ಶಿಲ್ಪಕಲೆಗೆ ಮತ್ತೊಂದು ಹೆಸರೇ ಜಕಣಾಚಾರಿ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಜನವರಿ 01: ಶಿಲ್ಪಕಲೆಗೆ ಮತ್ತೊಂದು ಹೆಸರೇ ಜಕಣಾಚಾರಿ. ಆದ್ದರಿಂದ ಅವರನ್ನು ನಾಡೇ ಅಮರಶಿಲ್ಪಿ ಎಂದು ಗುರುತಿಸಿದ್ದು, ಭಕ್ತಿ-ಶ್ರದ್ದಾ ಕೇಂದ್ರಗಳಲ್ಲಿನ ಅವರ ಶಿಲ್ಪಕಲೆಯು ಶ್ರದ್ದಾಕೇಂದ್ರಗಳಿಗೇ ಒಂದು ಗೌರವ ತಂದು ಕೊಟ್ಟಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಜಕಣಾಚಾರಿಯವರ ಶಿಲ್ಪಕಲೆಯನ್ನು ಕೊಂಡಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಏರ್ಪಡಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಲೂರು, ಹಳೇಬೀಡು, ಶೃಂಗೇರಿ ಸೇರಿದಂತೆ ಹಲವೆಡೆ ಕೆತ್ತಿರುವ ಅವರ ಶಿಲ್ಪಕಲೆಗಳು ಎಲ್ಲ ಶಿಲ್ಪಿಗಳಿಗೆ ದಾರಿದೀಪವಾಗಿದೆ. ಹಿಂದುಳಿದ ಸಮಾಜದ ಒಬ್ಬ ವ್ಯಕ್ತಿ ತನ್ನ ಪ್ರತಿಭೆಯಿಂದ ನಾಡಿಗೇ ಮಾದರಿಯಾಗಿದ್ದಾರೆ. ಜೀವನವನ್ನೇ ಕಲೆಗಾಗಿ ಮುಡಿಪಿಟ್ಟ ಅವರ ಬದುಕು ಇಂದಿನ ಶಿಲ್ಪಿಗಳಿಗೆ ಮಾರ್ಗದರ್ಶನವಾಗಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಎಸ್.ರುದ್ರೇಗೌಡರು ಮಾತನಾಡಿ, ಜಕಣಾಚಾರಿಯವರು ಅದ್ಭುತ ಶಿಲ್ಪ ಕಲಾವಿದ. ಅವರ ಸಮರ್ಪಣಾ ಭಾವ ಎಲ್ಲ ಯುವಶಿಲ್ಪಿಗಳಿಗೆ ಸ್ಪೂರ್ತಿಯಾಗಿದ್ದು, ಇಂದಿಗೂ ನಾವು ಸಮರ್ಪಣಾ ಭಾವದ ಶಿಲ್ಪ-ಕಲೆಯ ಸಂಸ್ಕಾರವನ್ನು ಉಳಿಸಿಕೊಂಡ ಶಿಲ್ಪಿಗಳ ಮನೆತನಗಳನ್ನು ಕಾಣಬಹುದಾಗಿದೆ ಎಂದರು.
ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ನಿರಂಜಮೂರ್ತಿ ಆಗರದಹಳ್ಳಿ ಮಾತನಾಡಿ, ವಿಶ್ವದ ಸೃಷ್ಟಿಕರ್ತನಾದ ಬ್ರಹ್ಮದೇವ ಭೂಲೋಕದಲ್ಲಿ ಎಲ್ಲ ಜೀವಿಗಳಿಗೆ ಒಂದು ಆಕಾರ ನೀಡಲು ವಿಶ್ವಕರ್ಮರನ್ನು ಸೃಷ್ಟಿಸಿದ. ಪ್ರತಿ ಜೀವರಾಶಿಗಳಿಗೆ ಆಕಾರ, ರೂಪ ನೀಡುವವನು ವಿಶ್ವಕರ್ಮ. ಜಕಣಾಚಾರಿ ಅದ್ಭುತ ವಿಶ್ವಕರ್ಮನಾಗಿದ್ದು, ಅವರು ದೇವಾಲಯಗಳಿಗೆ, ಶ್ರದ್ದಾಕೇಂದ್ರಗಳಿಗೆ ವಿಶಿಷ್ಟವಾದ ವಿಗ್ರಹ, ಶಿಲ್ಪಗಳನ್ನು ಕೆತ್ತಿ, ಅಮರಶಿಲ್ಪಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರ್ಕಾರ ಇಂತಹ ಅಮರಶಿಲ್ಪಿಯನ್ನು ಗುರುತಿಸಿ ಸಂಸ್ಮರಣಾ ದಿನಾಚರಣೆ ಆಚರಿಸುತ್ತಿರುವುದಕ್ಕೆ ನಾವೆಲ್ಲ ಋಣಿಯಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಭದ್ರ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಕಾಂತೇಶ್ ಕೆ.ಇ, ಜಿಲ್ಲಾ ವಿಶ್ವಬ್ರಾಹ್ಮಣರ ಸಂಘದ ಅಧ್ಯಕ್ಷ ಎನ್.ಸೋಮಾಚಾರಿ, ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ರಮೇಶ್, ಶ್ರೀ ಹರಕೆರೆ ಕಾಳಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ, ಸಮಾಜದ ಮುಖಂಡರು, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಇತರರು ಹಾಜರಿದ್ದರು.