*ಉತ್ತಮ ಶಿಕ್ಷಣ ವಿಚಾರ ವಿವೇಕ ಪಡೆದ ಮಹಿಳೆಯೇ ಸಬಲಳು : ಪ್ರೊ.ವೀಣಾ*
ಶಿವಮೊಗ್ಗ ಮಾರ್ಚ್ 08 : ಉತ್ತಮ ಶಿಕ್ಷಣ, ವಿಚಾರ, ಮಾಹಿತಿ ಮತ್ತು ವಿವೇಕವನ್ನು ಪಡೆದ ಮಹಿಳೆಯೇ ಸಬಲಳು ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀಣಾ.ಎಂ.ಕೆ ಅಭಿಪ್ರಾಯಪಟ್ಟರು.
ಮಹಾನಗರಪಾಲಿಕೆ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜನ್ಮತಃ ಮಗು ಹೆಣ್ಣು ಅಥವಾ ಗಂಡು ಎಂಬ ಧೋರಣೆ ಇರುವುದಿಲ್ಲ. ಬದಲಾಗಿ ಮಗುವಿನ ಬೆಳವಣಿಗೆಯಲ್ಲಿ ಸಮಾಜ ಹೆಣ್ಣು, ಗಂಡು ಎಂದು ವರ್ಗೀಕರಿಸಿ ಬೆಳೆಸುತ್ತದೆ. ಸಮಾಜದ ಈ ಧೋರಣೆ ಬದಲಾಗಬೇಕು. ಪ್ರತಿಯೊಬ್ಬರಿಗೂ ತನ್ನದೇ ಆದ ಅಸ್ಮಿತೆ ಇರುತ್ತದೆ. ಹೆಣ್ಣು ತನ್ನ ಶಿಕ್ಷಣ, ಆಯ್ಕೆಗಳು, ಸ್ವಾತಂತ್ರ್ಯ, ಮತ್ತು ತನ್ನ ತೀರ್ಮಾನಗಳಿಂದ ಅದನ್ನು ಉಳಿಸಿಕೊಳ್ಳಬೇಕು. ಆಗ ಯಾರೂ ಕೂಡ ಹೆಣ್ಣನ್ನು ಕೀಳಾಗಿ ಕಾಣಲು ಸಾಧ್ಯವಿಲ್ಲ ಎಂದರು.
2022 ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷವಾಕ್ಯ ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎಂಬುದಾಗಿದ್ದು ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳು ಇಡಬೇಕಿದೆ. ಹೆಣ್ಣು ಕಟ್ಟುಪಾಡುಗಳನ್ನು ಲೆಕ್ಕಿಸದೇ ಶಿಕ್ಷಣ, ವಿವೇಕದಿಂದ ತನ್ನತನ ಬೆಳೆಸಿಕೊಳ್ಳಬೇಕಿದೆ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಾಲಿಕೆಯು ಸಾಮಾಜಿಕ ಸೇವೆ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಕೆಳದಿ ಚೆನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಮತ್ತು ಅಭಿನಾಂದರ್ಹ ಕಾರ್ಯವಾಗಿದೆ.
ನಮ್ಮ ದೇಶ ಮತ್ತು ರಾಜ್ಯವು ಅನೇಕ ವೀರಮಹಿಳೆಯರನ್ನು ಕಂಡಿದೆ. ಧೈರ್ಯ, ಶೌರ್ಯ, ಮನೋಬಲದಿಂದ ದೇಶ ಕಟ್ಟುವ ಕೆಲಸದಿಂದಾಗಿ ಅವರು ಅಜರಾಮರರಾಗಿದ್ದಾರೆ. ಅಂತಹವರಲ್ಲಿ ಕೆಳದ ಚೆನ್ನಮ್ಮಾಜಿ ಕೂಡ ಒಬ್ಬರು. ಆಕೆ ಕೆಳದಿಗೆ ಭದ್ರ ತಳಹದಿ ಹಾಕಿಕೊಟ್ಟ ಶ್ರೇಷ್ಟ ರಾಜಕಾರಣಿ. ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿಯೂ ತೊಡಗಿಸಿಕೊಂಡು, ಎಲ್ಲ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ವೀರ ವನಿತೆ. ಇಂತಹ ವೀರ ಮಹಿಳೆಯರು ನಮ್ಮೆಲ್ಲರಲ್ಲಿ ಇದ್ದಾರೆ. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಕೆಚ್ಚೆದೆಯಿಂದ, ಅನೇಕ ಸವಾಲುಗಳನ್ನು ಮೀರಿ ಮುನ್ನಡೆಯುತ್ತಿರುವುದು ಸಂತಸದ ವಿಚಾರ ಎಂದರು.
ಮಂಜುಳಾ ಆಯನೂರು ಮಂಜುನಾಥ್ ಮಾತನಾಡಿ, ಅಡುಗೆ ಮನೆಯಿಂದ ಹಿಡಿದು ಮಿಲಿಟರಿ ಪಡೆವರೆಗೆ ಸಾಧನೆ ಮಾಡಿದ್ದಾಳೆ ಮಹಿಳೆ. ನಾವೇ ಆದಿಶಕ್ತಿ ಆಗಿದ್ದು, ಪುರುಷರು ನಮಗೆ ಶಕ್ತಿ ಮತ್ತು ಸ್ಪೂರ್ತಿಯನ್ನು ತುಂಬುವವರಾಗಿದ್ದಾರೆ.
ಹೆಣ್ಣು ಬುದ್ದಿವಂತಳು. ಶಿಕ್ಷಣದಿಂದ ಇನ್ನಷ್ಟು ಶಕ್ತಿವಂತಳಾಗಿದ್ದಾಳೆ. ಮಹಾಶಕ್ತಿಯ ರೂಪವೇ ಮಹಿಳೆಯಾಗಿದ್ದು ಎಲ್ಲ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಹಿಳೆಯರು ಮಾಡಬೇಕೆಂದು ಆಶಿಸಿದರು.
ಪ್ರತಿಭಾ ಅರುಣ್ ಮಾತನಾಡಿ, ಸೃಷ್ಟಿಕರ್ತನ ಅಪರೂಪದ ಸೃಷ್ಟಿ ಹೆಣ್ಣು. ಹೆಣ್ಣು ಅತ್ಯಂತ ಶಕ್ತಿಯುತಳು, ಬೆಳಗಿನ ಜಾವ ಎದ್ದಾಗಿನಿಂದ ರಾತ್ರಿ ವಿಶ್ರಾಂತಿ ಪಡೆಯುವವರೆಗೆ ಅವಳದ್ದೇ ಅಧಿಕಾರ. ಅಂದರೆ ಮಕ್ಕಳ ಪಾಲನೆ, ಪೋಷಣೆ, ಗೃಹಕೃತ್ಯ ನಿರ್ವಹಣೆ ಸೇರಿದಂತೆ ಸರ್ವ ಕಾರ್ಯದಲ್ಲಿ ತೊಡಗಿರುತ್ತಾಳೆ.
ಮಹಿಳೆಯರಾದ ನಮ್ಮಲ್ಲಿ ವಿಶೇಷವಾದ ಶಕ್ತಿ ಇದೆ. ನಮ್ಮಲ್ಲಿ ಶಕ್ತಿ ಇಲ್ಲ ಎಂದುಕೊಂಡರೆ ಹಿಂದೆ ಉಳಿಯುತ್ತೇವೆ. ನಾವೇ ಚೌಕಟ್ಟು ಹಾಕಿಕೊಳ್ಳಬಾರದು. ನಮ್ಮ ದೇಶದಲ್ಲಿ ಎಂದಿಗೂ ಹೆಣ್ಣನ್ನು ಶೋಷಣೆಗೆ ಒಳಪಡಿಸಲಾಗಿಲ್ಲ. ವೀರ ಶಿವಾಜಿಯನ್ನು ಸೃಷ್ಟಿಸಿದ್ದು ಜೀಜಾಬಾಯಿ. ಎಲ್ಲ ತಾಯಂದಿರಲ್ಲಿ ಆ ದಿವ್ಯ ಶಕ್ತಿ ಇದೆ.
ಪ್ರಸ್ತುತ ದಿನಮಾನಗಳಲ್ಲಿ ನಾವು ನಮ್ಮ ಮಕ್ಕಳಲ್ಲಿ ಧನಾತ್ಮಕತೆ ಬಿತ್ತುವ ಕೆಲಸ ಹೆಚ್ಚು ಮಾಡಬೇಕಿದೆ. ನಮ್ಮ ಸಂಸ್ಕøತಿ, ಮೌಲ್ಯಗಳನ್ನು ತಿಳಿಸಿ ಹೇಳಬೇಕು ಎಂದು ಕಿವಿ ಮಾತು ಹೇಳಿದರು.
ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಮಾಜಿಕ ಸೇವೆ ಕ್ಷೇತ್ರದಿಂದ ಹೆಚ್.ಎಂ.ರುಕ್ಮಿಣಿ ನಾಯಕ್, ಆರೋಗ್ಯ ಮತ್ತು ಇತರೆ ಸೇವಾ ಕ್ಷೇತ್ರದಿಂದ ಆರೋಗ್ಯ ಮೇರಿ ಹಾಗೂ ಕ್ರೀಡಾ ಕ್ಷೇತ್ರದಿಂದ ಸಣ್ಣನಂಜಮ್ಮ ಇವರನ್ನು ಗೌರವಿಸಲಾಯಿತು.
ಬಹುಮಾನ ವಿತರಣೆ : ಮಹಿಳಾ ದಿನಾಚರಣೆ ಪ್ರಯುಕ್ತ ಪಾಲಿಕೆ ವತಿಯಿಂದ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾಲಿಕೆ ಮಹಾಪೌರರು, ಸದಸ್ಯರಾದ ಆರತಿ ಅ.ಮ.ಪ್ರಕಾಶ್, ರೇಖಾ ರಂಗನಾಥ್ ಮತ್ತಿತರರು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯರಾದ ಸುವರ್ಣ ಶಂಕರ್, ವಿಶ್ವಾಸ್, ಭಾನುಮತಿ ಶೇಟ್, ಸುರೇಖಾ ಮುರಳಿಧರ್, ಧೀರರಾಜ್ ಹೆಚ್, ಹೆಚ್.ಸಿ.ಯೋಗೀಶ್ ಇತರೆ ಸದಸ್ಯರು, ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಪಾಲ್ಗೊಂಡಿದ್ದರು.
ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ನಿರೂಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಸ್ವಾಗತಿಸಿದರು.