ಶಿವಮೊಗ್ಗ, ಏಪ್ರಿಲ್ 28 : ಸ್ಥಳೀಯ ರೈತಪರ ಸಂಘಟನೆಗಳು ಸಂಘಟಿತರಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಆಸಕ್ತಿಯಿಂದ ಕೋಕೋ ಮತ್ತು ಗೋಡಂಬಿ ಬೆಳೆ ಬೆಳೆದಲ್ಲಿ ಇತರೆ ವಾಣಜ್ಯ ಬೆಳೆಗಳಿಗಿಂತ ಅತ್ಯಧಿಕ ಲಾಭ ಗಳಿಸಬಹುದಾಗಿದೆ ಕೊಚ್ಚಿನ್ನ ಗೇರು ಮತ್ತು ಕೋಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ|| ವೆಂಕಟೇಶ್ ಎನ್.ಹುಬ್ಬಳ್ಳಿ ಅವರು ಹೇಳಿದರು.
ಅವರು ಇಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿ ಇವರುಗಳ ಸಂಯುಕ್ತಾಶ್ರಯದಲ್ಲಿ ನವಿಲೆಯ ಕೃಷಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಗೇರು ಮತ್ತು ಕೋಕೋ ಉತ್ಸವ-2022ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದಲ್ಲಿ ಗೋಡಂಬಿ ಬೆಳೆದ ಹೆಚ್ಚಿನ ಬೇಡಿಕೆ ಇದ್ದು, ಶೇ. 50ರಷ್ಟು ಉತ್ಪಾದನೆ ಕಡಿಮೆ ಇದೆ. ಆದ್ದರಿಂದಾಗಿ ತೋಟಗಾರಿಕೆ ಬೆಳೆಗಾರರು ಲಾಭದಾಯಕವಾಗಿರುವ ಗೋಡಂಬಿ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.
ದೇಶದ 19ರಾಜ್ಯಗಳ ಸುಮಾರು 12ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯನ್ನು ಬೆಳಯಲಾಗುತ್ತಿದೆ. ಇಲ್ಲಿನ ಸುಮಾರು 4000 ಗೇರು ಸಂಸ್ಕರಣಾ ಘಟಕಗಳಿಗೆ ಅಗತ್ಯವಾಗಿರುವ 16ಲಕ್ಷ ಮೆ.ಟನ್ ಗೋಡಂಬಿಯ ಪೈಕಿ ಶೇ. 50ರಷ್ಟನ್ನು ಮಾತ್ರ ಸ್ಥಳೀಯವಾಗಿ ಪಡೆದು ಉಳಿದ ಗೋಡಂಬಿ ನೆರೆಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಂದಾಜಿನ ಪ್ರಕಾರ ವಾರ್ಷಿಕವಾಗಿ ಕೋಕೋ ಮತ್ತು ಗೋಡಂಬಿಯ ಆಮದು ವಹಿವಾಟು ಸುಮಾರು 10,000ಕೋಟಿ ರೂ.ಗಳಾಗಲಿದೆ. ಈ ಕಚ್ಚಾ ಸರಕಿನ ಆಮದಿಗಾಗಿ ಸುಮಾರು 8000ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವ್ಯಯ ಮಾಡಲಾಗುತ್ತಿದೆ ಎಂದರು.
ಮಲೆನಾಡು ಮತ್ತು ಬಯಲುಸೀಮೆಯಲ್ಲಿಯೂ, ಫಲವತ್ತಾಗಿರದ ಮಣ್ಣನಲ್ಲಿಯೂ ಕಡಿಮೆ ವೆಚ್ಚದಲ್ಲಿ ಹಾಗೂ ಹೆಚ್ಚಿನ ನಿರ್ವಹಣೆಯ ಹೊಣೆಗಾರಿಕೆ ಇಲ್ಲದೇ ಗೇರು ಕೃಷಿಯನ್ನು ಲಾಭದಾಯಕವಾಗಿಸಬಹುದಾಗಿದೆ ಎಂದ ಅವರು, ಕೃಷಿ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯ ಅನೇಕ ಜಿಲ್ಲೆಗಳಲ್ಲಿ ಗೇರು ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಅಲ್ಲದೇ ಕೊಚ್ಚಿನ್ನ ಗೇರು ನಿರ್ದೇಶನಾಲಯದಿಂದ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ. ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳೊಂದಿಗೆ ರೈತರು ಕೈಜೋಡಿಸಿ, ಅವುಗಳ ಉಪಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ|| ಸಿ. ವಿಶ್ವನಾಥ್ ಅವರು ಮಾತನಾಡಿ, ರೈತರು ಕೇವಲ ಇತರೆ ವಾಣಿಜ್ಯ ಬೆಳೆಗಳಿಗೆ ಮಾತ್ರ ಅವಲಂಬಿತರಾಗದೆ ಮಿಶ್ರ ಬೆಳೆ ಬೆಳೆದ ಆರ್ಥಿಕವಾಗಿ ಸಮತೋಲನ ಕಾಯ್ದುಕೊಳ್ಳುವಲ್ಲಿ, ನಷ್ಟದಿಂದ ಹೊರಬರಲು ಸಾಧ್ಯವಾಗಲಿದೆ. ಪ್ರಸಕ್ತ ಸಾಲಿನಲ್ಲಿ ತೆಂಗು, ಅಡಿಕೆಯೊಂದಿಗೆ ಕೋಕೋ ಮತ್ತು ಕಾಳುಮೆಣಸು ಬೆಳೆಯನ್ನು ಬೆಳೆಯಲು ಇಲಾಖೆಯಿಂದ ಉತ್ತೇಜನ ನೀಡಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ವರ್ಷದಲ್ಲಿ ಮಾವಿನ ಬೆಳೆ ನಿರೀಕ್ಷೆಯಷ್ಟು ಇರದೆ ಶೇ.30-40ರಷ್ಟು ಮಾತ್ರ ಮಾರುಕಟ್ಟೆಗೆ ಬರಲಿದೆ. ಇದರಿಂದಾಗಿ ಮಾವಿನ ಬೆಳೆ ಆದಾಯದಿಂದ ವಂಚಿತರಾಗಿ ರೈತರು ನಷ್ಟ ಅನುಭವಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗೋಡಂಬಿ ಮತ್ತು ಕೋಕೋ ಬೆಳೆ ಕುರಿತಂತೆ ತಜ್ಞರು ರಚಿಸಿದ 03ಕೃತಿಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಗೇರುಬೆಳೆ ಬೆಳೆದು ಪ್ರಸಿದ್ಧರಾದ ವಿಠ್ಠಪ್ಪ ಬಿದರಕೊಪ್ಪ, ಅರುಣ್ ಶಿವಮೊಗ್ಗ ಮುಂತಾದವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ|| ಹನುಮಂತಪ್ಪ, ಡಾ|| ಮೃತ್ಯುಂಜಯ ಸಿ.ವಾಲಿ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ದೊಡ್ಡಗೌಡ ಪಾಟೀಲ್, ವೀರಭದ್ರಪ್ಪ ಪೂಜಾರ್, ಕೆ.ನಾಗರಾಜ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ|| ವಿಶ್ವನಾಥ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.