ನವೀನ ಆವಿಷ್ಕಾರಗಳೊಂದಿಗೆ ಯೋಜನೆಯನ್ನು ಅನುಷ್ಟಾನಗೊಳಿಸಬೇಕು : ಡಾ.ಆರ್.ಸಿ.ಅಗರ್ವಾಲ್
ಶಿವಮೊಗ್ಗ, ಅಕ್ಟೋಬರ್ 01:ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಎನ್ಎಹೆಚ್ಇಪಿ(ನ್ಯಾಷನಲ್ ಅಗ್ರಿಕಲ್ಚರಲ್ ಹೈಯರ್ ಎಜುಕೇಷನ್ ಪ್ರಾಜೆಕ್ಟ್) ಒಂದು ಅತ್ಯುತ್ತಮ ಅವಕಾಶವಾಗಿದ್ದು, ನವೀನ ಯೋಚನೆಗಳು, ಆವಿಷ್ಕಾರದೊಂದಿಗೆ ಇದರ ಅನುಷ್ಟಾನ ಮಾಡುವ ಮೂಲಕ ಸಮಾಜಕ್ಕೆ ಇದು ಉತ್ತಮ ಕೊಡುಗೆಯಾಗಬೇಕು ಎಂದು ನವದೆಹಲಿಯ ಐಸಿಎಆರ್ ಡೆಪ್ಯುಟಿ ಡೈರೆಕ್ಟರ್ ಜನಲರ್ ಡಾ.ಆರ್.ಸಿ ಅಗರ್ವಾಲ್ ಅಭಿಪ್ರಾಯಪಟ್ಟರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಇವರ ವತಿಯಿಂದ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ನವುಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಎಂ.ಎಸ್.ಸ್ವಾಮಿನಾಥನ್ ಹಾಲ್ನಲ್ಲಿ ಏರ್ಪಡಿಸಲಾಗಿದ್ದ ‘ಪಿಜಿ ರೀಸರ್ಚ್ ಕಾನ್ಫರೆನ್ಸ್-2021’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ಸೃಜನಾತ್ಮಕತೆ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಮುಂದೆ ಬರಬೇಕು. ಪ್ರತ್ಯೇಕತೆ ತೋರದೆ ಇಡೀ ದೇಶ ಒಂದು ಎನ್ನುವ ರೀತಿಯಲ್ಲಿ ಕಾರ್ಯತತ್ಪರಾಗಬೇಕು ಎಂದರು.
2016 ರಲ್ಲಿ ಕೇವಲ 35 ಸಾವಿರ ವಿದ್ಯಾರ್ಥಿಗಳು ಕೃಷಿ ಸ್ನಾತಕೋತ್ತರಕ್ಕೆ ಸೇರಿದ್ದರು. ಈಗ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಕ್ಷೇತ್ರವೂ ಬೆಳೆಯುತ್ತಿದೆ. ಈ ಕ್ಷೇತ್ರ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಬೇಕಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ.
ವ್ಯವಸ್ಥಿತವಾಗಿ ಕೆಲಸ ಮಾಡುವ ಬಗೆಯನ್ನು ಅರಿತು ತಂಡಗಳಲ್ಲಿ ಕೆಲಸ ಮಾಡಬೇಕು. ಟೀಂ ವರ್ಕ್ ಒಂದು ಒಳ್ಳೆಯ ಅವಕಾಶವಾಗಿದೆ. ದೇಶದಲ್ಲಿ 64 ಕೃಷಿ ವಿವಿಗಳಿವೆ. ಅದರಲ್ಲಿ ಐಡಿಪಿ(ಇನ್ಸ್ಟಿಟ್ಯೂಷನಲ್ ಡೆವೆಲಪ್ಮೆಂಟ್ ಪ್ಲಾನ್) ಅಡಿ ನ್ಯಾಷನಲ್ ಅಗ್ರಿಕಲ್ಚರಲ್ ಹೈಯರ್ ಎಜುಕೇಷನ್ ಪ್ರಾಜೆಕ್ಟ್(ಎನ್ಎಹೆಚ್ಇಪಿ) ಪಡೆದಿರುವ ವಿವಿ ಗಳಿಗೆ ಹೊಸ ರೀತಿಯಲ್ಲಿ, ವ್ಯವಸ್ಥಿತ ಮತ್ತು ತಂಡಗಳಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿದೆ. ಅನೇಕ ಚಟುವಟಿಕೆಗಳು ಇದರಲ್ಲಿ ಇವೆ. 62 ಸೂಚ್ಯಂಕಗಳು ಮತ್ತು ಬೇಸ್ಲೈನ್ಗಳಿದ್ದು ಉತ್ತಮ ರೇಟಿಂಗ್ ಪಡೆಯುವ ನಿಟ್ಟಿನಲ್ಲಿ ಹೊಸ ಯೋಚನೆಗಳು ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡು ಕೆಲಸ ಮಾಡಬೇಕಿದೆ.
2024 ರರೆಗೆ ಪ್ರಾಜೆಕ್ಟ್ ವಿಸ್ತರಣೆ: ವಿಶ್ವವಿದ್ಯಾನಿಲಯವು ಎನ್ಎಹೆಚ್ಇಪಿ ಯಡಿ 2020 ನೇ ಸಾಲಿನಿಂದ ಉತ್ತಮವಾಗಿ ನಿರ್ವಹಿಸುತ್ತಿದ್ದು, ಈ ಯೋಜನೆಯನ್ನು 2024 ರ ಮಾರ್ಚ್ವರೆಗೆ ವಿಸ್ತರಿಸಲಾಗುವುದು. ಇಲ್ಲಿಯ ತಂಡ ಸಂವೇದನಾಶೀಲತೆಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಾಚರಣೆ ಆಧಾರದಲ್ಲಿ ಅಭಿವೃದ್ದಿ ಸಾಧಿಸಬೇಕಿದೆ. ಪ್ರಾಧ್ಯಾಪಕರು ತಾವು ಸಹ ಉನ್ನತವಾಗಿ ಜ್ಞಾನ ಪಡೆದು ವಿದ್ಯಾರ್ಥಿಗಳಿಗೆ ನೀಡಬೇಕು. ಶಿಕ್ಷಕ ಮಾದರಿಯಾಗಿ ನಿಲ್ಲಬೇಕು. ಹಾಗೂ ತಂಡ ಗುಣಮಟ್ಟದ ಕಾರ್ಯಾಚರಣೆ ಮಾಡಬೇಕು.
ಎಲ್ಲವನ್ನು ಡಿಜಿಟಲೈಸ್ ಮಾಡಿ, ನಮ್ಮ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ಮಾನವ ಸಂಪನ್ಮೂಲದ ಬೇಡಿಕೆಯನ್ನು ಕಡಿತಗೊಳಿಸಬೇಕು. ಸಂಶೋಧನೆಯಲ್ಲಿ ಸಹ ಉನ್ನತ ತಂತ್ರಜ್ಞಾನ ಬಳಕೆ ಮಾಡಬೇಕು. ಕೊರೊನಾ ವೇಳೆ ಆನ್ಲೈನ್ ಶಿಕ್ಷಣ ಮುಂಚೂಣಿಗೆ ಬಂದಿದೆ. ಉನ್ನತ ತಂತ್ರಜ್ಞಾನದೊಂದಿಗೆ ಇತರೆ ಆಸಕ್ತಿದಾಯಕ ವಿಷಯಗಳನ್ನು ಸಹ ಕಲಿಯಲು ಮುಂದಾಗಬೇಕು. ಹಾಗೂ ವಿವಿ ಇದಕ್ಕೆ ಪ್ರೋತ್ಸಾಹಿಸಬೇಕು.
ಮೂಲಶಕ್ತಿ ಗುರುತಿಸಿ: ವಿಶ್ವವಿದ್ಯಾನಿಲಯದ ಮೂಲ ಶಕ್ತಿ ಏನೆಂಬುದನ್ನು ಗುರುತಿಸಿ ಆ ನಿಟ್ಟಿನಲ್ಲಿ ಅಭಿವೃದ್ದಿ ಹೊಂದುವ ಬಗ್ಗೆ ಯೋಜನೆ ಹಾಕಿಕೊಳ್ಳಬೇಕು ಎಂದ ಅವರು ಪಿಜಿ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರುಗಳಿಗೆ ಎನ್ಎಹೆಚ್ಇಪಿ ಒಂದು ಅವಕಾಶ. ಈ ಪ್ರಾಜೆಕ್ಟ್ ಅಡಿ ಕಲಿಕೆ ಮತ್ತು ಇದರ ಪರಿಣಾಮಕಾರಿ ಅನುಷ್ಟಾನ ತುಂಬಾ ಮುಖ್ಯ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನವದೆಹಲಿ ಐಸಿಎಆರ್ನ ಎಡಿಜಿ ಡಾ.ಎಸ್.ಭಾಸ್ಕರ್ ಮಾತನಾಡಿ, ಇಂದು ಮಾಹಿತಿ ನಮ್ಮ ಬೆರಳತುದಿ ಇದ್ದರೂ ನಾವು ಜ್ಞಾನದ ವಿಚಾರದಲ್ಲಿ ಅಪ್ಡೇಟ್ ಆಗಿಲ್ಲ. ಜ್ಞಾನ ನೀಡುವಂತಹ ಸಮೂಹ ಸಂವಹನಗಳಿದ್ದು ಅದನ್ನು ವಿದ್ಯಾರ್ಥಿಗಳು ಬಳಕೆ ಮಾಡಬೇಕು. ನಮ್ಮ ದೇಶ ಇಂದು 308 .65 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದು, ಸ್ವಾವಲಂಬಿಯಾಗಿದೆ. ಕೊರೊನಾದಂತಹ ಸಮಯದಲ್ಲೂ ಕೃಷಿ ಕ್ಷೇತ್ರ ಉತ್ತಮ ಉತ್ಪಾದನೆ ನೀಡಿದೆ. ಹವಾಮಾನ ತುರ್ತು ಎದುರಿಸುತ್ತಿರುವ ನಾವು ಇಂದು ಸಿರಿಧಾನ್ಯ ಮತ್ತು ಇತರೆ ಬೆಳೆಗಳಿಗೆ ಒತ್ತು ನೀಡಬೇಕು.
ಸ್ನಾತಕೋತ್ತರ ವಿದ್ಯಾರ್ಥಿಗಳು ಒಳ್ಳೆಯ ಜ್ಞಾನವನ್ನು ಪಡೆದು ನಾವೀನ್ಯ ರೀತಿಯಲ್ಲಿ ಯೋಜನೆಗಳನ್ನು ತಯಾರಿಸಬೇಕು. ಇಲ್ಲದಿದ್ದರೆ ಈ ಸ್ಪರ್ದಾತ್ಮಕ ಜಗತ್ತಿನಲ್ಲಿ ಗೆಲ್ಲುವುದು ಕಷ್ಟಸಾಧ್ಯ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಕಲಿಯಬೇಕಿದೆ. ಪ್ರಾದೇಶಿಕವಾಗಿ ಅಥವಾ ಪ್ರತ್ಯೇಕತೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಇಡೀ ಜಗತ್ತಿಗೆ ತೆರೆದುಕೊಂಡು ಕೆಲಸ ಮಾಡಬೇಕಿದೆ.
ಈ ವಿಶ್ವವಿದ್ಯಾನಿಲಯಕ್ಕೆ ನ್ಯಾಷನಲ್ ಅಗ್ರಿಕಲ್ಚರಲ್ ಹೈಯರ್ ಎಜುಕೇಷನ್ ಪ್ರಾಜೆಕ್ಟ್(ಎನ್ಎಹೆಚ್ಇಪಿ) ದೊರೆತಿರುವುದು ಸಂತಸದ ವಿಚಾರ. ಹಾಗೆಯೇ ಈ ಪ್ರಾಜೆಕ್ಟ್ ಅನುಷ್ಟಾನಕ್ಕೆ ಅಗತ್ಯವಿರುವ ಇತರೆ ಪೂರಕ ಮೂಲಭೂತ ಸೌಕರ್ಯಗಳ ಅಗತ್ಯ ಕೂಡ ಇದೆ ಎಂದ ಅವರು ಪಿಜಿ ವಿದ್ಯಾರ್ಥಿಗಳು ಉನ್ನತವಾಗಿ ಯೋಚಿಸುವ ಮೂಲಕ ತಮ್ಮ ಗುರಿ ಸಾಧಿಸಬೇಕೆಂದರು.
ತೀರ್ಥಹಳ್ಳಿಯ ಶಿಕ್ಷಣ ತಜ್ಞ ಅರುಣ ಕುಮಾರ ವಿ.ಕೆ, ಮಾತನಾಡಿ, ಐಸಿಎಆರ್ ಡಿಡಿಜಿ ಯವರು ನಮ್ಮ ವಿಶ್ವವಿದ್ಯಾನಿಲಯಕ್ಕೆ ಐಡಿಪಿ ಪ್ರಾಜೆಕ್ಟ್ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಧಾರವಾಡ ಬಿಟ್ಟರೆ ನಂತರ ಶಿವಮೊಗ್ಗ ವಿವಿ ಗೆ ಮಾತ್ರ ಈ ಪ್ರಾಜೆಕ್ಟ್ ನೀಡಲಾಗಿದೆ. ಅವೆರಡೂ ವಿವಿ ಅತ್ಯಂತ ಹಳೆಯ ವಿವಿ ಗಳಾಗಿವೆ. ನಮ್ಮ ವಿವಿ ಗೆ ಕೇವಲ 9 ವರ್ಷ ಆಗಿದ್ದು, ಐಡಿಪಿ ಯಂತಹ ಪ್ರಾಜೆಕ್ಟ್ ಲಭಿಸಿರುವುದು ಸಂತಸದ ಸಂಗತಿ.
ಸ್ನಾತಕೋತ್ತರ ಮತ್ತು ಪಿಹೆಚ್ಡಿ ವಿದ್ಯಾರ್ಥಿಗಳು ಹೊಸ ರೀತಿಯಲ್ಲಿ ಯೋಚನೆ ಮಾಡಬೇಕು. ನಮ್ಮ ವಿವಿ ಸಾವಯವ ಕೃಷಿಗೆ ಒತ್ತು ನೀಡುವ ಉದ್ದೇಶವನ್ನು ಹೊಂದಿದ್ದರೂ ಈ ಕೃಷಿಯಲ್ಲಿ ಅಂತಹ ದೊಡ್ಡ ಪ್ರಯೋಗಗಳು ಆಗಿಲ್ಲ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ಸಂಶೋಧನೆಗಳನ್ನು ಮಾಡಬೇಕು. ಪರಿಸರ ಆಘಾತಗಳು ಸೇರಿದಂತೆ ಪರಿಸರ ಸಂರಕ್ಷಣಾ ಕ್ರಮಗಳೊಂದಿಗೆ ಸಾವಯವ ಕೃಷಿಯನ್ನು ವೃದ್ದಿಸುವ ಹಾಗೂ ನಮ್ಮ ಊಟದ ತಟ್ಟೆಯನ್ನು ವಿಷರಹಿತ ಮಾಡುತ್ತೇವೆ ಎಂದು ಹೇಳುವ ಹಾಗೆ ಬೆಳವಣಿಗೆಗಳು ಆಗಬೇಕು.
ಇಂದು ನಮ್ಮ ದೇಶ ಆಹಾರ ಸ್ವಾವಲಂಬನೆ ಸಾಧಿಸಿದೆ. ಆದರೆ ಗುಣಮಟ್ಟದ ಆಹಾರ ನೀಡುತ್ತಿದ್ದೇವಾ ಎಂದು ನೋಡಬೇಕು. ವಿದ್ಯಾರ್ಥಿಗಳು ನಾವು ವಿಷರಹಿತ ಆಹಾರ ನೀಡುವ ನಿಟ್ಟಿನಲ್ಲಿ ಭಿನ್ನ ಪ್ರಯೋಗಗಳನ್ನು ಮಾಡುವ ಮೂಲಕ ಗುಣಮಟ್ಟದ ಆಹಾರ ನೀಡಲು ಕೀಟ ನಾಶಕ ಮುಕ್ತ, ಸಾವಯವ ಕೃಷಿಯನ್ನು ನೀಡಬೇಕೆಂದು ಆಶಿಸಿದರು.
ಕೆಎಸ್ಎನ್ಯುಎಹೆಚ್ಎಸ್ ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಬಂಟಗನಹಳ್ಳಿ ಎಸ್ಟೇಟ್ನ ಕೃಷಿ ಕೈಗಾರಿಕೋದ್ಯಮಿ ಬಿ.ಶಿವರಾಂ, ಪ್ರಗತಿಪರ ರೈತರಾದ ಸೊರಬದ ದೊಡ್ಡಗೌಡ ಸಿ ಪಾಟಿಲ್, ಚನ್ನಗಿರಿಯ ಕೆ.ನಾಗರಾಜ್, ಶಿವಮೊಗ್ಗದ ವೀರಭದ್ರಪ್ಪ ಪೂಜಾರಿ ಮಾತನಾಡಿದರು. ಹಾಗೂ ವಿವಿ ಮಂಡಳಿಯ ನಿರ್ದೇಶಕರು, ವಿವಿ ಪ್ರಾಧ್ಯಾಪಕರು, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.