ಸಾಗರ: ಪ್ರಾದೇಶಿಕ ಉತ್ಸವಗಳಿಂದ ಸ್ಥಳೀಯ ಊರಿನ ಕಲಾವಿದರಿಗೆ ಉತ್ತಮ ಅವಕಾಶ ಸಿಗುವ ಜತೆಯಲ್ಲಿ ಪ್ರತಿಭೆ ಅನಾವರಣಗೊಳಿಸಲು ಅನುಕೂಲವಾಗುತ್ತದೆ ಎಂದು ಸಂಗೀತ ನಿರ್ದೇಶಕ ಚಿನ್ಮಯ್ ಎಮ್ ರಾವ್ ಹೇಳಿದರು.
ಸಾಗರ ತಾಲೂಕಿನ ಸಮೀಪದ ಹೊಸಗುಂದದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ “ಹೊಸಗುಂದ ಉತ್ಸವ ಹಾಗೂ ಲಕದೀಪೋತ್ಸವ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲಾವಿದರಿಗೆ ಕಲೆಯ ಅಭಿವ್ಯಕ್ತಗೊಳಿಸಲು ಉತ್ಸವಗಳೇ ಜೀವಾಳ, ಇಂತಹ ಪ್ರಾದೇಶಿಕ ಉತ್ಸವಗಳಿಂದ ಸ್ಥಳೀಯ ಕಲಾವಿದರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತವೆ. ಅದರಲ್ಲಿಯೂ ಪ್ರಾದೇಶಿಕ ಐತಿಹ್ಯವನ್ನು ನಾಡಿನ ಜನತೆಗೆ ಪರಿಚಯಿಸುವ ಮೂಲಕ ಹೊಸಗುಂದ ಉತ್ಸವ ಹೊಸ ಭಾಷ್ಯ ಬರೆದಿದೆ ಎಂದು ತಿಳಿಸಿದರು. ಸ್ಥಳೀಯ ವೇದಿಕೆಗಳಲ್ಲಿ ಸಿಗುವ ಅವಕಾಶಗಳಿಂದ ಪ್ರತಿಭೆ ಅನಾವರಣಕ್ಕೆ ಸಹಕಾರಿ ಆಗುತ್ತದೆ. ಪ್ರಸಿದ್ಧ ಕಲಾವಿದರನ್ನು ಉತ್ಸವಗಳಲ್ಲಿ ಆಮಂತ್ರಿಸಿ ಅವರ ಕಲಾಪ್ರತಿಭೆಯನ್ನು ಪರಿಚಯಿಸುವುದರಿಂದ ಯುವ ಕಲಾವಿದರು ಪ್ರೇರಣೆಗೊಳ್ಳುತ್ತಾರೆ ಎಂದರು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್.ಶಾಸ್ತ್ರಿ ಮಾತನಾಡಿ, ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಇಲ್ಲಿಯ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಹೊಸಗುಂದ ಉತ್ಸವ ವರ್ಷದಿಂದ ವರ್ಷಕ್ಕೆ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದು, ಕಲಾವಿದರ ಸಹಕಾರದಿಂದ ಯಶಸ್ಸು ಕಾಣುತ್ತಿದೆ ಎಂದು ಹೇಳಿದರು. ಮೂರು ದಿನಗಳ ಕಾಲ ನಡೆಯುವ ಹೊಸಗುಂದ ಉತ್ಸವದಲ್ಲಿ ನಾಡಿನ ಹೆಸರಾಂತ ಕಲಾವಿದರು ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಕಲೆಯ ಜೀವಂತಿಕೆ ಇರುವುದೇ ಗ್ರಾಮೀಣ ಪ್ರದೇಶದಲ್ಲಿ. ಅವುಗಳಿಗೆ ವೇದಿಕೆಯನ್ನು ನಿರ್ಮಿಸಿಕೊಡುವ ಕೆಲಸ ಆಗಬೇಕು. ಕಲಾವಿದರು ಪ್ರಸಿದ್ಧಿಗೆ ಬರಬೇಕಾದರೆ ಅವಕಾಶಗಳು ತೆರೆದುಕೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಹೊಸಗುಂಡ ಉತ್ಸವ ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಉತ್ಸವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜಾನಪದ ನೃತ್ಯ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹೊಸಗುಂದ ಹಿರಿಯ ನಾಗರೀಕ ಶ್ರೀನಿವಾಸ್ ಕೋವಿ ಉತ್ಸವದ ಕಾರ್ಯಕ್ರಮವನ್ನು ಭತ್ತದ ಗೊಣಬೆಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನಮ್ಮ ಪ್ರದೇಶದಲ್ಲಿ ಹೊಸಗುಂದ ದೇವಾಲಯ ನಗರಿಯ ಜೀಣೋದ್ಧಾರ ನಡೆದು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತವೆ. ಅಂತೆಯೇ ಹೊಸಗುಂದ ಉತ್ಸವವು ಊರಿಗೆ ಕಳೆತಂದಿದೆ ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಿದ ಯೋಗಪಟುಗಳಿಂದ ಯೋಗ ಪ್ರದರ್ಶನ ನಡೆಯಿತು. ಪ್ರದ್ಯುಮ್ನ ಮತ್ತು ಸಂಗಡಿಗರು ಭರತನಾಟ್ಯ ಪ್ರದರ್ಶಿಸಿದರು. ಶ್ರೀ ವೀರಾಂಜನೇಯ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಎನ್ಎಸ್ಎಸ್ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ನಟ ಪುನೀತ್ ರಾಜ್ಕುಮಾರ್ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ವನಶ್ರೀ ವಿದ್ಯಾಸಂಸ್ಥೆ ಸ್ಥಾಪಕ ಮಂಜಪ್ಪ, ಶೋಭಾ ಶಾಸ್ತ್ರಿ, ಬಸವರಾಜಪ್ಪ ಹೆಡತ್ರಿ, ಕೋವಿ ಪುಟ್ಟಪ್ಪ, ಎನ್.ಎಸ್.ಎಸ್ ಶಿಬಿರಾಧಿಕಾರಿ ಲೋಕೇಶಪ್ಪ ಮತ್ತಿತರರು ಇದ್ದರು.
ಸಾಗರದ ಆನಂದಪುರದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಉತ್ಸವದಲ್ಲಿ ಡಿಸೆಂಬರ್ 2ರಂದು ಹೊಸಗುಂದ ಉತ್ಸವದ ಪ್ರಯುಕ್ತ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಜೆ 4ಕ್ಕೆ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಸಂಜೆ 7ಕ್ಕೆ ಯೋಗ ನೃತ್ಯ , ಪ್ರಸಿದ್ಧ ಗಾಯಕ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ, ನಂತರ ಕಲಾಸಿಂಚನ ಬಳಗದಿಂದ ಕೆರೆಗೆ ಹಾರ ನಾಟಕ ಪ್ರದರ್ಶನ ಇರಲಿದೆ.