ಶಿವಮೊಗ್ಗ, ಜನವರಿ 27 ಸ್ಮಾರ್ಟ್‍ಸಿಟಿ ವತಿಯಿಂದ ತುಂಗಾ ನದಿಗೆ ಮಲಿನ ನೀರು ಸೇರದಂತೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಶಿವಮೊಗ್ಗ ಸ್ಮಾರ್ಟ್‍ಸಿಟಿ ಲಿ. ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಎಸ್.ವಟಾರೆ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರದ ಮಲಿನ ನೀರು, ರಾಜಕಾಲುವೆಗಳ ಮೂಲಕ ಸುಮಾರು 16 ಜಾಗಗಳಲ್ಲಿ ತುಂಗಾ ನದಿಗೆ ಸೇರುತ್ತಿದ್ದು, ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿರುವ 7 ಜಾಗಗಳಲ್ಲಿ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 9 ಜಾಗಗಳಲ್ಲಿ ಮಲಿನ ನೀರು ಸೇರ್ಪಡೆಯನ್ನು ತಡೆಗಟ್ಟಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಸ್ಮಾರ್ಟ್ ಸಿಟಿ ಅಭಿಯಾನದ ಅನ್ವಯ ನಗರದ ಬೈಪಾಸ್ ಹೊಸ ಸೇತುವೆಯಿಂದ ಬೆಕ್ಕಿನ ಕಲ್ಮಠ ಹಳೆ ಸೇತುವೆಯವರೆಗೆ ತುಂಗಾ ನದಿಯ ಉತ್ತರ ದಂಡೆಯ 2.7 ಕಿ.ಮೀ. ಉದ್ದಕ್ಕೆ ಮಾಡಲಾಗುತ್ತಿರುವ ನದಿ ದಂಡೆ ಅಭಿವೃದ್ಧಿ ಯೋಜನೆಯಲ್ಲಿ ಪೂರಕವಾಗಿ ಇಮಾಂಬಾಡಾ, ಲಾಲ್ ಬಂದ್ ಕೇರಿ, ರಾಮಣ್ಣ ಶ್ರೇಷ್ಟಿ, ಪಾರ್ಕ್ ಹತ್ತಿರ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಬೆಕ್ಕಿನ ಕಲ್ಮಠದ ಹತ್ತಿರ ಹೀಗೆ ಒಟ್ಟು 7 ಸ್ಥಳಗಳಲ್ಲಿ ಕಲುಷಿತ ನೀರು ನದಿಗೆ ಸೇರದಂತೆ ತಡೆಯುವ ಪ್ರತಿಬಂಧಕ ಮತ್ತು ವಿಚಲನ (Interception & diversion) ವಿಧಾನವನ್ನು ಅಳವಡಿಸಿಕೊಂಡು ರೂ.2.63 ಕೋಟಿ ಹೆಚ್ಚುವರಿ ಅಂದಾಜು ವೆಚ್ಚದಲ್ಲಿ ಗುರುತ್ವಾಕರ್ಷಣಾ ಹರಿವು (gravity flow) ಹಾಗೂ ಪಂಪಿಂಗ್ ಮೂಲಕ ಕಲುಷಿತ ನೀರನ್ನು ಒಳಚರಂಡಿ ಕೊಳವೆಗೆ/ವೆಟ್ ವೆಲ್‍ಗಳಿಗೆ ಹರಿಸಿ, ತುಂಗಾ ನದಿಗೆ ಸೇರದಂತೆ ತಡೆಯುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಮಳೆಗಾಲದ ಮುನ್ನ ಪೂರ್ಣಗೊಳ್ಳುತ್ತವೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಮಲಿನ ನೀರು ನೇರವಾಗಿ ತುಂಗಾನದಿಗೆ ಸೇರ್ಪಡೆಯಾಗುವುದು ತಪ್ಪುತ್ತದೆ.
ಜೊತೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ತೆಗೆದುಕೊಳ್ಳಲಾದ ಏಳು ಸ್ಮಾರ್ಟ್ ರಸ್ತೆ ಅಭಿವೃದ್ಧಿ ಮತ್ತು ಐದು ಕನ್ಸರ್ವೆನ್ಸಿಗಳ ಅಭಿವೃದ್ಧಿ ಯೋಜನೆಗಳಲ್ಲಿ ಅಸ್ತಿತ್ವದಲ್ಲಿರುವ ಸುಮಾರು 16,293 ಮೀಟರ್ ಉದ್ದದ ಒಳಚರಂಡಿ ದುರಸ್ತಿಗೊಳಿಸಲಾಗಿದ್ದು, ಒಳಚರಂಡಿ ಮಾರ್ಗಗಳನ್ನು ಮ್ಯಾನ್ ಹೋಲ್‍ಗೆ ಸಂಪರ್ಕ ಮಾಡದೇ ಇರುವ ಹಲವು ಮನೆಗಳು, ವಾಣಿಜ್ಯ ಸಂಕೀರ್ಣ ಇತ್ಯಾದಿಗಳಿಂದ ಬರುವ ಕಲುಷಿತ ನೀರು ಹರಿಯಲು ಒಳಚರಂಡಿ ಕೊಳವೆ/ವೆಟ್‍ವೆಲ್‍ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದು ಸಹಾ ತುಂಗಾ ನದಿಗೆ ಕಲುಷಿತ ತ್ಯಾಜ್ಯ ನೀರು ಸೇರಿದಂತೆ ತಡೆಯುವ ಪೂರಕ ವ್ಯವಸ್ಥೆಯಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಶಿವಮೊಗ್ಗ ವಿಭಾಗದ ವತಿಯಿಂದ ಹಸಿರು ನ್ಯಾಯ ಮಂಡಳಿಯ ನಿರ್ದೇಶನದಂತೆ ರಾಜಕಾಲುವ ಮೂಲಕ ಮಲಿನ ನೀರು ತುಂಗಾ ನದಿ ಸೇರುತ್ತಿರುವುದನ್ನು ತಡೆಗಟ್ಟಲು ತ್ಯಾವರೆಚೆಟ್ನಹಳ್ಳಿ ಎಸ್.ಟಿ.ಪಿ. ಹತ್ತಿರ, ಗುಂಡಪ್ಪ ಶೆಡ್ ನೆಟ್ವೆಲ್ ಹತ್ತಿರ, ಗುರುಪುರ ವೆಟ್‍ವೆಲ್ ಹತ್ತಿರ, ವಿದ್ಯಾನಗರ ಕಂಟ್ರಿಕ್ಲಬ್ ಪಕ್ಕ, ವಿದ್ಯಾನಗರ ಕೊಳಚೆ ನಿರ್ಮೂಲನಾ ಮಂಡಳಿ ಪಕ್ಕ, ವಿದ್ಯಾನಗರ, ಕಂಟ್ರಿ ಕ್ಲಬ್ ರಸ್ತೆ ಬಳಿ, ಸವಾಯಿ ಪಾಳ್ಯ, ತೀರ್ಥಹಳ್ಳಿ ರಸ್ತೆಯ ನ್ಯೂ ಮಂಡ್ಲಿ ಬಳಿ ಹಾಗೂ ವಾದಿ-ಎ-ಹುದಾ ಬೈಪಾಸ್ ರಸ್ತೆ ಬಳಿ ಹೀಗೆ ಬಾಕಿ 9 ಸ್ಥಳಗಳಲ್ಲಿ ಪ್ರತಿಬಂಧಕ ಮತ್ತು ವಿಚಲನ (Interception & diversion)ವಿಧಾನದಲ್ಲಿ ರೂ.15.15 ಕೋಟಿ ಅಂದಾಜಿನಲ್ಲಿ ಯೋಜನೆ ರೂಪಿಸಿ ಈಗಾಗಲೇ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಈ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ತುಂಗಾ ನದಿಗೆ ರಾಜ ಕಾಲುವೆಗಳಿಂದ ಸೇರ್ಪಡೆಯಾಗುತ್ತಿರುವ ಮಲಿನ ನೀರನ್ನು ಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತದೆ. ಮಾಂಸ ತ್ಯಾಜ್ಯ ಹಾಗೂ ಇತರೆ ಘನತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುವುದನ್ನು ನಿಬರ್ಂಧಿಸಲು ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದಾಗ್ಯೂ ನದಿದಂಡೆಯ ವಿಸ್ತಾರವನ್ನು ಪರಿಗಣಿಸಿದಲ್ಲಿ, ಕೇವಲ ತಾಂತ್ರಿಕ ಮತ್ತು ಕಾನೂನಾತ್ಮಕ ಪ್ರತಿಬಂಧಕಗಳಿಂದ ಮಾತ್ರ ಇಂತಹ ಚಟವಟಿಕೆಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯ, ಸಾರ್ವಜನಿಕರು ಸಹಾ ನದಿಯ ಸ್ವಚ್ಛತೆಯ ಬಗ್ಗೆ ಆಸಕ್ತಿವಹಿಸಿ ಸರ್ಕಾರದ ಕಾರ್ಯಕ್ರಮಗಳೊಂದಿಗೆ ಕೈಜೋಡಿಸಿ, ತುಂಗಾ ನದಿಯ ಪವಿತ್ರತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಸಹಕರಿಸಬೇಕೆಂದು ಅವರು ವಿನಂತಿಸಿದ್ದಾರೆ.