ಕಳೆದ ಮೂರು ವರ್ಷಗಳ ಹಿಂದೆ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆ ಭಯಾನಕವಾಗಿ ಕಾಣಿಸಿಕೊಂಡು ಜನರ ಬದುಕನ್ನೇ ಸಮಸ್ಯೆಗೆ ಒಡ್ಡಿತು. ಸರ್ಕಾರ ತುರ್ತಾಗಿ ಕೆಲವು ಕ್ರಮ ಕೈಗೊಂಡು ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಐದು ವರ್ಷಗಳ ಕಾಲ ಸಾಗರ ತಾಲೂಕಿನ ಅರಳಗೋಡಿನ ಸುತ್ತ ಬೂಸ್ಟರ್ ಡೋಸ್ ಅನ್ನು ಪ್ರತಿ ವರ್ಷ ನೀಡುತ್ತಿದ್ದಾರೆ. ಈ ವರ್ಷ ಅರಳಗೋಡು ಮತ್ತು ನಂದಿತಳೆ ಭಾಗದಲ್ಲಿ ಕಾಡಿನ ಹುಣಗುಗಳಲ್ಲಿ ಮಂಗನ ಕಾಯಿಲೆಗಳ ಗುಣಲಕ್ಷಣ ಕಂಡುಬಂದಿತ್ತು. ಕೂಡಲೇ ಜಾಗೃತಿ ವಹಿಸಿದ ಆರೋಗ್ಯ ಇಲಾಖೆ ಎಲ್ಲ ರೀತಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜನರಿಗೆ ಆ ಕಾಡುಗಳಲ್ಲಿ ಓಡಾಡದಂತೆ ಗ್ರಾಮ ಪಂಚಾಯಿತಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ರೋಗದ ಗುಣಲಕ್ಷಣ:
ಸತತ ಎಂಟು-ಹತ್ತು ದಿನ ಜ್ವರ ಬಂದರೆ, ತಲೆನೋವು, ಸೊಂಟನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು, ಸಂಧಿವಾತ, ಮೆದುಳಿನ ಹೊಂದಾಣಿಕೆಯ ಜ್ವರ ಗುಣಲಕ್ಷಣಗಳು ಇದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು. ಮಂಗನ ಕಾಯಿಲೆ ಕುರಿತಂತೆ ಈಗಾಗಲೇ ರೋಗದ ಗುಣಲಕ್ಷಣಗಳನ್ನು ಗುರುತಿಸಿರುವ ಪ್ರಾಥಮಿಕ ಆರೋಗ್ಯ ಘಟಕಗಳಲ್ಲಿ ಲಸಿಕೆ ನೀಡುವುದಲ್ಲದೇ ಮೈಗೆ ಸವರಿಕೊಳ್ಳಲು ಡಿಎಂಪಿ ಆಯಿಲ್‍ಗಳನ್ನು ನೀಡಲಾಗುತ್ತಿದೆ. ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿಯು ಆಗಸ್ಟ್ ತಿಂಗಳಲ್ಲಿ ಮೊದಲ ಕಂತು ನಂತರದಲ್ಲಿ ಎರಡನೇ ವರಸೆ ಲಸಿಕೆ ಪಡೆಯಬೇಕು. ಅಲ್ಲದೇ ಪ್ರತಿ ವರ್ಷ ವರ್ಧಕ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಗರ್ಭಿಣಿಯರು ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಿಕೊಳ್ಳುವಂತಿಲ್ಲ.
ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾಡಳಿತ ಒಟ್ಟಾಗಿ ಮಂಗನ ಕಾಯಿಲೆ ಕುರಿತಂತೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.


ಮಂಗನ ಕಾಯಿಲೆ ಕುರಿತು ಮಲೆನಾಡಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿ ಲಸಿಕೆ ನೀಡುವ ಜತೆಯಲ್ಲಿ ಡಿಎಂಪಿ ಆಯಿಲ್ ನೀಡಲಾಗುತ್ತಿದೆ. ಕಾಡಿನಲ್ಲಿ ಓಡಾಡುವಾಗ ಜಾಗೃತಿಯಿಂದ ಕಾರ್ಯ ನಿರ್ವಹಿಸಲು ಆಯಾ ಗ್ರಾಮ ಪಂಚಾಯಿತಿ ಮೂಲಕ ಜನರಿಗೆ ಸೂಚನೆ ನೀಡಲಾಗಿದೆ.
| ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ, ಶಿವಮೊಗ್ಗ

error: Content is protected !!