ರೈತರ ನೆರವಿಗೆ ನಿಂತ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಸಣ್ಣ ರೈತರೂ ತಮ್ಮ ಕನಸಿನ ವಾಣಿಜ್ಯ ಬೆಳೆಯಾದ ಅಡಿಕೆ ತೋಟ ನಿರ್ಮಾಣ ಮಾಡಿಕೊಂಡು ಸಂತಸ ನಗೆ ಬೀರಿದ್ದಾರೆ.
   ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ರೈತ ಇಂದಿಗೂ ಬಡತನದಿಂದ ಮುಕ್ತನಾಗಿಲ್ಲ. ಬೆಳೆಗೆ ಸಮರ್ಪಕ ಬೆಲೆ ಸಿಗದೆ ಹೈರಾಣಾಗಿದ್ದಾನೆ. ಇಂತಹ ಸ್ಥಿತಿಯಲ್ಲಿ ಆಹಾರ ಬೆಳೆ, ಧಾನ್ಯಗಳ ಜೊತೆಗೆ ರೈತರು ವಾಣಿಜ್ಯ ಬೆಳೆ ಬೆಳೆಯುವ ಬಗ್ಗೆ ಚಿಂತಿಸಿದ್ದರೂ ಸ್ವಂತ ಖರ್ಚಿನಿಂದ ಅಡಿಕೆ ತೋಟ ನಿರ್ಮಾಣ ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಸಣ್ಣ ರೈತರ ನೆರವಿಗೆ ಬಂದ ಯೋಜನೆಯೇ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಜಿಲ್ಲೆಯಲ್ಲಿ ಅನೇಕ ಸಣ್ಣ ರೈತರು ಈ ಯೋಜನೆಯ ಮೂಲಕ ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದಾರೆ.
 ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾ.ಪಂ ವ್ಯಾಪ್ತಿಯ ತೆವರತೆಪ್ಪ ಗ್ರಾಮದ ಹನುಮಂತಪ್ಪ ಬಿನ್ ಹನುಮಣ್ಣ ಇವರು ತಮ್ಮ ಸರ್ವೆ ನಂ 13 ರಲ್ಲಿ 1.30 ಗುಂಟೆ ಜಮೀನಿನಲ್ಲಿ ಎಂಜಿ ನರೇಗಾ ಯೋಜನೆಯ ಮುಖಾಂತರ ಅಡಿಕೆ ತೋಟ ನಿರ್ಮಿಸಿಕೊಂಡಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.


——–
       ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣರು ಮತ್ತು ರೈತರ ಪಾಲಿನ ಆಶಾಕಿರಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಸಣ್ಣ ರೈತರಿಗೆ ಸ್ವಂತ ಖರ್ಚಿನಲ್ಲಿ ಅಡಿಕೆ ತೋಟ ನಿರ್ಮಾಣ ಕಷ್ಟ. ಇಂತಹ ಸಮಯದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಡಿಕೆ ತೋಟ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
     ಪ್ರಸ್ತುತ ಅಡಿಕೆ ಬೆಳೆಗೆ ಹೆಚ್ಚಿನ ಬೆಲೆ ಇದ್ದು ಇದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಅಡಿಕೆ ತೋಟವನ್ನು ನಿರ್ವಹಣೆ ಮಾಡಬಹುದು. ಹಾಗೂ ಹನಿ ನೀರಾವರಿಯನ್ನು ಅಳವಡಿಸಿಕೊಂಡರೆ ಇನ್ನೂ ಕಡಿಮೆ ಖರ್ಚಿನಲ್ಲಿ ಅಡಿಕೆ ತೋಟವನ್ನು ನಿರ್ವಹಣೆ ಮಾಡಬಹುದಾಗಿದೆ.


ಅಡಿಕೆ ಬೆಳೆಯುವದರ ಜೊತೆಗೆ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಬಾಳೆ, ಕಾಳುಮೆಣಸು ಹಾಗೂ ಇತರೆ ತರಕಾರಿ ಬೆಳೆಗಳನ್ನು ಬೆಳೆಯಬಹುದಾಗಿದ್ದು ಇದರಿಂದ ಇನ್ನೂ ಹೆಚ್ಚಿನ ಆದಾಯವನ್ನು ಗಳಿಸಬಹುದು.
     ಹನುಮಂತಪ್ಪನವರು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಅಡಿಕೆ ತೋಟ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಗ್ರಾ.ಪಂ ಗೆ ಅರ್ಜಿಯನ್ನು ಸಲ್ಲಿಸಿದ್ದು, ಗ್ರಾಮ ಸಭೆಯಲ್ಲಿ ಇವರ ಅರ್ಜಿಯನ್ನು ಅನುಮೋದಿಸಿ, ತೋಟಗಾರಿಕೆ ಇಲಾಖಾಧಿಕಾರಿಗಳ ತಾಂತ್ರಿಕ ಸಲಹೆಯೊಂದಿಗೆ ಯೋಜನೆಯ ಮಾರ್ಗಸೂಚಿಗಳನ್ವಯ2015-16 ನೇ ಸಾಲಿನಲ್ಲಿ ಅಂದಾಜು ವೆಚ್ಚ ರೂ.50 ಸಾವಿರದಲ್ಲಿ ರೂ.33 ಸಾವಿರ ಕೂಲಿ ಮೊತ್ತ ಮತ್ತು ರೂ.14 ಸಾವಿರ ಸಾಮಗ್ರಿ ಮೊತ್ತದಲ್ಲಿ ಅಡಿಕೆ ತೋಟ ಕಾಮಗಾರಿ ಅನುಷ್ಟಾನ ಮಾಡಲಾಯಿತು.
                                                                     -ಎಂ.ಎಲ್.ವೈಶಾಲಿ, ಜಿ.ಪಂ. ಸಿಇಓ

ರೈತ ಹನುಮಂತಪ್ಪನವರ ನುಡಿ…


      ಅಡಿಕೆ ಬೆಳೆ ಬರಲು ಕನಿಷ್ಟ 5 ರಿಂದ 6 ವರ್ಷ ಬೇಕಾಗಿದ್ದು, 6 ವರ್ಷಗಳವರೆಗೆ ಅಡಿಕೆ ತೋಟದಲ್ಲಿ ಅಂತ ಬೆಳೆಯಾಗಿ 2 ವರ್ಷ ಬಾಳೆ, 1 ವರ್ಷ ಶುಂಠಿ ಹಾಗೂ ತರಕಾರಿಗಳನ್ನು ಬೆಳೆದು ಆದಾಯ ಪಡೆದಿದ್ದೇನೆ.
       ಅಡಿಕೆ ಬೆಳೆ ಬರಲು ಪ್ರಾರಂಭವಾದ 6 ನೇ ವರ್ಷದಲ್ಲಿ ರೂ.1 ಲಕ್ಷ ಆದಾಯ ಪಡೆದಿದ್ದೇನೆ. ಪ್ರಸ್ತುತ 7 ನೇ ವರ್ಷದಲ್ಲಿ 2 ರಿಂದ 3 ಲಕ್ಷಗಳವರೆಗೆ ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದೇನೆ. ಅಡಿಕೆ ಬೆಳೆಯ ಆದಾಯವು ಜೀವನ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮತ್ತು ಇತರೆ ಖರ್ಚುಗಳ ನಿರ್ವಹಣೆಗೆ ಆಸರೆಯಾಗಿದೆ.
     ಅಡಿಕೆ ತೋಟ ನಿರ್ಮಾಣಕ್ಕೂ ಮುನ್ನ ಭತ್ತವನ್ನು ಬೆಳೆಯಲಾಗುತ್ತಿದ್ದು, ಅದರಲ್ಲ ಬಂದ ಆದಾಯದಲ್ಲಿ ಶೇ.70 ರಷ್ಟು ನಿರ್ವಹಣೆಗಾಗಿ ವ್ಯಯ ಮಾಡಬೇಕಿತ್ತು. ಆದರೆ ಅಡಿಕೆ ತೋಟ ನಿರ್ಮಾಣದಿಂದ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ.
     ನರೇಗಾ ಯೋಜನೆ ಮೂಲಕ ನನಗೆ ಅಡಿಕೆ ತೋಟ ನಿರ್ಮಾಣ ಮಾಡಿಕೊಟಟಿರುವುದರಿಂದ ಉತ್ತಮ ಆದಾಯ ಬರುತ್ತಿದ್ದು ನಮ್ಮ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ಅಡಿಕೆ ತೋಟ ನಿರ್ಮಿಸಲು ಸಹಕರಿಸಿದ ಯೋಜನೆ ಮತ್ತು ಎಲ್ಲ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇನೆ.
                                                              -ಹನುಮಂತಪ್ಪ, ಫಲಾನುಭವಿ ರೈತ

ವರದಿ : ಭಾಗ್ಯ ಎಂ.ಟಿ, ವಾರ್ತಾ ಸಹಾಯಕರು
ವಾರ್ತಾ ಇಲಾಖೆ

error: Content is protected !!