ವರ್ಷಾಂತ್ಯದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಿದ್ಧತೆ : ಬಸವರಾಜ ಬೊಮ್ಮಾಯಿ
ಶಿವಮೊಗ್ಗ, ಏಪ್ರಿಲ್ 20 : ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಭರದಿಂದ ನಿರ್ಮಾಣಗೊಳ್ಳುತ್ತಿರುವ ಅಂತರಾಷ್ಟ್ರೀಯ ಸ್ಥರದ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ನಾಮಕರಣಗೊಳಿಸಲು ಕ್ಯಾಬಿನೆಟ್ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರು ಇಂದು ವಿಮಾನ ನಿಲ್ದಾಣ ಕಾವiಗಾರಿಗಳ ಪ್ರಗತಿ ಪರಿವೀಕ್ಷಣೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆಗಳ ಸರ್ವಾಂಗೀಣ ವಿಕಾಸಕ್ಕೆ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿಕಾಸಕ್ಕೆ ವಿಮಾನ ನಿಲ್ದಾಣದ ಅಗತ್ಯವಿದ್ದು, ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಅವರು ಬೆಂಗಳೂರು ನಂತರದ ರಾಜ್ಯದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿರಲಿದೆ ಎಂದವರು ನುಡಿದರು.
ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಪ್ರಯುಕ್ತ ರಾಜ್ಯಕ್ಕೆ 8ರೈಲ್ವೇ ಯೋಜನೆಗಳು ಮಂಜೂರಾಗಿವೆ. ಅದರಲ್ಲಿ ಶಿವಮೊಗ್ಗ – ರಾಣೇಬೆನ್ನೂರು ರೈಲ್ವೇ ಮಾರ್ಗವೂ ಒಂದಾಗಿದೆ. 3500ಕಿ.ಮೀ. ರಾಜ್ಯ ಹೆದ್ದಾರಿಗೆ ಅನುಮೋದನೆ ನೀಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರವು ಕಳೆದ 2ವರ್ಷಗಳ ಅವಧಿಯಲ್ಲಿ 6000ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಅನುಮೋದನೆ ನೀಡಿದೆ ಎಂದ ಅವರು, ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೂ ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ಕಾರ್ಯಗಳನ್ನು ಇದೇ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ವಿಮಾನ ನಿಲ್ದಾಣದ ಆರಂಭದಿಂದಾಗಿ ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಅವಕಾಶಗಳು ಹೆಚ್ಚಾಗಲಿವೆ. ಅಲ್ಲದೇ ವಾಣಿಜ್ಯ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಮಹತ್ವದ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಅಲ್ಲದೇ ಸಮಯ ಮತ್ತು ಹಣ ನಿರ್ವಹಣೆಗೆ ಅನುಕೂಲವಾಗಲಿದೆ. ಪ್ರಸ್ತುತ ಶಿವಮೊಗ್ಗ, ರಾಯಚೂರು, ಬಿಜಾಪುರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಕಾರವಾರ ಬಂದರು ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದರು.
ಸಹ್ಯಾದ್ರಿ ತಪ್ಪಲಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಅಂತಹ ಕಾರ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣವನ್ನು ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಪ್ರಸ್ತುತ ವಿಮಾನಗಳ ರಾತ್ರಿ ಸಂಚಾರಕ್ಕೂ ಅನುಕೂಲವಾಗುವಂತೆ ನಿಲ್ದಾಣ ಅಭಿವೃಧ್ಧಿಪಡಿಸಲಾಗುವುದು. ನಿಲ್ದಾಣದ ಅಂಚಿನಲ್ಲಿ ಸಂಚಾರಕ್ಕೆ ರಸ್ತೆ ಮತ್ತು ವಿಮಾನ ನಿಲ್ಧಾಣದ ಹೊರಗೆ ರೈತರ ಹೊಲ-ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಂಪರ್ಕ ಕಲ್ಪಿಸಿಕೊಡಲಾಗುವುದು. ಅದಕ್ಕಾಗಿ ಹೆಚ್ಚುವರಿಯಾಗಿ ಬೇಕಾಗುವ 40-50ಕೋಟಿ ರೂ.ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು. ಶಿವಮೊಗ್ಗ ನಗರದ ಎಂ.ಆರ್.ಎಸ್.ನಿಂದ ನಿಲ್ದಾಣದವರೆಗೆ ಅಂತರಾಷ್ಟ್ರೀಯ ಮಟ್ಟದ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಸೂಚಿಸಲಾಗುವುದು ಎಂದ ಅವರು, ದೂರದೃಷ್ಠಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಶಕಗಳ ಹಿಂದೆಯೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದರು ಎಂದರು.
ಏರ್ಬಸ್ಗಳು ಏರಿಳಿಯಲಿರುವ ಈ ವಿಮಾನ ನಿಲ್ಧಾಣದ ನಿರ್ಮಾಣ ಕಾರ್ಯಕ್ಕೆ ಭೂಮಿಯನ್ನು ಒದಗಿಸಿದ ರೈತರಿಗೆ ಅಭಿನಂದನೆ ತಿಳಿಸಿದ ಅವರು, ಭೂಮಿಯನ್ನು ಒದಗಿಸಿದ ರೈತರಿಗೆ ಪರಿಹಾರ ಧನ ಒದಗಿಸಲಾಗುವುದು.
ಜೋಗ-ಜಲಪಾತದ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಅವರು ಜೋಗವನ್ನು ವರ್ಷದ ಎಲ್ಲಾ ಋತುಗಳಲ್ಲೂ ಪ್ರವಾಸಿಗರು ಸಂಪರ್ಕಿಸುವಂತೆ ಜೋಗವನ್ನು ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗುವುದು ಅದಕ್ಕಾಗಿ ಸರ್ಕಾರ ಈಗಾಗಲೆ 300ಕೋಟಿ ರೂ.ಗಳ ಅನುದಾನ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಭೈರತಿ ಬಸವರಾಜ, ಗೃಹಸಚಿವ ಆರಗಜ್ಞಾನೇಂದ್ರ, ಶಾಸಕ ಕೆ.ಬಿ.ಅಶೋಕನಾಯ್ಕ್, ಹರತಾಳು ಹಾಲಪ್ಪ, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಎಂ.ಎ.ಡಿ.ಬಿ. ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಎಸ್.ದತ್ತಾತ್ರಿ, ಶ್ರೀಮತಿ ಪವಿತ್ರಾ ರಾಮಯ್ಯ, ಜ್ಯೋತಿಪ್ರಕಾಶ್, ಜಿಲ್ಲಾಧಿಕಾರಿ ಡಾ||ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.