ಪಾಲಿಕೆ ವ್ಯಾಪ್ತಿಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಸದ ಬುಟ್ಟಿಗಳ ವಿತರಣೆ
ಶಿವಮೊಗ್ಗ, ಸೆಪ್ಟೆಂಬರ್ 30 : ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಕಸದ ಬುಟ್ಟಿಗಳನ್ನು ನೀಡುವ ಸ್ವಚ್ಛ ಭಾರತದ ಯೋಜನೆಗೆ ಹಾಗೂ ಪಾಲಿಕೆಯ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಚಾಲನೆ ನೀಡಿದರು.
ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು, ಸಾಂಕೇತಿಕವಾಗಿ ನಗರದ ನಿವಾಸಿಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಿದರು.
ಮಹಾನಗರಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಈ ಯೋಜನೆಯ ಅಡಿಯಲ್ಲಿ ಒಟ್ಟು 82 ಸಾವಿರ ಮನೆಗಳಿಗೆ ಪಾಲಿಕೆ ವತಿಯಿಂದ ಕಸದ ಬುಟ್ಟಿಗಳನ್ನು ನೀಡಲಾಗುತ್ತಿದ್ದು, ಒಣ ಕಸ ಹಾಗೂ ಹಸಿ ಕಸ ಎಂದು ವಿಂಗಡಿಸುವ ಸಲುವಾಗಿ ಪ್ರತಿ ಮನೆಗೆ ನೀಲಿ ಹಾಗೂ ಹಸಿರು ಬಣ್ಣದ ಒಂದೊಂದು ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತಿದೆ.
ಖಾಯಂ ಹಾಗೂ ಹೊರಗುತ್ತಿಗೆ ಮೂಲಕ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಒಳಚರಂಡಿ ಕಾರ್ಮಿಕರನ್ನೊಳಗೊಂಡಂತೆ ಒಟ್ಟು 657 ಕಾರ್ಮಿಕರಿಗೆ ವರ್ಷಕ್ಕೆ ಒಂದು ಬಾರಿ ಸಂಪೂರ್ಣ ದೇಹ ಆರೋಗ್ಯ ಪರೀಕ್ಷೆ ಹಾಗೂ ಹೆಪಟೈಟಿಸ್-ಬಿ ಲಸಿಕೆಯನ್ನು ಸುಬ್ಬಯ್ಯ ಆಸ್ಪತ್ರೆಯಲ್ಲಿ ನೀಡುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದ ಅವರು ನಗರ ಹಾಗೂ ನಗರದ ಪ್ರತಿ ಮನೆಯ ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ಸ್ವಚ್ಛ ಭಾರತ ಮಿಷನ್‍ನ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿ ಮನೆಗಳಿಗೆ ಕಸದ ಬುಟ್ಟಿಗಳನ್ನು ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಚಿದಾನಂದ ಎಸ್ ವಠಾರೆ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಫಲಾನುಭವಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
(ಫೋಟೊ ಇದೆ)