ಉತ್ತರ ಕನ್ನಡ, ನವೆಂಬರ್ 25 : ಭಾರತದ ಅತಿ ಎತ್ತರದ ಜೋಗ ಜಲಪಾತ ಮತ್ತು ಸುತ್ತಮುತ್ತಲಿನ ನಿಸರ್ಗದ ಸೌಂದರ್ಯವನ್ನು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಲ್ಹೋಟ್ ಅವರು ವೀಕ್ಷಿಸಿ ಸಂತಸ ಪಟ್ಟರು.
ನವೆಂಬರ್ 24ರಂದು ರಾತ್ರಿ ಜೋಗದಲ್ಲಿ ವಾಸ್ತವ್ಯ ಹೂಡಿದ ಅವರು, ಇಂದು ಮುಂಜಾನೆಯೇ ಜೋಗದ ರಾಜಾ ರಾಣಿ ರೋರರ್ ರಾಕೆಟ್ ಹೆಸರಿನ ಜಲಧಾರೆಗಳ ಮಾಹಿತಿಯನ್ನು ಪಡೆದರು .
ನಂತರ ದಟ್ಟವಾದ ಕಾಡು ಮತ್ತು ಗುಡ್ಡಗಳ ನಡುವಲ್ಲಿ ಶರಾವತಿ ನದಿಯು ಹರಿದು ಅತಿ ಎತ್ತರದಿಂದ ಭೋರ್ಗರೆಯುತ್ತಾ ನಾಲ್ಕು ಸೀಳಾಗಿ ಧುಮುಕುತ್ತಿರುವ ವೈಭವದ ದೃಶ್ಯವನ್ನು ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಡಿಸಿ ಮುಲ್ಲೈ ಮುಹಿಲನ್, ಎಸ್ ಪಿ ಡಾ.ಸುಮನ್ ಡಿ ಪೆನ್ನೇಕರ್, ಕುಮ್ಟ ಎಸಿ ರಾಹುಲ್ ಪಾಂಡೆ ಉಪಸ್ಥಿತರಿದ್ದರು.