ಹೊಸಗುಂದ ದೇವಾಲಯದ ಆವರಣದಲ್ಲಿ ಸಾಲು ಸಾಲುಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದ್ದ ದೀಪಗಳಿಗೆ ದೇವಾಲಯಕ್ಕೆ ಬಂದಿರುವ ಭಕ್ತರು ದೀಪ ಬೆಳಗಿಸಿ ಧನ್ಯರಾದರು. ದೇವಾಲಯದ ಇಡೀ ಆವರಣವು ದೀಪಗಳಿಂದ ಕಂಗೊಳಿಸುತ್ತಿತ್ತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು, ಇಂದಿರಾ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇಡೀ ದೇವಾಲಯದ ಆವರಣ, ಗರ್ಭಗುಡಿ, ಕಲ್ಯಾಣಿ, ವಿಶೇಷ ಮರಗಳ ಸುತ್ತಲೂ ದೀಪಗಳನ್ನು ಸುಂದರವಾಗಿ ಕಾಣುವಂತೆ ಜೋಡಿಸಿದ್ದರು.
ಲಕ್ಷ ದೀಪೋತ್ಸವ ಆರಂಭವಾದ ನಂತರದಲ್ಲಿ ದೇವಾಲಯ ದೀಪಾಲಂಕಾರದಿಂದ ಅದ್ಭುತವಾಗಿ ಕಾಣುತ್ತಿತ್ತು. ದೀಪಗಳ ಬೆಳಕು ವಿಶೇಷ ಆಕರ್ಷಣೆಯಿಂದ ನೋಡುಗರನ್ನು ಸೆಳೆಯುತ್ತಿತ್ತು.
ದೀಪೋತ್ಸವ ಚಾಲನೆ ನೀಡಿದ ಪದ್ಮಶ್ರೀ ಪುರಸ್ಕøತ ವಿ.ಆರ್.ಗೌರಿಶಂಕರ್ ಮಾತನಾಡಿ, ಲೋಕಲ್ಯಾಣಾರ್ಥವಾಗಿ ಹೊಸಗುಂದಲ್ಲಿ ಲಕ್ಷ ದೀಪೋತ್ಸವ ನಡೆಸುತ್ತಿದ್ದು, ಶೃಂಗೇರಿ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಹೊಸಗುಂದ ಉತ್ಸವ ಯಶಸ್ವಿಯಾಗಿದೆ. ಹೊಸಗುಂದ ಉತ್ಸವದಲ್ಲಿ ಜಾನಪದ ಸ್ಪರ್ಧೆ, ಸಂಗೀತ, ನೃತ್ಯ, ಧಾರ್ಮಿಕ ಸೇರಿದಂತೆ ವೈವಿಧ್ಯ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದಿವೆ ಎಂದರು.
ಅಕಾಲಿಕ ಮಳೆಯು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ತೊಂದರೆ ಉಂಟುಮಾಡಿದೆ. ಇತ್ತೀಚೆಗಷ್ಟೇ ಜನರು ಕರೊನಾ ಸಂಕಷ್ಟದಿಂದ ಹೊರಬರುತ್ತಿದ್ದಾರೆ. ಜನರು ದೀಪೋತ್ಸವಗಳಲ್ಲಿ ಶ್ರದ್ಧೆ ಭಕ್ತಿಯಿಂದ ತೊಡಗಿಸಿಕೊಂಡು ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲೆಡೆ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸಗುಂದ ಇನ್ನೂ ಸಮೃದ್ಧವಾಗಿ ಬೆಳಗಲಿ ಎಂದು ಆಶಿಸಿದರು.
ಹಿರಿಯ ಜಾನಪದ ಕಲಾವಿದ ಬಿ.ಟಾಕಪ್ಪ ಮಾತನಾಡಿ, ಸನಾತನ ಕಾಲದಿಂದಲೂ ಕಾರ್ತಿಕ ದೀಪೋತ್ಸವಗಳಿಗೆ ತನ್ನದೇ ಆದ ಮಹತ್ವವಿದೆ. ಎಲ್ಲ ಗ್ರಾಮಗಳಲ್ಲಿಯು ದೇವಾನುದೇವತೆಗಳ ದೇವಾಲಯಗಳಲ್ಲಿ ಹಣತೆ ದೀಪ ಹಚ್ಚಿ ಬೆಳಗಿಸುತ್ತಾರೆ. ಇಡೀ ಊರಿಗೆ ಊರೇ ಉತ್ಸವ ನಡೆಸುತ್ತಾರೆ ಎಂದು ಹೇಳಿದರು.
ಇತಿಹಾಸ ಪ್ರಸಿದ್ಧ ಹೊಸಗುಂದ ಉತ್ಸವ ಮತ್ತು ಲಕ್ಷದೀಪೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಮಾದರಿಯಾಗಿ ನಡೆದಿದೆ. ನಶಿಸಿ ಹೋಗುತ್ತಿರುವ ಆಚರಣೆ ಮತ್ತು ಆರಾಧನೆಗಳಿಗೆ ಮತ್ತೆ ಜೀವಕಳೆ ತುಂಬುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀತ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿದ್ದೇವೆ ಎಂದರು.
ಹೊಸಗುಂದ ಉತ್ಸವದ ಮೂರನೇ ದಿನದಂದು ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ವನಶ್ರೀ ಸಂಸ್ಥೆಯಿಂದ ಜಲಯೋಗ ನಡೆಯಿತು. ಸಾಗರದ ತೇಜಸ್ವಿ ತಬಲಾ ತಂಡದಿಂದ ವಾದ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಲಕ್ಷದೀಪೋತ್ಸವದ ನಂತg ಪ್ರದ್ಯುಮ್ನ ಮತ್ತು ತಂಡದವರಿಂದ ಶ್ರೀ ದುರ್ಗಾದೇವಿ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕøತ ಸಾಧಕರನ್ನು ಸನ್ಮಾನಿಸಲಾಯಿತು.
ಶೃಂಗೇರಿ ಶಂಕರಮಠ ಸಾಗರದ ಧರ್ಮಾಧಿಕಾರಿ ಅಶ್ವಿನಿಕುಮಾರ್, ಸೂರ್ಯಶಾಸ್ತ್ರಿ, ದೇವಾಲಯ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್, ಬಸವರಾಜ್, ಆರ್.ಎನ್.ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.
ಹೊಸಗುಂದ ಉತ್ಸವದಲ್ಲಿ ಆಯೋಜಿಸಿದ್ದ ಲಕ್ಷ ದೀಪೋತ್ಸವಕ್ಕೆ ಪದ್ಮಶ್ರೀ ಪುರಸ್ಕøತ ವಿ.ಆರ್.ಗೌರಿಶಂಕರ್ ಚಾಲನೆ ನೀಡಿದರು. ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸಿಎಂಎನ್ ಶಾಸ್ತ್ರಿ ಇದ್ದರು.

error: Content is protected !!