ಶಿವಮೊಗ್ಗ ಮೇ 06 ಪ್ರಸ್ತುತ ಕೈಗಾರಿಕೋದ್ಯಮಿಯಾಗಲು ಅವಶ್ಯಕವಾದ ನೆರವು ಮತ್ತು ಮಾರ್ಗದರ್ಶನ ನೀಡಿ ಕೈಹಿಡಿಯುವ ವಾತಾವರಣ ಸೃಷ್ಟಿಯಾಗಿದ್ದು ಯುವ ಉದ್ಯಮಿಗಳು ಇದರ ಸದುಪಯೋಗ ಪಡೆದು ಧೈರ್ಯದಿಂದ ಮುಂದೆ ಬರಬೇಕೆಂದು ವಿಧಾನ ಪರಿಷತ್ ಶಾಸಕರಾದ ಆಯನೂರು ಮಂಜುನಾಥ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ, ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ(ಟೆಕ್ಸಾಕ್) ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಏರ್ಪಡಿಸಲಾಗಿದ್ದ ಹೊಸ ಕೈಗಾರಿಕಾ ನೀತಿ 2020-25 ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೋದ್ಯಮಿಯಾಗಲು ಹಿಂದೆ ಇದ್ದಂತಹ ಕಷ್ಟ ಮತ್ತು ಮಾರ್ಗದರ್ಶನ ಕೊರತೆ ಎರಡೂ ಈಗ ಇಲ್ಲ. ಮೊದಲು ಉದ್ಯಮ ಆರಂಭಿಸುವುದು ಹುಲಿ ಸವಾರಿ ಮಾಡಿದಷ್ಟು ಸವಾಲಿನ ಕೆಲಸವಾಗಿತ್ತು. ಆದರೆ ಈಗ ವ್ಯವಸ್ಥೆ ಬದಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವಂತಹ ಉದ್ಯಮಗಳು ಇವೆ. ಹಿಂದುಳಿದ ತಾಲ್ಲೂಕುಗಳಲ್ಲಿ ಉದ್ಯಮ ಆರಂಭಕ್ಕೆ ಪ್ರೋತ್ಸಾಹಿಸುವ ಮೂಲಕ ಕೈಗಾರಿಕೆಗಳ ವಿಕೇಂದ್ರೀಕರಣಗೊಳಿಸಲಾಗುತ್ತಿದೆ. ಹೊಸ ಪ್ರತಿಭೆಗಳಿಗೆ ಧೈರ್ಯ ನೀಡುವ ಸರ್ಕಾರಿ ನೀತಿಗಳು ಜಾರಿಯಲ್ಲಿವೆ. ಜೊತೆಗೆ ಮಾರ್ಗದರ್ಶನ ನೀಡಲು ಟೆಕ್ಸಾಕ್ನಂತಹ ಸಂಸ್ಥೆಗಳಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ವೈಯಕ್ತಿಕವಾಗಿ ಸಾಧನೆ ಮಾಡಿದ ಸಂಸ್ಥೆಗಳು ಸಾಕಷ್ಟಿವೆ, ಇವರು ಅನೇಕರ ಬದುಕಿಗೆ ಆಸರೆಯಾಗಿ ಸಾರ್ಥಕತೆ ಮೆರೆದಿದ್ದಾರೆ. ನಮ್ಮ ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡರು ಸಹ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕೈಗಾರಿಕೆಗಳು ಶಿವಮೊಗ್ಗದಲ್ಲಿ ಈ ಮಟ್ಟಕ್ಕೆ ನೆಲೆ ನಿಲ್ಲಲು ಹಿಂದಿನ ಹಿರಿಯ ಕೈಗಾರಿಕೋದ್ಯಮಿಗಳ ಶ್ರಮ ಸಾಕಷ್ಟಿದೆ ಎಂದ ಅವರು ಶಿವಮೊಗ್ಗದಲ್ಲಿ ಕೈಗಾರಿಕೆಗಳ ನಡುವೆ ಅನ್ಯೋನ್ಯ ಸಂಬಂಧವಿದೆ ಎಂದರು.
ಸಾಧಿಸುವ ಹುಚ್ಚು ಇರುವವರು ಸಾಧಿಸುತ್ತಾರೆ. ಇಂತಹ ಹುಚ್ಚುತನ ಹೊಂದಿರುವ ಸಮೂಹ ನಮ್ಮ ಜಿಲ್ಲೆಯಲ್ಲಿದೆ. ಹೊಸ ಯುವ ಉದ್ಯಮಿಗಳು ತಮ್ಮ ಆಸಕ್ತಿಯ ಕ್ಷೇತ್ರದ ಉದ್ದಿಮೆಗಳನ್ನು ಪ್ರಾರಂಭಿಸಲು ಧೈರ್ಯ ಮಾಡಿ ಮುಂದೆ ಬರಬೇಕು. ಸರ್ಕಾರದ ಸವಲತ್ತುಗಳು ಮತ್ತು ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು.
– ಆಯನೂರು ಮಂಜುನಾಥ, ವಿಧಾನ ಪರಿಷತ್ ಶಾಸಕ
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ನಮ್ಮ ಹಿಂದಿನ ಪೀಳಿಗೆಯ ಹಿರಿಯ ಉದ್ಯಮಿಗಳು ಕೃಷಿಯಾಧಾರಿತ ಶಿವಮೊಗ್ಗ ಜಿಲ್ಲೆಯಲ್ಲಿಯೂ ಉತ್ತಮ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ್ದಾರೆ.
ಯಾವುದೇ ಹೊಸ ಕೈಗಾರಿಕಾ ನೀತಿ ಜಾರಿಗೆ ಮುನ್ನ ಪ್ರಮುಖ ಅಂಶಗಳ ಕುರಿತು ಸರ್ಕಾರದ ಗಮನಕ್ಕೆ ತರಲು ಕೈಗಾರಿಕೋದ್ಯಮಿಗಳು ಕೂತು ಚರ್ಚಿಸಬೇಕು. 2025-30 ರ ಕೈಗಾರಿಕಾ ನೀತಿ ಕುರಿತು ಕೈಗಾರಿಕೋದ್ಯಮಿಗಳು ಮುಂಚಿತವಾಗಿ ಚರ್ಚಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ನಮ್ಮ ಹವಾಮಾನಕ್ಕೆ ತಕ್ಕುದಾದ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಇಂಡಸ್ಟ್ರಿಯಲ್ ಕಾರಿಡಾರ್ ಆಗುವ ನಿಟ್ಟಿನಲ್ಲಿ ವ್ಯವಸ್ಥೆಗಳು ಆಗಬೇಕು. ಹೊಸ ಕೈಗಾರಿಕಾ ನೀತಿಯು 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಿಸುವ, 20 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದು ಕೈಗಾರಿಕೆಗಳು ಬೆಂಗಳೂರಿಗೆ ಹೆಚ್ಚು ಕೇಂದ್ರೀಕೃತವಾಗದೆ ವಿಕೇಂದ್ರಿಕೃತವಾಗಬೇಕು. ಸರ್ಕಾರ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕೆಂದ ಅವರು ಪ್ರಸ್ತುತ ನಮ್ಮ ಮುಖ್ಯಮಂತ್ರಿಗಳು ವಿಕೇಂದ್ರೀಕರಣಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರಸ್ತುತ 23 ಲಕ್ಷ ಕೋಟಿ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಸೌಲಭ್ಯ ದೊರೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕೆಎಸ್ಎಸ್ಐಡಿಸಿ ಉಪಾಧ್ಯಸಕ್ಷ ಎಸ್.ದತ್ತಾತ್ರಿ ಮಾತನಾಡಿ, ನಮ್ಮ ದೇಶದ ಜಿಡಿಪಿ ಹೆಚ್ಚಿಸುವ ಶಕ್ತಿ ಕೈಗಾರಿಕೆಗಳಿಗೆ ಇದೆ. ಪ್ರಸ್ತುತ ಕೈಗಾರಿಗಳನ್ನು ಪ್ರೋತ್ಸಾಹಿಸಲು, ಸಹಾಯಹಸ್ತ ನೀಡಲು ಸರ್ಕಾರದ ವಿವಿಧ ಸಂಸ್ಥೆಗಳಿವೆ. ಪ್ರತಿ ಜಿಲ್ಲೆಗಳನ್ನು ಕ್ಲಸ್ಟರ್ಗಳನ್ನಾಗಿ ಗುರುತಿಸಲಾಗಿದ್ದು, ಜಿಲ್ಲಾವಾರು ಕೈಗಾರಿಕೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಎಸ್.ರುದ್ರೇಗೌಡರು ಮಾತನಾಡಿ, ಒಂದು ಉದ್ದಿಗೆ ಯಶಸ್ವಿಯಾಗಬೇಕಾದರೆ ಸರಿಯಾದ ತಂಡ ಕಟ್ಟಬೇಕು. ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ತೊಡಗಿಸಿಕೊಂಡಲ್ಲಿ ಉದ್ದಿಮೆ ಯಶಸ್ಸು ಕಾಣುತ್ತದೆ. ಉದಾಹರಣೆಗೆ ಹೋಳಿಗೆ ಗೌರಮ್ಮನವರ ಹೋಳಿಗೆ ಅಮೇರಿಕಾವರೆಗೆ ಹೋಗುತ್ತಿದೆ. ಸಾಗರದ ಮಂಡಿಗೆ ಕೂಡ ಪ್ರಸಿದ್ದಿ ಪಡಿದಿದೆ ಹೀಗೆ ನಮ್ಮ ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ. ಉದ್ಯಮಿಗಳು ಇನ್ನು 25 ವರ್ಷಗಳವರೆಗೆ ಹಿಂದುರಿಗಿ ನೋಡಬೇಕಾಗಿಲ್ಲ. ಆ ರೀತಿ ವಾತಾವರಣ ಇದೆ. ಸರ್ಕಾರ ಕೈಗಾರಿಕೋದ್ಯಗಳ ಜೊತೆಗಿದೆ.
ವಿದೇಶಿ ನೇರ ಹೂಡಿಕೆಯಲ್ಲಿ ಶೇ.45 ರಷ್ಟು ಹೂಡಿಕೆಯನ್ನು ನಮ್ಮ ರಾಜ್ಯದಲ್ಲಿ ಮಾಡಲಾಗಿದೆ. ಇಲ್ಲಿ ಪೂರಕವಾದ ವಾತಾವರಣದೊಂದಿಗೆ ಬುದ್ದಿವಂತ ಜನರಿದ್ದಾರೆ. ಭೂಮಿ ಕೂಡ ಸುಲಭವಾಗಿ ಸಿಗುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಮೂಲಭೂತ ಸೌಕರ್ಯಗಳು ಸಾಕಷ್ಟಿದೆ. ಆದ್ದರಿಂದ ಯುವಜನತೆ ತಮ್ಮ ಆಸಕ್ತಿದಾಯಕ ಉದ್ಯಮ ಆರಂಭಿಸಲು ಆಲೋಚಿಸಬೇಕು ಹಾಗೂ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಇದೇ ವೇಳೆ ಶಿವಮೊಗ್ಗದಲ್ಲಿ 60 ಮತ್ತು 80 ದಶಕದಲ್ಲಿ ಉದ್ದಿಮೆ ನಿರ್ಮಿಸಲು ಇದ್ದ ಸವಾಲುಗಳ ಕುರಿತು ಸ್ಮರಿಸಿದ ಅವರು ಪ್ರಸ್ತುತ ಕೈಗಾರಿಕೆ ಆರಂಭಿಸಲು ಸರ್ಕಾರದ ನೆರವು, ಟೆಕ್ಸಾಕ್, ಸಿಡಾಕ್ ಸಂಸ್ಥೆಯಂತಹ ಮಾರ್ಗದರ್ಶನ ಮತ್ತು ಉದ್ದಿಮೆಗೆ ಅವಶ್ಯಕವಾಗಿ ಬೇಕಾದ ಕೌಶಲ್ಯ ವೃದ್ದಿಸಲು ಕೌಶಲ್ಯಾಭಿವೃದ್ದಿ ಇಲಾಖೆಯೇ ಇದೆ ಎಂದರು.
ಇಂಡಸ್ಟ್ರಿಯಲ್ ಕಮಿಟಿಯ ಛೇರ್ಮನ್ ಎಂ.ರಾಜು ಸ್ವಾಗತಿಸಿದರು. ಟೆಕ್ಸಾಕ್ನ ಸಿಇಓ ರಮಾನಂದ ನಾಯಕ್ ಮಾತನಾಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಅಧಿಕ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ, ಕೈಗಾರಿಕೋದ್ಯಮಿಗಳ ಸಂಘಗಳ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಘೇವರ್ಚಂದ್, ಉಮೇಶ್ ಶಾಸ್ತ್ರಿ, ಸುರೇಶ್, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಉದ್ದಿಮೆದಾರರು, ವಿದ್ಯಾರ್ಥಿಗಳು ಹಾಜರಿದ್ದರು.