ಶಿವಮೊಗ್ಗ, ಮೇ 23 : ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು, 2022ರ ಆಸ್ಪತ್ರೆಯ ವಿಭಾಗಗಳಲ್ಲಿ ನೀಡುವ “ನರ್ಸಿಂಗ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಹಲವಾರು ಮಾನದಂಡಗಳಲ್ಲಿ ಕೇಂದ್ರದಿಂದ (ದೆಹಲಿ) ಬಂದಂತಹ ರಾಷ್ಟ್ರಮಟ್ಟದ ಎನ್.ಎ.ಬಿ.ಹೆಚ್ ಮಾಪನಾ ತಂಡವು ಎಲ್ಲಾ ವಿಭಾಗಗಳಲ್ಲೂ ನಮ್ಮ ನರ್ಸಿಂಗ್ ವ್ಯವಸ್ಥೆಯನ್ನು ಪರಿಗಣನೆ ಮಾಡಿ ಎಲ್ಲಾ ಮಾನದಂಡಗಳಲ್ಲಿ ಪ್ರಮುಖವಾಗಿ (ರೋಗಿಗಳಿಗೆ ನೀಡುವ ಅತ್ಯುತ್ತಮ ಆರೋಗ್ಯ ಸೇವೆ ಮತ್ತು ಸುರಕ್ಷತೆ) ಹಾಗೂ ಇತರೆ ಪರೀಕ್ಷೆಗಳನ್ನು ನಡೆಸಿ ಹಾಗೂ ನಮ್ಮ ನರ್ಸಿಂಗ್ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಪರಿಗಣಿಸಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅತ್ಯುತ್ತಮ “ನರ್ಸಿಂಗ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈ ಪ್ರಶಸ್ತಿಯನ್ನು ಪಡೆದ ಶಿವಮೊಗ್ಗ ನಗರದ ಏಕೈಕ ಆಸ್ಪತ್ರೆಯಾಗಿದೆ. ಕಳೆದ 10 ವರ್ಷಗಳಿಂದ ವಿಶ್ವ ಮಟ್ಟದ ಆರೋಗ್ಯ ಸೇವೆಯನ್ನು ನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನತೆಗೆ ಒದಗಿಸುತ್ತಾ ಬಂದಿದೆ. ಈ ಕಾರ್ಯ ವೈಖರಿಗೆ ಸಂದಿರುವ ಪ್ರಶಸ್ತಿಯು ಆಸ್ಪತ್ರೆಯ ಹಿರಿಮೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ
ಈ ಸುಸಂದರ್ಭದಲ್ಲಿ 2021ರ ದಾದಿಯರ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರವು ನೀಡುವ “ಫ್ಲೋರೆನ್ಸ್ ನೈಟಿಂಗೇಲ್” ಪ್ರಶಸ್ತಿಯನ್ನು ಶಿವಮೊಗ್ಗ ನಗರದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಹಿರಿಯ ಶುಶ್ರೂಶಕಿಯಾದ ಶ್ರೀಮತಿ ಗಂಗಮ್ಮ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶ್ರೀಮತಿ ಗಂಗಮ್ಮ ಅವರು 1986ರಿಂದ ತಮ್ಮ ಶುಶ್ರೂಶಕಿ ವೃತ್ತಿಯನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಿಂದ ಪ್ರಾರಂಭಿಸಿ ನಂತರ 1990ರಿಂದ ಶಿವಮೊಗ್ಗ ನಗರದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಮುಂದುವರಿಸಿ ಮುಂಬಡ್ತಿ ಪಡೆಯುತ್ತಾ ಹಿರಿಯ ಶುಶ್ರೂಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಜನ ಪರ ಕಾಳಜಿ ಮತ್ತು ರೋಗಿಗಳ ಹಿತಗೋಸ್ಕರ ಮಿಡಿಯುವ ವಿಶಾಲ ಹೃದಯವಂತರಾಗಿದ್ದಾರೆ. ಹಾಗೆಯೇ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲೂ ಕಾರ್ಯ ನಿರ್ವಹಿಸಿ ಎಲ್ಲರ ನೆಚ್ಚಿನ ಮಾರ್ಗದರ್ಶಕಿಯಾಗಿದ್ದಾರೆ. ಇವರ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು ಶ್ರೀಮತಿ ಗಂಗಮ್ಮ ಅವರಿಗೆ ವೈದ್ಯಕೀಯ ನರ್ಸಿಂಗ್ ವಿಭಾಗದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ “ಫ್ಲೋರೆನ್ಸ್ ನೈಟಿಂಗೇಲ್” ಪ್ರಶಸ್ತಿಯನ್ನು 2021ರಲ್ಲಿ ನೀಡಿ ಗೌರವಿಸಿದೆ.
ಈ ಸುದಿನದಂದು ಶ್ರೀಮತಿ ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಹಾಗೂ ಆಸ್ಪತ್ರೆಯ ಸರಿಸುಮಾರು 250ಕ್ಕೂ ಹೆಚ್ಚಿನ ಎಲ್ಲಾ ನರ್ಸಿಂಗ್ ವಿಭಾಗದ ಶುಶ್ರೂಶಕಿಯರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್, ಎಲ್ಲಾ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ನರ್ಸಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶುಶ್ರೂಶಕಿಯರನ್ನು ಅಭಿನಂದಿಸಿದರು.