ಶಿವಮೊಗ್ಗ, ಏಪ್ರಿಲ್ 01 : ಜಿಲ್ಲೆಯ ಎಲ್ಲಾ ಅರ್ಹ ಮತದಾರರಲ್ಲೂ ಮತದಾನ ಮಹತ್ವದ ಕುರಿತು ಅರಿವು ಮೂಡಿಸಲು ಯುವ ವಿದ್ಯಾರ್ಥಿಗಳನ್ನೊಳಗೊಂಡ ಹಲವು ತಂಡಗಳ ಮೂಲಕ ಪ್ರತಿ ಮತದಾರರ ಮನೆಮನೆ ಭೇಟಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಮನೆ-ಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಮತದಾನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ತಿಲಕ್ ನಗರ, ದುರ್ಗಿಗುಡಿ ಸೇರಿದಂತೆ ಸ್ವತಃ ತಾವೇ ಖುದ್ದಾಗಿ ವಿದ್ಯಾರ್ಥಿಗಳೊಂದಿಗೆ ನಗರದ ಹಲವು ವಾರ್ಡ್‍ಗಳಲ್ಲಿನ ಮನೆ ಮನೆಗೆ ತೆರಳಿ, ಕರಪತ್ರ ವಿತರಿಸಿ ಮತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ ಎಂದವರು ನುಡಿದರು.
ಈ ಮನೆ ಭೇಟಿಯಿಂದ ಜನರಲ್ಲಿ ಮತದಾನದ ಕುರಿತು ಅರಿವು ಮೂಡುವುದರ ಜೊತೆಗೆ ಜನರಲ್ಲಿ ಚರ್ಚೆಗೆ ಅನುವು ಮಾಡಿಕೊಡಲಿದೆ. ಚುನಾವಣೆಯ ಕುರಿತು ಜನರ ಗಮನಸೆಳೆಯುವ ಹಾಗೂ ಅವರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಿಗೊಳಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲೆ ಮತದಾನದಲ್ಲಿ ಶೇ.100ರ ಗುರಿಸಾಧಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಈಗಾಗಲೇ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆರಂಬಿಸಲಾಗಿದೆ. ಇಂದು ಶಿವಮೊಗ್ಗ ನಗರದ ಸುಮಾರು 5,000ಮನೆಗಳನ್ನು ತಲುಪುವ ಉದ್ದೇಶ ಹೊಂದಲಾಗಿದೆ ಎಂದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಅಂದಿನ ಗುಪ್ತ ಪತ್ರಿಕೆಗಳ ಮೂಲಕ ಜನರ ಬಾಯಿಂದ ಬಾಯಿಗೆ ಹರಡಿ ಗ್ರಾಮೀಣ ಪ್ರದೇಶದ ಜನರಲ್ಲಿಗೆ ತಲುಪಿ ಹೋರಾಟದ ರೂಪುರೇóಷೆಗಳು ಸಿದ್ದಗೊಳ್ಳುತ್ತಿದ್ದವು. ಅದನ್ನೆ ಮಾದರಿಯಾಗಿಟ್ಟುಕೊಂಡು ಇಂತಹ ಕಾರ್ಯಕ್ರಮ ಯೋಜನೆಗೆ ಮುಂದಾಗಿದ್ದೇವೆ ಎಂದವರು ನುಡಿದರು.
ನಮ್ಮನ್ನಾಳುವ ಸಮರ್ಥ ಜನಪ್ರತಿಯನ್ನು ಆಯ್ಕೆ ಮಾಡಿಕೊಳ್ಳಲು ಹಾಗೂ ಜನರಲ್ಲಿ ಸಾಮಾಜಿಕ ಬದಲಾವಣೆಗಾಗಿ ಅಭಿಪ್ರಾಯ ಹುಟ್ಟುಹಾಕಲು ಇದು ವೇದಿಕೆಯಾಗಲಿದೆ ಎಂಬ ಆಶಯ ಹೊಂದಿರುವುದಾಗಿ ತಿಳಿಸಿದ ಅವರು, ಯುವ ವಿದ್ಯಾರ್ಥಿಗಳು ಸಾಮಾಜಿಕವಾಗಿ ಬೆಳೆಯಲು ಇದು ಪರೋಕ್ಷವಾಗಿ ಅವಕಾಶ ದೊರೆಲಿದೆ ಎಂದರು.
ಹಲವು ಸಾಧನೆಗಳಿಗಾಗಿ ಮೊದಲ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಶೇ.100ರಷ್ಟು ಮತದಾನದಲ್ಲೂ ಅಗ್ರಪಂಕ್ತಿಯಲ್ಲಿದ್ದು, ಹೊಸಭಾಷ್ಯ ಬರೆಯುವಂತಾಗಲಿ. ಅದಕ್ಕಾಗಿ ಅರ್ಹ ಮತದಾರರು ತಮ್ಮ ಜವಾಬ್ದಾರಿಯರಿತು ಮತ ಚಲಾಯಿಸಬೇಕು. ಇತರರಿಗೆ ಮತದಾನಕ್ಕೆ ಪ್ರೇರಣೆಯಾಗಲಿ ಎಂದರು.
ಅತಿ ಹೆಚ್ಚು ಮತದಾನದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಮತದಾನ ಕಡಿಮೆಯಾದಲ್ಲಿ ಅದು ಅಭದ್ರಗೊಂಡು ಪ್ರಜಾಪ್ರಭುತ್ವದ ಬೇರುಗಳು ಸಡಿಲವಾಗಲಿವೆ. ಇದು ಮುಂದೊಂದು ದಿನ ಅರಾಜಕತೆಗೆ ನಾಂದಿಯಾಗಬಹುದಾಗಿದೆ. ಆದ್ದರಿಂದ ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಬಲಿಯಾಗದೆ ಸ್ವಯಂಪ್ರೇರಿತರಾಗಿ ಮತಗಟ್ಟೆಗೆ ತೆರಳಲಿ ಮತದಾನ ಮಾಡುವಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಪೂರ್ಣಿಮಾ ಸೇರಿದಂತೆ ಸ್ವಯಂಪ್ರೇರಿತ ಯುವ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!