ರೋಗಿಗಳಲ್ಲಿ ದೇವರನ್ನು ಕಾಣುತ್ತಾ ನಿಸ್ವಾರ್ಥ ಆರೋಗ್ಯ ಸೇವೆ ನೀಡಿದ ಮಹಾನ್ ಚೇತನ
ಡಾ.ಬಿ.ಸಿ.ರಾಯ್(ಬಿದಾನ್ ಚಂದ್ರರಾಯ್) ಅವರ ಸ್ಮರಣಾರ್ಥ ಪ್ರತಿ ವರ್ಷ ಜುಲೈ 1 ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
ವೈದ್ಯಕೀಯ, ವಿಜ್ಞಾನ, ರಾಜಕೀಯ, ಮನಃಶಾಸ್ತ್ರ, ಸಮಾಜ ಸೇವೆ, ಸಾಹಿತ್ಯ, ಕಲೆಗಳಲ್ಲಿ ಅಸಾಧಾರಣ ಸಾಧನೆ ಮೆರೆದವರಿಗೆ ಬಿ.ಸಿ ರಾಯ್ ಪ್ರಶಸ್ತಿ ನೀಡಿ ಗೌರವಿಸುವ ಮುಖಾಂತರ ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ. ಹೀಗೆ ಸೇವೆ ಮತ್ತು ವೃತ್ತಿಗೆ ಘನತೆ ತಂದುಕೊಟ್ಟ ಮಹಾನ್ ದಾರ್ಶನಿಕರ ನಿದರ್ಶನಗಳು ನಮ್ಮ ಮುಂದಿವೆ.
ಎಂಜಿನಿಯರ್ ಹುದ್ದೆಗೆ ಸರ್.ಎಂ.ವಿಶ್ವೇಶ್ವರಯ್ಯ, ವಿಜ್ಞಾನಕ್ಕೆ ಡಾ.ಅಬ್ದುಲ್ ಕಲಾಂ, ಸಾಹಿತ್ಯಕ್ಕೆ ಕುವೆಂಪು, ರಾಜಕಾರಣಕ್ಕೆ ಮನೋಹರ ಲೋಹಿಯಾ, ಕಲೆಗೆ ಡಾ.ರಾಜಕುಮಾರ್ಇನ್ನೂ ಅನೇಕರು ಆ ಹುದ್ದೆಗಳ ಘನತೆಗೆ ಗರಿ ಮೂಡಿಸಿದವರು.
ರೋಗಿಗಳಲ್ಲಿ ನಾನು ದೇವರನ್ನುಕಾಣುತ್ತೇನೆ ಎನ್ನುತ್ತಾ ಕೊಲ್ಕತ್ತಾದ ಗಲ್ಲಿ-ಗಲ್ಲಿಗಳಲ್ಲಿ ಸೈಕಲ್ ತುಳಿದು ರೋಗಿಗಳ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದರು ಬಿ.ಸಿ.ರಾಯ್. ಬಡವರ ಪಾಲಿನ ನಡೆದಾಡುವ ವೈದ್ಯದೇವರೆಂದೇ ಗುರುತಿಸಿಕೊಂಡಿದ್ದರು. ಹೀಗೆ ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ವೈದ್ಯ ವೃತ್ತಿಗೊಂದು ಘನತೆ ತಂದುಕೊಟ್ಟವರು. ತಮ್ಮ ಸೇವಾ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಚಿರಸ್ಮರಣೀಯರಾಗಿ ಉಳಿದ ವೈದ್ಯರುಗಳಲ್ಲಿ ಡಾ.ಬಿ.ಸಿ.ರಾಯ್ ಪ್ರಮುಖರು.
ಇವರು 1882 ರ ಜುಲೈ 1 ರಂದು ಪಾಟ್ನಾ ಬಳಿಯಿರುವ ಬಂಕೀಪುರದ ಬಡಕುಟುಂಬದಲ್ಲಿ ಜನಿಸುತ್ತಾರೆ.ಮನೆಯಲ್ಲಿ ಕಡು ಬಡತನವಿದ್ದರು ಶ್ರಮಪಟ್ಟು ಓದಿ ವೈದ್ಯಕೀಯದಲ್ಲಿ ಎಂ.ಡಿ ಪದವಿ ಪಡೆದ ಅವರು ಮುಂದೆ ಲಂಡನ್ನಿಗೆ ತೆರಳಿ ಎಂ.ಆರ್.ಸಿ.ಪಿ ಹಾಗೂ ಇಂಗ್ಲೆಂಡಿನಲ್ಲಿ ಎಫ್.ಆರ್.ಸಿ.ಎಸ್ ಪರೀಕ್ಷೆಯನ್ನು ಏಕಕಾಲಕ್ಕೆ ಮಾಡಿಕೊಂಡು 1911 ರಲ್ಲಿ ಭಾರತಕ್ಕೆ ಮರಳಿ, 1923 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತದಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ. ಆರ್.ಜಿಕಾರ್ ಮೆಡಿಕಲ್ ಕಾಲೇಜು, ವಿಕ್ಟೋರಿಯಾ ಇನ್ಸ್ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ 6ಕ್ಕೂ ಹೆಚ್ಚು ಕ್ಷಯರೋಗ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಾರ್ವಜನಿಕರಿಗಾಗಿ ಪ್ರಾರಂಭಿಸುತ್ತಾರೆ.
ವೈಜ್ಞಾನಿಕದೃಷ್ಟಿಕೋನ ಹೊಂದಿದ್ದಡಾ.ಬಿ.ಸಿ.ರಾಯ್ ಸಮಾಜದ ಉನ್ನತಿಗೆ ತಾಂತ್ರಿಕಜ್ಞಾನದ ಅಗತ್ಯತೆಯನ್ನು ಮನಗಂಡು ಖರಗ್ಪುರದಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾಸಂಸ್ಥೆಯನ್ನು ಶುರು ಮಾಡಿದರು. ರವೀಂದ್ರನಾಥ್ಠಾಗೂರ್ ನೆನಪಿಗಾಗಿ ರವೀಂದ್ರ ಭಾರತಿ ವಿಶ್ವವಿದ್ಯಾಲಯ ಹಾಗೂ1926 ರಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಚಿತ್ತರಂಜನ್ ಸೇವಾಸದನವನ್ನು ತೆರೆಯುತ್ತಾರೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಕೋಲ್ಕತ್ತಾ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಾರೆ.
ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ 1928ರಲ್ಲಿ ರಾಜಕೀಯರಂಗ ಪ್ರವೇಶಿಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯರಾಗುತ್ತಾರೆ. 1932-33 ವರೆಗೆ ಕೋಲ್ಕತ್ತಾ ಕಾಪೆರ್Çೀರೇಷನ್ ಮೇಯರ್ ಆಗಿ,1948ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯ ಮಂತ್ರಿ ಹುದ್ದೆ ಅಲಂಕರಿದ ಡಾ.ಬಿ.ಸಿ.ರಾಯ್ 3 ಬಾರಿ ಮುಖ್ಯಮಂತ್ರಿ ಆಗುವ ಮೂಲಕ ಬಡತನ, ನಿರುದ್ಯೋಗ, ಆರೋಗ್ಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತಂದರು.
ಮುಖ್ಯಮಂತ್ರಿ ಹುದ್ದೆಯಲ್ಲಿದ್ದರೂ ಕೂಡಾ ಪ್ರತಿ ದಿನ ಒಂದು ತಾಸು ವೈದ್ಯಕೀಯ ವೃತ್ತಿಗೆ ಮೀಸಲಿಟ್ಟು ತಮ್ಮ ವೃತ್ತಿ ಬೇರುಗಳನ್ನು ಮರೆಯದೇ ಆದರ್ಶ ವ್ಯಕ್ತಿತ್ವದಿಂದ ಜೀವಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮನ್ನು ತೊಡಸಿಕೊಂಡಿದ್ದ ಸಂದರ್ಭದಲ್ಲಿ ಡಾ.ಬಿ.ಸಿ.ರಾಯ್ ಅವರು ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ್, ನೇತಾಜಿ ಸೇರಿದಂತೆ ಗಣ್ಯಾತಿಗಣ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ವೈದ್ಯಕೀಯ ಉಪಚಾರ ನೀಡಿದವರು. ತಮ್ಮ ವೈಯಕ್ತಿಕ ಬದುಕಿನ ಆಶೋತ್ತರಗಳನ್ನು ಬದಿಗೊತ್ತಿ, ಯೌವನಾವಸ್ಥೆಯಿಂದಲೂ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಇವರು ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿದರು. ಇವರ ಮಹತ್ತರ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರ 1961 ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. ಒಂದು ರಾಜ್ಯದ ಮುಖ್ಯ ಮಂತ್ರಿ ಹುದ್ದೆಯಲ್ಲಿರುವಾಗಲೇ ಈ ಗೌರವಕ್ಕೆ ಭಾಜನರಾದ ಏಕೈಕ ವ್ಯಕ್ತಿ ಎಂಬ ಗರಿಮೆ ಇವರದಾಗಿದೆ.
1962 ಜುಲೈ 1 ರಾಯ್ ಅವರ ಸಾರ್ಥಕ ಬದುಕಿನ 81ನೇ ವಸಂತ, ಹೂಗುಚ್ಚ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಲು ಬಂದ ಸಹಸ್ರಾರು ಅಭಿಮಾನಿಗಳು, ಹಿತೈಷಿಗಳು ಮಂತ್ರಿ ಮಹೋದಯರಿಗೆ ಆಘಾತಕಾರಿ ಸುದ್ದಿ ಕಾದಿತ್ತು. ರಾಯ್ ಭೌತಿಕ ಪ್ರಪಂಚದಿಂದ ಬಹುದೂರ ಸಾಗಿ ಹೃದಯಾಘಾತದಿಂದ ಅಭಿಮಾನಿಗಳ ಶುಭಾಶಯ ಸ್ವೀಕರಿಸದೇ ಚಿರನಿದ್ರೆಗೆ ಜಾರಿದರು.
ಕಳೆದ 3 ವರ್ಷಗಳಿಂದಲೂ ಭಯಾನಕ ಆರೋಗ್ಯ ಸಮಸ್ಯೆಗಳನ್ನು ನಾವು ಎದುರುಗೊಂಡಿದ್ದೇವೆ. ಇಂದಿಗೂ ಕೋವಿಡ್-19 ಆತಂಕ ದೂರವಾಗಿಲ್ಲ. ಜೊತೆಗೆ ಡೆಂಗ್ಯೂ, ಚಿಕೂನ್ಗುನ್ಯ, ಟಿ.ಬಿ ಯಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಡುತ್ತಲೇ ಇವೆ. ಆರೋಗ್ಯ ಇಲಾಖೆ ಹಾಗೂ ವೈದ್ಯ ವೃಂದ ಇವುಗಳ ಹತೋಟಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಗರ್ಭಿಣಿ, ಬಾಣಂತಿ, ಮಕ್ಕಳ ಆರೋಗ್ಯ ಸುಧಾರಣೆಗಾಗಿ ಗುಣಾತ್ಮಕ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಿರಿಯ ನಾಗರೀಕರು, ವಯೋ ವೃದ್ಧರು ಹಾಗೂ ವಿಕಲಚೇತನರಿಗೆ ಆದ್ಯತೆ ಮೇರೆಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಂಕ್ರಾಮಿಕರೋಗ ನಿಯಂತ್ರಣ, ತಪಾಸಣೆ, ಚಿಕಿತ್ಸೆ ಮತ್ತು ಔಷಧಿಗಳ ಲಭ್ಯತೆಗೆ ಹೆಚ್ಚು ನಿಗಾವಹಿಸಲಾಗಿದೆ. ಅತ್ಯವಶ್ಯಕ ತುರ್ತು ಔಷಧಿಗಳ ದಾಸ್ತಾನು ಇರುವಂತೆ ಕ್ರಮವಹಿಸಲು ಆಡಳಿತ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ.
ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ, ಜನನಿ ಶಿಶು ಸುರಕ್ಷಾ, ಜನನಿ ಸುರಕ್ಷಾ ಯೋಜನೆ, 108 ಸೇವೆ ಮುಂತಾದ ಯೋಜನೆಯ ಸೌಲಭ್ಯ ಸಾರ್ವಜನಿಕರಿಗೆ ಸುಲಭವಾಗಿ ದೊರೆಯಲು ಸೂಕ್ತ ನಿರ್ದೇಶನ ನೀಡಲು ಜಿಲೆ ್ಲಎಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು ಹೆಚ್ಚು ನಿಗಾ ವಹಿಸುತ್ತಿದ್ದಾರೆ. ಎಲ್ಲಾ ನಿಟ್ಟಿನಲ್ಲೂ ಇಲಾಖೆಯು ಶಿವಮೊಗ್ಗ ಜಿಲ್ಲೆಯನ್ನು ಆರೋಗ್ಯ ಕ್ಷೇತ್ರದ ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸುವ ಮಾರ್ಗದಲ್ಲಿ ಕಾರ್ಯ ಪ್ರವೃತ್ತವಾಗಿದೆ.
ಬದಲಾದ ಈ ಕಾಲಘಟ್ಟದಲ್ಲಿ ವೃತ್ತಿಘನತೆ ಮತ್ತು ಮೌಲ್ಯಗಳು ಹಿನ್ನೆಲೆಗೆ ಸರಿದು ಹಣಗಳಿಕೆಯೇ ಮುನ್ನೆಲೆಗೆ ಬಂದಿದೆ. ವೈದ್ಯಕೀಯ ಕಾಯಕ ಪವಿತ್ರವಾದುದು, ವೈದ್ಯಕೀಯ ತತ್ವಗಳಿಗೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವುದು, ವೈದ್ಯ ಸಮೂಹದ ಆದ್ಯತೆಯಾಗಬೇಕು, ಚಿಕಿತ್ಸೆ ನೀಡುವ ವೈದ್ಯರನ್ನು ಹೊರತುಪಡಿಸಿ ಯಾವ ಶ್ರೇಷ್ಠರೂ ರೋಗಿಗಳ ಪಾಲಿಗೆ ದೇವರಾಗಿ ಕಾಣುವುದಿಲ್ಲ. ಬಡವರು, ನಿರ್ಗತಿಕರು, ವೃದ್ಧರು, ಅಸಹಾಯಕ ಮಕ್ಕಳು, ಮಹಿಳೆಯರಿಗೆ ನೀಡುವ ಮಾನವೀಯ ಸ್ಪರ್ಶ ಉಳಿದೆಲ್ಲ ಸೇವೆಗಿಂತಲೂ ಹಿರಿದಾದುದು. ಇಂತಹ ಪವಿತ್ರ ಕಾರ್ಯದ ಅವಕಾಶವನ್ನು ಸಾರ್ಥಕಗೊಳಿಸುವುದರ ಮುಖಾಂತರ ದಾರ್ಶನಿಕರ ದಿನಾಚರಣೆಗಳನ್ನು ಸಾಕ್ಷಾತ್ಕಾರಗೊಳಿಸೋಣ.
ವೈದ್ಯರ ದಿನದ ಈ ಶುಭ ಸಂದರ್ಭದಲಿ ್ಲಆರೋಗ್ಯಕರ ಶಿವಮೊಗ್ಗ ಜಿಲ್ಲೆಗಾಗಿ ನನ್ನ ಎಲ್ಲಾ ವೈದ್ಯ ಸಮೂಹ ಹೆಜ್ಜೆ ಹಾಕಲಿದೆ ಎಂಬ ಸದಾಶಯದೊಂದಿಗೆ ಸಮಸ್ತ ವೈದ್ಯ ಬಳಗಕ್ಕೆ ರಾಷ್ಟ್ರೀಯ ವೈದ್ಯರ ದಿನದ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಾ ಹಾಗೂ ಇಲಾಖೆಯ ಪ್ರಗತಿಗೆ ನಮ್ಮೊಂದಿಗೆ ಹೆಗಲು ನೀಡುತ್ತಿರುವ ಆತ್ಮೀಯ ಎಲ್ಲಾ ಸಿಬ್ಬಂದಿಗಳಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಡಾ|| ರಾಜೇಶ್ ಸುರಗಿಹಳ್ಳಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ, ಶಿವಮೊಗ್ಗ