ಸಾರ್ವಜನಿಕ ಸೇವೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ : ಎಡಿಜಿಪಿ
ಶಿವಮೊಗ್ಗ ಜೂ.10: ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶ ನೀಡುವ ಹಾಗೂ ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ತಮಗೆ ಹುದ್ದೆ ದೊರೆತಿರುವುದು ಅದೃಷ್ಟ. ಇಂತಹ ಸಾರ್ವಜನಿಕ ಸೇವೆಯ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್‍ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್.ಹಿತೇಂದ್ರ ಕರೆ ನೀಡಿದರು.
8ನೇ ಪಡೆ, ಕೆಎಸ್‍ಆರ್‍ಪಿ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿ ಇಂದು ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವತಿಯಿಂದ ಹೆಚ್ಚುವರಿ ಪೊಲೀಸ್ ತರಬೇತಿ ಶಾಲೆ, 7ನೇ ಪಡೆ ಮಂಗಳೂರು ಮತ್ತು ಹೆಚ್ಚುವರಿ ಪೊಲೀಸ್ ತರಬೇತಿ ಶಾಲೆ 8ನೇ ಪಡೆ ಶಿವಮೊಗ್ಗ ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನ ಇಲಾಖೆಯಾಗಿದ್ದು ತಾವು ಶಿಸ್ತಿನ ಸಿಪಾಯಿಗಳೆಂಬುದನ್ನು ಮರೆಯದೆ ಸಾರ್ವಜನಿಕರಿಗೆ, ಅಶಕ್ತರಿಗೆ ಸಹಾಯ ಮಾಡಬೇಕು. ನಿಮ್ಮಿಂದ ಸಾರ್ವಜನಿಕರು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತಾರೆ. ಈ ನಿಟ್ಟಿನಲ್ಲಿ ತಾವು ಸನ್ನದ್ದರಾಗಿರಬೇಕು.

ಪ್ರಶಿಕ್ಷಣಾರ್ಥಿಗಳಾಗಿದ್ದ ವೇಳೆ ಅನೇಕ ರೀತಿಯ ಒಳಾಂಗಣ ಮತ್ತು ಹೊರಾಂಗಣ ತರಬೇತಿ ನೀಡಲಾಗಿದ್ದು, ಇದೇ ದೈಹಿಕ ಸದೃಢತೆಯನ್ನು ಉಳಿಸಿಕೊಂಡು ಹೋಗಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಉತ್ತಮ ಮನಸ್ಸು ಇರುತ್ತದೆ. ಯಾವುದೇ ದುಶ್ಚಟಗಳಿಗೆ ಬೀಳದೆ ಶ್ರದ್ದೆಯಿಂದ ಕರ್ತವ್ಯ ನಿರ್ವಹಿಸಬೇಕು. ಉನ್ನತ ವಿದ್ಯಾಭ್ಯಾಸ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ತಮಗೆಲ್ಲ ಇನ್ನೂ ಒಳ್ಳೆಯ ಹುದ್ದೆ ಲಭಿಸಲಿ. ಇಲಾಖೆಯಲ್ಲಿನ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿರಿ ಎಂದು ಸಲಹೆ ನೀಡಿದರು.

ಉನ್ನತ ವಿದ್ಯಾಭ್ಯಾಸ ಪಡೆದ ಪ್ರಶಿಕ್ಷಣಾರ್ಥಿಗಳು…….

ಪ್ರಸ್ತುತ ನಿರ್ಗಮಿತ 224 ಪ್ರಶಿಕ್ಷಣಾರ್ಥಿಗಳಲ್ಲಿ ಹೆಚ್ಚಿನವರು ಉನ್ನತ ವಿದ್ಯಾಭ್ಯಾಸ ಮಾಡಿರುವುದು ವಿಶೇಷವಾಗಿದೆ. 14 ಪ್ರಶಿಕ್ಷಣಾರ್ಥಿಗಳು ಸ್ನಾತಕೋತ್ತರ ಪದವೀಧರರು, 14 ಜನರು ಇಂಜಿನಿಯರ್ ಪದವೀಧರರು, 120 ಜನರು ಪದವೀಧರರು, 62 ಪದವಿಪೂರ್ವ, 01 ಐಟಿಐ, 05 ಡಿಪ್ಲೊಮಾ ಹಾಗೂ 08 ಪ್ರಶಿಕ್ಷಣಾರ್ಥಿಗಳು ಎಸ್‍ಎಸ್‍ಎಲ್ ವಿದ್ಯಾರ್ಹತೆ ಹೊಂದಿದ್ದಾರೆ.

ಕೆಎಸ್‍ಆರ್‍ಪಿ ಮಹಾ ನಿರ್ದೇಶಕರು ಪಥ ಸಂಚಲನ ಪರಿವೀಕ್ಷಣೆ ಮಾಡಿದರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಹಾಗೂ ಇದೇ ಸಂದರ್ಭದಲ್ಲಿ ವಾರ್ತಾ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಕೆಎಸ್‍ಆರ್‍ಪಿ ಹೆಚ್ಚುವರಿ ತರಬೇತಿ ಶಾಲೆ, 8ನೇ ಪಡೆಯ ಕಮಾಂಡೆಂಟ್ ಬಿ.ಡಿ.ಲೋಕೇಶ್ ವರದಿ ವಾಚನ ಮಾಡಿದರು. ಕೆಎಸ್‍ಆರ್‍ಪಿ ಹೆಚ್ಚುವರಿ ತರಬೇತಿ ಶಾಲೆ, 7ನೇ ಪಡೆಯ ಕಮಾಂಡೆಂಟ್ ಬಿ.ಎಂ.ಪ್ರಸಾದ್ ನಿರ್ಗಮನ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ನಿರ್ಗಮನ ಪ್ರಶಿಕ್ಷಣಾರ್ಥಿಗಳ ಶಿಸ್ತಿನ ಮತ್ತು ಕ್ರಮಬದ್ದ ಪಥ ಸಂಚಲನ, ವಾದ್ಯಮೇಳ, ಕನ್ನಡದಲ್ಲಿ ನೀಡಿದ ಕವಾಯತು ಆದೇಶ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯಿತು.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್‍ನ ಉಪ ಪೊಲೀಸ್ ಮಹಾ ನಿರೀಕ್ಷಕರಾದ ಎಂ.ವಿ.ರಾಮಕೃಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಬಿ.ಎಂ, ಇತರೆ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!