ಶಿವಮೊಗ್ಗ, ಮಾರ್ಚ್ 08 : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಧೈರ್ಯದಿಂದ, ಸ್ವಾಭಿಮಾನದಿಂದ ಬದುಕತ್ತಾ ಸಮಾಜದಲ್ಲಿ ತಾಯಿಯಾಗಿ, ಮಗಳಾಗಿ, ಮಡದಿಯಾಗಿ ಎಲ್ಲಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನೆಹರೂ ಕ್ರೀಡಾಂಗಣದಲ್ಲಿ ಇಂದು ಅಂತರಾಷ್ಟ್ರೀೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ತ್ರಿವರ್ಣದ ಬಲೂನುಗಳನ್ನು ಆಗಸದಲ್ಲಿ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
      ನಮ್ಮ ದೇಶದ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಯುದ್ದ ನಡೆಯುತ್ತಿರುವ ಪರಿಣಾಮ ಕೀವ್ ನೆಲದಲ್ಲಿ ಸಿಲುಕಿಕೊಂಡಿದ್ದಾಗ ನಮ್ಮ ಬೆಳಗಾವಿ ಜಿಲ್ಲೆಯ ಹೆಣ್ಣು ಮಗಳಾದ ದಿಶಾ ಮಣ್ಣೂರು ಅವರು ವಿಮಾನದಲ್ಲಿ 242 ವಿದ್ಯಾರ್ಥಿಗಳನ್ನ ನಮ್ಮ ದೇಶಕ್ಕೆ ಸುರಕ್ಷಿತವಾಗಿ ಕರೆತಂದಿರುವುದನ್ನು ಈ ಸಂದರ್ಭದಲ್ಲಿ ಶ್ಲಾಘಿಸಬೇಕು.
     ಜಿಲ್ಲಾ ಖಜಾನೆ ಉಪ ನಿರ್ದೆಶಕರಾದ ಸಾವಿತ್ರಿ ಹೆಚ್.ಎಸ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಪ್ರತಿ ಹಂತದಲ್ಲೂ ಸವಾಲುಗಳು ಇರುತ್ತವೆ. ಅವುಗಳನ್ನು  ಎದುರಿಸಲು ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತಮ್ಮನ್ನ ತಾವು ಹುರಿದುಂಬಿಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.
      ವಿಶೇಷ ಅತಿಥಿಯಾಗಿ ಅಗಮಿಸಿದ ಸರಿಗಮಪ ಖ್ಯಾತಿಯ ಹಾಡುಗಾರ್ತಿ ಸಾದ್ವಿನಿ ಕೊಪ್ಪ ಅವರು “ಮನೆಯೇ ಮೊದಲ ಪಾಠ ಶಾಲೆ, ತಾಯಿ ಮೊದಲ ಗುರು” ಎಂದು ಹೇಳಲಾಗುತ್ತೆ. ಇದರ ಮೂಲಕ ಹೆಣ್ಣಿನ ಮಹತ್ವ ಸಮಾಜದಲ್ಲಿ ಎಷ್ಟಿದೆ ಎಂಬುದು ನಮಗೆ ತಿಳಿಯುತ್ತದೆ. ಹಾಗಯೇ ನಮ್ಮ ಪ್ರತಿಭೆ ಗುರುತಿಸಿಕೊಂಡು ಅದಕ್ಕೆ ಪೂರಕವಾದ ತಯಾರಿ ಮಾಡಿಕೊಳ್ಳಬೇಕು ಜೊತೆಗೆ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೊಸ-ಹೊಸ ವಿಚಾರಗಳು, ಹೊಸ ವಿಷಯಗಳ ಜ್ಞಾನ ಹೆಚ್ಚಾಗುತ್ತದೆ ಎಂದು ಹಂಚಿಕೊಂಡ ಸಾದ್ವಿನಿ ಕೊಪ್ಪ ಅವರು ಹೆಚ್.ಎಸ್.ವಿ ರಚಸಿದ ಭಾವಗೀತೆ “ನಾನೊಂದು ಜೀವನದಿ ಹೆಣ್ಣು ನನ್ನ ಹೆಸರು” ಭಾವಗೀತೆ ಹಾಡಿದರು.
      ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕುಮಾರಿ ಲತಾ ಹಾಗೂ ಕುಮಾರಿ ಐಶ್ವರ್ಯ ಅವರಿಗೆ ಕ್ರೀಡಾ ಕಿಟ್‍ಗಳನ್ನ ನೀಡುವ ಮೂಲಕ ಗೌರವಿಸಲಾಯಿತು.
     ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಿಲ್ಪಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ ಮಂಜುನಾಥಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಕ್ರೀಡಾಪಟುಗಳು ಹಾಗೂ ಮಹಿಳೆಯರು ಹಾಜರಿದ್ದರು.

error: Content is protected !!