News Next

ಶಿವಮೊಗ್ಗ, ಅಕ್ಟೋಬರ್ 30  ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ನಿಯಮಾವಳಿಯಲ್ಲಿ ತಿದ್ದುಪಡಿ ತಂದಿದ್ದು, ಅದರನ್ವಯ ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರುಪಡಿಸುವ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ.
     ಈ ತಿದ್ದುಪಡಿ ನಿಯಮದಂತೆ ಇನ್ನು ಮುಂದೆ ಅಧಿಕೃತ ಮಾರಾಟಗಾರರಿಂದ ಖರೀದಿಸಿದ, ಸಂಪೂರ್ಣವಾಗಿ ನಿರ್ಮಿತವಾಗಿರುವ ಮೋಟಾರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಛೇರಿಗೆ ಕೊಂಡೊಯ್ಯದೆ ನೋಂದಣಿ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಅಧಿಕೃತ ಮಾರಾಟಗಾರರಿಂದ ಮಾರಾಟ ಮಾಡಿದ ವಾಹನಗಳ ವಿವರಗಳನ್ನು ವಾಹನ-4 ಪೋರ್ಟಲ್ ನಲ್ಲಿ ಮಾರಾಟಗಾರರು ನಮೂದಿಸಿ ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್‍ಲೈನ್ ಮೂಲಕ ಪಾವತಿಸಿ, ಅರ್ಜಿಯನ್ನು ಆನ್‍ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.  ಆನ್‍ಲೈನ್ ನಲ್ಲಿ ಸ್ವೀಕರಿಸಿದಂತಹ ಅರ್ಜಿಗಳನ್ನು ಆನ್‍ಲೈನ್ ನಲ್ಲಿಯೇ ಪರಿಶೀಲಿಸಿ, ನೋಂದಣಿ ಪ್ರಾಧಿಕಾರದಿಂದ ಅನುಮೋದನೆ ಮತ್ತು ನೋಂದಣಿ ಕ್ರಮಾಂಕವನ್ನು ನೀಡಲಾಗುತ್ತದೆ. ವಾಹನ ಮಾಲೀಕರು/ ಸಾರ್ವಜನಿಕರು ಈ ಸೌಲಭ್ಯದ ಉಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ತಿಳಿಸಿದ್ದಾರೆ.

error: Content is protected !!