರು ವಿಮಾ ಅರ್ಜಿ ಸಲ್ಲಿಸಿದ ವೇಳೆ ಸ್ವೀಕೃತಿ ಪಡೆದು ನೇರವಾಗಿ ವಿಮೆ ಪಾಲಿಸಿ ಪಡೆದುಕೊಳ್ಳುತ್ತಾರೆ. ಸಾಲ ಪಡೆದ ರೈತರಿಗೆ ಕೃಷಿ ಇಲಾಖೆ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿ, ಪಿಡಿಓ ಇತರೆ ಸಂಬಂಧಿಸಿದ ಅಧಿಕಾರಿಗಳು ಅವರ ಮನೆ ಬಾಗಲಿಗೆ ವಿಮೆಯನ್ನು ತಲುಪಿಸುವ ಕೆಲಸ ಮಾಡುತ್ತಾರೆ ಎಂದು ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ತಿಳಿಸಿದರು.
ಲೀಡ್ ಬ್ಯಾಂಕ್ ಅಧಿಕಾರಿ ನೆಲ್ಸನ್, ರೈತರು, ಕೃಷಿ ಇಲಾಖೆ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು