ಆ. 07ಃ ತಾಯಿಯಾಗುವುದೆಂದರೆ ನಾಟಕ ಪ್ರದರ್ಶನ
ದತ್ತು ಸ್ವೀಕಾರದ ಪಾವಿತ್ರ್ಯತೆಯ ಅನಾವರಣ
ಶಿವಮೊಗ್ಗ, ಆ. 04ಃ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮುಂದಾಗಿದ್ದು, ಬಿ.ಬೀರನ ಕೆರೆಯ ಸರ್ಕಾರಿ ಶಾಲೆಯನ್ನ 30 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಸಹಾಯದಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ 8 ಲಕ್ಷದ ವೆಚ್ಚದಲ್ಲಿ ಅಲ್ಪ ಪ್ರಮಾಣದ ಅಭಿವೃದ್ದಿ ಪಡಿಸಲಾಗಿದೆ ಎಂದು ರೋಟರಿಯ ಮಂಜುನಾಥ ಕದಮ್ ಹೇಳಿದರು.
ನಗರದ ಮೀಡಿಯಾ ಹೌಸ್ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಒಂದು ವಿಶಿಷ್ಟ ಹಾಗೂ ಅಪರೂಪದ ರಂಗ ಪ್ರಯೋಗದ ಮೂಲಕ ಸಂಗ್ರಹವಾದ ಹಣದಲ್ಲಿ ಶಾಲೆಯನ್ನು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಹಾಸನದ ರೋಟರಿ ಹೊಯ್ಸಳ, ರಂಗ ಹೃದಯ, ಜೆಸಿಐ ಶಿವಮೊಗ್ಗ ಸಹ್ಯಾದ್ರಿಗಳ ಸಂಯುಕ್ತ ಆಶ್ರಯದಲ್ಲಿ ಆ.07ರ ಭಾನುವಾರ ಸಂಜೆ 6.30ಕ್ಕೆ ಸುವರ್ಣ ಸಂಸ್ಕøತಿ ಭವನದಲ್ಲಿ ಈ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ರಘುನಂದನ್ ಮಾತನಾಡಿ, ಶಾಲೆಯಿರಲಿ, ಮಕ್ಕಳಿರಲಿ ದತ್ತು ತೆಗೆದುಕೊಳ್ಳುವುದು ಒಂದು ಪವಿತ್ರ ಕಾರ್ಯ. ಈ ಪಾವಿತ್ರತ್ಯತೆಯನ್ನು ತಾಯಿಯಾಗುವುದೆಂದರೆ ನಾಟಕ ಅನಾವರಣಗೊಳಿಸುತ್ತದೆ. ಇದು ಮಗುವಾಗಿ ಹಂಬಲಿಸುವ ಹೆಣ್ಣೊಬ್ಬಳ ಭಾವಾಭಿವ್ಯಕ್ತಿ ಎಂದು ಸ್ವಂತ ಅನುಭವನ್ನು ವಿವರಿಸಿದರು.
ತಮ್ಮ ಪತ್ನಿ, ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ರವರು ಪತ್ರಿಕೆಯೊಂದಕ್ಕೆ ಬರೆದ ಒಂದು ಲೇಖನ, ಪ್ರತಿಭಾವಂತ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ರವರ ನಿರ್ದೇಶನದಲ್ಲಿ ಏಕವ್ಯಕ್ತಿ ರಂಗ ಪ್ರಯೋಗವಾಗಿ ಈಗಾಗಲೇ ಹಾಸನದಲ್ಲಿ ಮೊದಲ ಪ್ರದರ್ಶನ ಕಂಡಿದೆ. ಎರಡನೇ ಪ್ರದರ್ಶನ, ಈಗ ಈ ಬೀರನಕೆರೆ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಸಹಾಯಾರ್ಥವಾಗಿ ಪ್ರದರ್ಶನಗೊಳ್ಳುತ್ತಿದೆ ಎಂದ ಅವರು, 1 ಗಂಟೆ 10 ನಿಮಿಷದ ಈ ಪ್ರಯೋಗ ಒಂದು ಪರಿಣಾಮಕಾರಿ ಅಭಿವ್ಯಕ್ತಿ ಎಂದರು.
ಜೆಸಿಐನ ಸತೀಶ್ಚಂದ್ರ ಮಾತನಾಡಿ, ಬಿ. ಬೀರನಕೆರೆ ಸರ್ಕಾರಿ ಶಾಲೆಯಲ್ಲಿಯೇ ತಾವೂ ಓದಿದ್ದು, ಈ ಶಾಲೆಯ ಅಭಿವೃದ್ಧಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾನ ಮನಸ್ಕರೊಂದಿಗೆ ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಚಿಂತನೆ ನಡೆದಿದೆ. ನಾಟಕವನ್ನು ವೀಕ್ಷಿಸುವುದರ ಮೂಲಕ, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಮಾಜಿ ಸಹಾಯಕ ರಾಜ್ಯಪಾಲ ಜಿ. ವಿಜಯ ಕುಮಾರ್ ಉಪಸ್ಥಿತರಿದ್ದರು.