ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಫೆ.02 : ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ವಿಶ್ವಕ್ಕೆ ಮಾದರಿ ಯೋಜನೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಬುಧವಾರ ಹೊಳಲೂರು ಅಂಬೇಡ್ಕರ್ ಭವನದಲ್ಲಿ, ಕರ್ನಾಟಕ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ, ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನರೇಗಾ ಯೋಜನೆ ಕೇವಲ ಕೂಲಿಗಾಗಿ ಕೆಲಸ ಮಾಡುವ ಯೋಜನೆ ಅಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಸೃಜಿಸುವುದರೊಂದಿಗೆ, ವೈಯಕ್ತಿಕ ಸೌಲಭ್ಯಗಳನ್ನು ಸಹ ಪಡೆಯುವ ಯೋಜನೆ ಇದಾಗಿದೆ. ಯೋಜನೆಯಡಿ ರಾಜ್ಯದಲ್ಲಿ ಗ್ರಾಮಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, 600ಕ್ಕೂ ಹೆಚ್ಚು ಹಳೆ ಕಲ್ಯಾಣಿಗಳಿಗೆ ಪುನರ್ಜನ್ಮ ನೀಡಲು ಸಾಧ್ಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರತಿ ಗ್ರಾಮದಲ್ಲಿ ಕನಿಷ್ಟ ಒಂದು ಕೆರೆ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿರುವುದನ್ನು ಕಂಡುಕೊಳ್ಳಲಾಗಿದೆ. ಇದರಿಂದಾಗಿ ಜಲಧಾರೆ ಯೋಜನೆಯಡಿ ನಮ್ಮ ರಾಜ್ಯ ದೇಶಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

ನರೇಗಾ ಯೋಜನೆಯಡಿ ಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆ ಸಾಮರ್ಥ್ಯವನ್ನು ಹೆಚ್ಚಿಸಿ, ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಿದೆ. ಕೆರೆ, ಬದು, ಇಂಗುಗುAಡಿಗಳ ನಿರ್ಮಾಣ, ತಡೆಗೋಡೆ ನಿರ್ಮಾಣ, ಹೊಲಕ್ಕೆ ಹೋಗಲು ಸಣ್ಣ ರಸ್ತೆಗಳ ನಿರ್ಮಾಣ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಯೋಜನೆ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ದನದ ಕೊಟ್ಟಿಗೆ, ಕುರಿ ಶೆಡ್ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರು.

ತ್ಯಾವರೆಕೊಪ್ಪ ಸಿಂಹಧಾಮ ಅಭಿವೃದ್ಧಿ: ನರೇಗಾ ಯೋಜನೆಯಡಿ ತ್ಯಾವರೆಕೊಪ್ಪ ಸಿಂಹಧಾಮದಲ್ಲಿರುವ ಕೆರೆಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಅನುಮತಿಯನ್ನು ಪಡೆದು ಈ ಕಾಮಗಾರಿಗಳ ಅನುಷ್ಟಾನ ಕಾರ್ಯವನ್ನು ಆದಷ್ಟು ಬೇಗನೆ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಗುರಿ ಮೀರಿದ ಸಾಧನೆ: ನರೇಗಾ ಯೋಜನೆಯಡಿ ಪ್ರಸ್ತುತ ವರ್ಷ ಕೇಂದ್ರ ಸರ್ಕಾರ ನೀಡಿದ್ದ 13ಕೋಟಿ ಮಾನವ ದಿನಗಳ ಗುರಿ, ನವೆಂಬರ್ ತಿಂಗಳಲ್ಲಿ ಪೂರ್ಣಗೊಂಡ ಕಾರಣ ಹೆಚ್ಚುವರಿಯಾಗಿ 1.40ಕೋಟಿ ಮಾನವ ದಿನ ರಾಜ್ಯಕ್ಕೆ ನೀಡಿತ್ತು. ಅದನ್ನು ಸಹ ಪೂರ್ಣಗೊಳಿಸಿ, ಇನ್ನೂ ಹೆಚ್ಚುವರಿ ದಿನಕ್ಕೆ ಅವಕಾಶ ನೀಡಲು ಕೇಂದ್ರಕ್ಕೆ ಕೋರಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತನ್ನು ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಬಹುದು. ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 267 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ 139 ಸ್ವಚ್ಛತಾ ಸಂಕೀರ್ಣಗಳನ್ನು ನರೇಗಾ ಯೋಜನೆಯಡಿ ಪೂರ್ಣಗೊಳಿಸಿರುವುದು ವಿಶೇಷವಾಗಿದೆ. ಮುಂದಿನ ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಯೋಜನೆಯಡಿ ಪ್ರತಿ ಮನೆಗೆ ವ್ಯವಸ್ಥಿತ ಬಚ್ಚಲು ಗುಂಡಿಗಳನ್ನು ನಿರ್ಮಿಸುವ ಕಾರ್ಯವನ್ನು ಯೋಜನೆಯಡಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶ್ರಮದಾನ: ನರೇಗಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಸುಂದರವಾದ ಬಣ್ಣ ಹಚ್ಚುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

error: Content is protected !!