ನಮ್ಮ ಶಕ್ತಿಯಿಂದೋಡುವ ಸೈಕಲ್ ಸವಾರಿ ಮಾಡೋಣ’
ಶಿವಮೊಗ್ಗ ಜೂನ್ 02: ಆಬಾಲವೃದ್ದರವರೆಗೆ ಇಷ್ಟವಾಗುವ ಜನಪ್ರಿಯ ವಾಹನ ಬೈಸಿಕಲ್. ಪ್ರತಿಯೊಬ್ಬರ ಬಾಲ್ಯದಲ್ಲೂ ಸೈಕಲ್ ಕಲಿಯುವಾಗ ಆಗುವ ಗಾಯದ ನೆನಪು ಮತ್ತು ಅದರಿಂದ ಪಡೆದ ವಿಶೇಷ ಅನುಭವ, ಸ್ನೇಹಿತರ ಜೊತೆಗಿನ ಬೈಸಿಕಲ್ ಸವಾರಿ ಅವಿಸ್ಮರಣೀಯ.
ಬೈಸಿಕಲ್ ಕೊಳ್ಳಲೂ ಕಷ್ಟವಿದ್ದ ಕಾಲದಲ್ಲಿ ಗಂಟೆಗೆ ಇಂತಿಷ್ಟು ಹಣವನ್ನು ನೀಡಿ ಸೈಕಲನ್ನು ಬಾಡಿಗೆ ಪಡೆದು ಊರುಗಳನ್ನು ಸುತ್ತಾಡಿದ ನೆನಪುಗಳು ಒಂದು ಕ್ಷಣ ಬಾಲ್ಯಕ್ಕೆ ಮತ್ತೆ ಕರೆದುಕೊಂಡು ಹೋಗುತ್ತವೆ. ಮೈಕೆಲ್ ಪಾಲೆನ್ ಅವರು “ನನ್ನ ಜೀವನದ ಪ್ರಮುಖ ದಿನಗಳಲ್ಲಿ ಒಂದು, ನಾನು ಬೈಸಿಕಲ್ ಸವಾರಿ ಮಾಡಲು ಕಲಿತಾಗ” ಎಂದು ಹೇಳುವಂತೆ ಎಲ್ಲರ ಜೀವನದಲ್ಲೂ ಬೈಸಿಕಲ್ ಕಲಿಯುವಾಗ ಆಗುವ ಅನುಭವಗಳು ವಿಶೇಷವಾಗಿರುತ್ತದೆ.
ವಿಶ್ವ ಬೈಸಿಕಲ್ ದಿನವನ್ನು ಪ್ರತಿ ವರ್ಷ ಜೂನ್ 3 ರಂದು ಆಚರಿಸಲಾಗುತ್ತದೆ. ಇದರ ಕೀರ್ತಿ ಅಮೇರಿಕಾ ಮೂಲದ ಪೆÇ್ರಫೆಸರ್ ಲೆಸ್ಜರ್ ಸಿಬಿಲ್ಸ್ಕಿ ಅವರಿಗೆ ಸಲ್ಲುತ್ತದೆ. ಇವರು ಯುನೈಟೆಡ್ ನೇಷನ್ಸ್ ವಿಶ್ವ ಬೈಸಿಕಲ್ ದಿನಾಚರಣೆಯ ಕುರಿತು ನಿರ್ಣಯ ಕೈಗೊಳ್ಳಲು ತಳಮಟ್ಟದಲ್ಲಿ ಅಭಿಯಾನ ನಡೆಸಿದ ಶ್ರಮದ ಫಲವಾಗಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2018 ರಲ್ಲಿ ಪ್ರತಿ ವರ್ಷ ಜೂನ್ 3 ರಂದು ವಿಶ್ವ ಬೈಸಿಕಲ್ ದಿನವಾಗಿ ಆಚರಿಸಲು ಘೋಷಿಸಲಾಯಿತು.
ಇಂಧನ ಉಳಿತಾಯ, ಪರಿಸರ ಸಂರಕ್ಷಣೆ, ಆರ್ಥಿಕ ಉಳಿತಾಯ, ಆರೋಗ್ಯಕರ ಜೀವನ, ಮಾನಸಿಕ ಉಲ್ಲಾಸದೊಂದಿಗೆ ಹವಾಮಾನದ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳನ್ನು ತಿಳಿಸುವ ಮೂಲಕ ಬೈಸಿಕಲ್ ಸವಾರಿಯನ್ನು ಜನಪ್ರಿಗೊಳಿಸುವ ಉದ್ದೇಶದಿಂದ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ.
ಎಲ್ಲರೂ ಕೊಳ್ಳಬಹುದಾದ ಸೈಕಲ್‍ಗಳಲ್ಲಿ ತರಹೇವಾರಿ ಬಗೆ. ಸಾಮಾನ್ಯ ಸೈಕಲ್‍ನಿಂದ ಹಿಡಿದು ಕ್ರೀಡಾ ಸ್ಪರ್ದೆಯವರೆಗೆ ಅವುಗಳ ಬೆಲೆಗೆ ಅನುಗುಣವಾಗಿ ಇರುತ್ತವೆ. ಬೇರೆ ದೇಶಗಳಲ್ಲಿ ಶ್ರೀಮಂತರು ಕಛೇರಿಗಳಿಗೆ ತೆರಳಲು ಬೈಸಿಕಲ್‍ಗಳನ್ನೆ ಬಳಸುತ್ತಾರೆ. ಆದರೆ ನಮ್ಮಲ್ಲಿ ಪ್ರತಿμÉ್ಠಗೆ ಬಿದ್ದು ಬಳಸುತ್ತಿರಲಿಲ್ಲ. ಇದು ಕೇವಲ ಮಕ್ಕಳು ಬಳಸುವ ಸಾಧನವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಮಾಯವಾಗಿದ್ದ ಬೈಸಿಕಲ್‍ಗಳು ಮನೆಗಳಿಂದ ಹೊರ ಬರುತ್ತಿದ್ದು, ಸೈಕಲ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಭಾರತದಲ್ಲಿ ಇಂಧನದ ಬೆಲೆ ಲೀಟರ್ ಒಂದಕ್ಕೆ ರೂ.100 ಗಡಿ ದಾಟಿದಾಗ ವಾಹನ ಸವಾರರು ತಮ್ಮ ಕಾರು, ಬೈಕ್‍ಗಳನ್ನು ಮೂಲೆಗ ಸರಿಸಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿರುವುದನ್ನು ಕಾಣಬಹುದು. ಆದರೆ ಅದು ನಡೆಯಲು ವಿದ್ಯುತ್ ಎಂಬ ಶಕ್ತಿ ಬೇಕು. ಬೈಸಿಕಲ್‍ಗೆ ಹಾಗಲ್ಲ ದೇಹದಲ್ಲಿ ಶಕ್ತಿಯಿದ್ದರೆ ಸಾಕು ಸೈಕಲ್ ಮುಂದೆ ನಡೆಯುತ್ತದೆ. ಬೈಸಿಕಲ್ ಇಂಧನದ ಹೊರೆ ಇಳಿಸುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಸಹಕಾರಿಯಾಗಿದೆ
ಅಮೇರಿಕಾದಲ್ಲಿ ಶೇ.12.4 ರಷ್ಟು ಬೈಸಿಕಲ್‍ಗಳನ್ನು ಉತ್ಪಾದಿಸಲಾಗುತ್ತದೆ. ಟಂಡಮ್ ಬೈಕ್ 67 ಅಡಿ ಉದ್ದವಿದ್ದು, 35 ಆಸನಗಳನ್ನು ಒಳಗೊಂಡಿದೆ. ಇದು ವಿಶ್ವದ ಅತಿ ಉದ್ದವಾದ ಬೈಸಿಕಲ್ ಆಗಿದೆ. ಡೆನ್ಮಾರ್ಕ್ ದೇಶದಲ್ಲಿ ಪ್ರತಿ 10 ಜನರಿಗೆ 9 ಜನರು ಬೈಸಿಕಲ್ ಬಳಸುವುದರಿಂದ ಪ್ರಪಂಚದಲ್ಲಿ ಅತಿ ಹೆಚ್ಚು ಸೈಕಲ್ ಬಳಸುವ ರಾಷ್ಟ್ರವಾಗಿದೆ.

ಬೈಸಿಕಲ್‍ನಿಂದಾಗುವ ಅನುಕೂಲಗಳು:
ಸೈಕ್ಲಿಂಗ್ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧರಿಸಲು ಸಾಧ್ಯವಾಗುತ್ತದೆ .ಸೈಕ್ಲಿಂಗ್ ಮಾಡುವುದರಿಂದ ಮಾನಸಿಕ ಒತ್ತಡ, ಖಿನ್ನತೆ, ತೂಕ ಮತ್ತು ಭಯ ಅಥವಾ ಗಾಬರಿಯಂತಹ ಭಾವನೆಗಳನ್ನು ನಿವಾರಿಸಿ ಮನಸ್ಸಿಗೆ ಉತ್ಸಾಹ ನೀಡುತ್ತದೆ. ಸೈಕಲ್ ತುಳಿಯುವಾಗ ನಮ್ಮ ಗಮನ ರಸ್ತೆ ಮೇಲೆ ಕೇಂದ್ರೀಕರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಹೃದಯದ ರಕ್ತನಾಳಗಳು ಉತ್ತಮಗೊಳ್ಳುವುದರಿಂದ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಕಾನ್ಸರ್ ರೋಗಿಗಳಿಗೆ ಸೈಕ್ಲಿಂಗ್ ಒಳ್ಳೆಯದು:
ಕ್ಯಾನ್ಸರ್ ಬಂದು ಚೇತರಿಸಿಕೊಳ್ಳುತ್ತಿರುವವರಿಗೆ ಸೈಕ್ಲಿಂಗ್ ಉತ್ತಮ ಆಯ್ಕೆ. ಇದರಿಂದ ದೇಹ ಸದೃಢವಾಗುವುದರ ಜೊತೆಗೆ ತೂಕ ಕಡಿಮೆ ಮಾಡಬಹುದು. ಇದು ಸ್ತನ ಕ್ಯಾನರ್ ಮುಂತಾದ ರೋಗಗಳು ಬರದಂತೆ ತಡೆಗಟ್ಟಿ ಅಪಾಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. 2019ರ ಸಂಶೋಧನೆಯ ಪ್ರಕಾರ ನಿಯಮಿತವಾಗಿ ತುಳಿಯುವುದರಿಂದ ಅಪಾಯದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಜೀವನ ಮಟ್ಟವನ್ನು ಸುಧಾರಿಸಬಹುದು.

  ಸೈಕ್ಲಿಂಗ್ ಮಾಡುವುದರಿಂದ ಕಾರ್ಡಿಯೋವಾಸ್ಕುಲರ್ ಡಿಸೀಸ್ (ಸಿವಿಡಿ) ಅಥವಾ ಸ್ಟ್ರೋಕ್ ಆಗುವ ಸಾಧ್ಯತೆ ಕಡಿಮೆ ಇದೆ ಎಂದು ಬ್ರಿಟನ್‍ನ ಸಂಶೋಧನೆಯು ತಿಳಿಸಿದೆ. ಸೈಕ್ಲಿಂಗ್‍ನಿಂದ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡೆನ್ಮಾರ್ಕ್ ಯುನಿವರ್ಸಿಟಿಯ ಸಂಶೋಧನೆಯು ಬಹಿರಂಗ ಪಡಿಸಿದೆ.

ಬೈಸಿಕಲ್ ಸವಾರರು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳು:
ಬೈಸಿಕಲ್ ತುಳಿಯುವಾಗ ಕೆಲವು ತಪ್ಪು ಮಾಡಿದರೆ ಗಾಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಕೆಲವು ಮುಂಜಾಗ್ರತೆ ಕ್ರಮಗಳನ್ನು ಅನುಸರಿಬೇಕು. ಎತ್ತರಕ್ಕೆ ಸರಿಹೊಂದುವಂತಹ ಸೈಕಲ್‍ನ್ನು ಆಯ್ಕೆ ಮಾಡಿಕೊಳ್ಳಬೇಕು ಇಲ್ಲವಾದರೆ ಸ್ನಾಯುಗಳಿಗೆ ಮತ್ತು ಅಂಗಾಂಶಗಳಿಗೆ ತೊಂದರೆಯಾಗಿ ಬೆನ್ನು ನೋವು ಬರಬಹುದು. ಸಮರ್ಪಕ ಬಟ್ಟೆಗಳು, ಹೆಲ್ಮೆಟ್ ಮತ್ತು ಶೂಗಳನ್ನು ಧರಿಸಬೇಕು. ಖಾಲಿ ಹೊಟ್ಟೆಯಲ್ಲಿ ಸೈಕ್ಲಿಂಗ್ ಮಾಡಬಾರದು ಇದರಿಂದಾಗಿ ಸಕ್ಕರೆ ಮಟ್ಟವು ಏರಿಕೆಯಾಗಬಹುದು. ಆದ್ದರಿಂದ ಬಾಯಾರಿಕೆ ಆದಾಗ ಧಣಿವಾರಿಸಿಕೊಳ್ಳಲು ಒಂದು ಬಾಟಲಿಯಲ್ಲಿ ನೀರನ್ನು ಮರೆಯದೆ ಕೊಂಡೊಯ್ಯಬೇಕು. ಸೈಕಲ್‍ನ ಸವಾರಿ ಮಾಡುವಾಗ ಅತಿಯಾದ ವೇಗದಲ್ಲಿ ಹೋಗಬಾರುದು ಜೊತೆಗೆ ಅಗತ್ಯಕಿಂತ ಅತಿಯಾಗಿ ಸೈಕ್ಲಿಂಗ್ ಮಾಡಬಾರದು.

  ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಸ್ಮಾರ್ಟ್ ಸಿಟಿ  ಮಿಷನ್ ಮೂಲಕ  ದೇಶದ 100 ಸ್ಮಾರ್ಟ್ ಸಿಟಿಗಳು ಬೈಸಿಕಲ್ ಪಥ ಗಳನ್ನೂ ನಿರ್ಮಿಸುತ್ತಿದ್ದು, ಸೈಕಲ್ ಸವಾರಿಗೆ ಉತ್ತೇಜನ ನೀಡುತ್ತಿದೆ. ಶಿವಮೊಗ್ಗದಲ್ಲಿ 8 ಸ್ಮಾರ್ಟ್ ರೋಡ್ ಪ್ಯಾಕೇಜ್ ಗಳಿಂದ 120 ಕಿ.ಮಿ ರಸ್ತೆಯನ್ನು ಸೈಕಲ್ ಸವಾರರಿಗೋಸ್ಕರ ಬೈಸಿಕಲ್ ಪಥಗಳನ್ನು ನಿರ್ಮಿಸಲಾಗುತ್ತಿದೆ. 

   ಬೈಸಿಕಲ್   ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಲು ಸಹಕರಿಸುವ ಪರಿಸರಸ್ನೇಹಿ ವಾಹನವಾಗಿದ್ದು, ಪ್ರತಿನಿತ್ಯ ಬೈಸಿಕಲ್ ಓಡಿಸುವುದನ್ನು ರೂಢಿಸಿಕೊಳ್ಳುವ ಮೂಲಕ  ಪರಿಸರದ ಸ್ವಾಸ್ಥ್ಯ ಕಾಪಾಡಿಕೊಳ್ಳುವದರ ಜೊತೆಗೆ  ನಮ್ಮ  ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಾ ವಿಶ್ವ ಬೈಸಿಕಲ್ ದಿನವನ್ನು ಆಚರಿಸೋಣ.

ವರದಿ;
ಭರತ್ ಎಂ ಎಸ್, 8861197602
ಅಪ್ರೆಂಟಿಸ್ ವಾರ್ತಾ ಇಲಾಖೆ, ಶಿವಮೊಗ್ಗ

error: Content is protected !!