ಶಿವಮೊಗ್ಗ, ಫೆಬ್ರವರಿ 01: ಬೆವರು ಸುರಿಸುವ ವರ್ಗದ ನೇತಾರ ಮಡಿವಾಳ ಮಾಚಿದೇವ. ಕೇವಲ ಮಾತು, ಉಪನ್ಯಾಸ ನೀಡದೇ ನಿಜವಾದ ಕಾಯಕಯೋಗಿಯಾದ ಅವರು ಎಲ್ಲ ವರ್ಗದವರ ಬಟ್ಟೆಗಳನ್ನು ಸ್ವಚ್ಚ ಮಾಡುವ ಮೂಲಕ ಇಡೀ ಸಮಾಜಕ್ಕೇ ಗೌರವ ತಂದುಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ನುಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ನಗರದ ಕುವೆಂಪುರಂಗಮಂದಿರದಲ್ಲಿ ಇಂದು ಸರಳ ಹಾಗೂ ಸಾಂಕೇತಿಕವಾಗಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಬಟ್ಟೆ ಮಡಿ ಮಾಡದಿದ್ದರೆ ಸಮಾಜದ ಗೌರವ ಉಳಿಯುತ್ತಿರಲಿಲ್ಲ. ಹೀಗೆ ಸಮಾಜಕ್ಕೇ ಗೌರವ ತಂದ ಮಡಿವಾಳ ಮಾಚಿದೇವರ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಅವರು ತ್ಯಾಗಿಗಳು. ನನಗೆ ಎನ್ನುವುದಕ್ಕಿಂತ ನಮ್ಮ ಸಮಾಜಕ್ಕಾಗಿ ಎಂದು ಬದುಕಿದವರು. ಸೋಮಾರಿತನ ಬಿಟ್ಟು ನಿತ್ಯ ಕಾಯಕದಲ್ಲಿ ತೊಡಗುವಂತೆ ಸಂದೇಶ ನೀಡಿದ ಮಾಚಿದೇವರು ನಮ್ಮೆಲ್ಲರ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.
ನಿನ್ನೆ ಚಿತ್ರದುರ್ಗ ಮಠದ ಬಸವ ಮಾಚೀದೇವರ ನೇತೃತ್ವದಲ್ಲಿ ದಲಿತ ಮತ್ತು ಹಿಂದುಳಿದ ಮಠಗಳ ಮಠಾಧೀಶರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ ಹಿಂದುಳಿದವರ ಶಿಕ್ಷಣಕ್ಕೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಿರುವುದು ಸಂತಸದ ವಿಷಯ. ಕೊರೊನೊ ಹಿನ್ನೆಲೆಯಲ್ಲಿ ಜಯಂತಿಯನ್ನು ಈ ವರ್ಷ ಸರಳವಾಗಿ ಆಚರಿಸುತ್ತಿದ್ದು, ಮುಂದಿನ ವರ್ಷ ವಿಜೃಂಭಣೆಯಿಂದ ಆಚರಿಸೋಣ ಎಂದು ಆಶಿಸಿದರು.
ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷರಾದ ಎಂ.ಎಸ್.ಸುರೇಶ್ ಮಾತನಾಡಿ, ಸರ್ಕಾರದ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸುತ್ತಿರುವುದಕ್ಕೆ ಸಮಾಜದ ವತಿಯಿಂದ ಅಭಿನಂದಿಸುತ್ತೇನೆ. ಮಡಿವಾಳ ಮಾಚಿದೇವರ ಕುರಿತು ಮಕ್ಕಳಿಗೂ ಪಾಠ ಪ್ರವಚನದ ಮೂಲಕ ತಿಳಿಸುವ ಕೆಲಸವಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಪ್ರಧಾನ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷರಾದ ವೈ,ಮುನಿಯಪ್ಪ, ಮಂಜಪ್ಪ, ಕಾರ್ಯದರ್ಶಿ ಹೆಚ್.ಆರ್ ಬಸವರಾಜ್, ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ನಿರ್ದೇಶಕ ಕೆ.ಎಸ್.ಅರುಣ್‍ಕುಮಾರ್, ಮುಖಂಡರಾದ ಎನ್.ಮಂಜುನಾಥ್, ಸಿದ್ದಲಿಂಗಪ್ಪ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್.ಹೆಚ್, ಇತರರು ಉಪಸ್ಥಿತರಿದ್ದರು.

error: Content is protected !!