ಭತ್ತ ಭಾರತದಲ್ಲಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಪ್ರಧಾನ ಆಹಾರ ಬೆಳೆ. ಭಾರತವು ಪ್ರಪಂಚದಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಕರ್ನಾಟಕವು ಭಾರತದ ಹತ್ತನೇ ಪ್ರಮುಖ ಅಕ್ಕಿ ಉತ್ಪಾದಿಸುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಭತ್ತವನ್ನು ವಿವಿಧ ಮಣ್ಣು, ವೈವಿಧ್ಯಮಯ ತಾಪಮಾನ ಮತ್ತು ಮಳೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದರಿಂದ ಬೇರೆ ಬೇರೆ ಕೀಟಗಳು ಬೇರೆ ಪ್ರದೇಶದಲ್ಲಿ ಬಾಧಿಸುತ್ತವೆ.
ಭಾರತದಲ್ಲಿ 70ಕ್ಕೂ ಹೆಚ್ಚು ಪ್ರಬೇಧಗಳನ್ನು ಭತ್ತದ ಕೀಟ ಪೀಡೆಗಳಾಗಿ ದಾಖಲಿಸಲಾಗಿದೆ ಮತ್ತು ಸುಮಾರು 20 ಜಾತಿಯ ಕೀಟಗಳು ಪ್ರಾಮುಖ್ಯತೆಯನ್ನು ಪಡೆದಿವೆ ಮತ್ತು ಬಹಳಷ್ಟು ಪ್ರದೇಶಗಳಲ್ಲಿ ಹಾನಿ ಮಾಡುತ್ತವೆ. ಒಟ್ಟಿನಲ್ಲಿ ವಿವಿಧ ಕೀಟಗಳು ಭತ್ತದ ಎಲ್ಲಾಭಾಗಗಳನ್ನು ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಹಾನಿ ಮಾಡಿ ಶೇ. 20 ರಿಂದ ಶೇ. 50 ರಷ್ಟು ಇಳುವರಿ ಕಡಿತ ಮಾಡುತ್ತವೆ.
ಈ ಕೆಳಗೆ ಭತ್ತದ ಮುಖ್ಯ ಕೀಟಗಳು ಮತ್ತು ನುಸಿಪೀಡೆಗಳು, ಅವುಗಳ ವೈಜ್ಞಾನಿಕ ಹೆಸರು, ಅವುಗಳ ಹಾನಿಯ ಲಕ್ಷಣ, ಜೀವನ ಚರಿತ್ರೆ ಮತ್ತು ಹತೋಟಿ ಕ್ರಮಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ. ಭತ್ತದ ಪ್ರಮುಖ ಕೀಟಗಳನ್ನು ರಸಹೀರುವ ಕೀಟಗಳು, ಕಾಂಡ ಕೊರೆಯುವ ಕೀಟಗಳು ಮತ್ತು ಎಲೆ ತಿನ್ನುವ ಕೀಟಗಳೆಂದು ವರ್ಗೀಕರಿಸಬಹುದಾಗಿದೆ. ಇವುಗಳ ಜೊತೆಗೆ ಪ್ರಮುಖ ನುಸಿಪೀಡೆಗಳ ಬಗ್ಗೆಯೂ ತಿಳಿಸಲಾಗಿದೆ.
ಹಸಿರು ಜಿಗಿಹುಳು ಹಾನಿಯ ಲಕ್ಷಣಗಳು:
ಅಪ್ಸರೆ ಮತ್ತು ಪ್ರೌಢಹುಳುಗಳು, ಎಲೆಗಳನ್ನು ಚುಚ್ಚಿ, ಕೋಶಗಳಿಂದ ರಸವನ್ನು ಹೀರುತ್ತವೆ. ಜೊತೆಗೆ ಅಪ್ಸರೆ ಮತ್ತು ಪ್ರೌಢ ಹುಳುಗಳು ಜಿಗುಟಾದ ಅಂಟು ದ್ರವವನ್ನು ಮಲದಂತೆ ಸ್ರವಿಸುತ್ತವೆ. ಇದು ಕಪ್ಪು ಶಿಲೀಂಧ್ರದ (ಸೂಟಿ ಮೋಲ್ಡ್) ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದ ಸಸ್ಯಗಳ ದ್ಯುತಿಸಂಶ್ಲೇಷಣ ಕ್ರಿಯೆಯು ಕಡಿಮೆಯಾಗುತ್ತದೆ. ಈ ಕೀಟಗಳು ನಂಜು ರೋಗಗಳಾದ ಡ್ವಾರ್ಪ್ ಟ್ರಾನ್ಸಿಟರಿ ಹಳದಿ ಟ್ರುಂಗ್ರೋ ವೈರಸ್ ಅನ್ನು ಹರಡುತ್ತವೆ. ಈ ಕೀಟಗಳು ಹಲವು ಹುಲ್ಲುಜಾತಿಯ ಕಳೆಗಳ ಮೇಲೆ ಆಶ್ರಯ ಪಡೆದು ಸಂತಾನೋತ್ಪತ್ತಿ ಮಾಡುತ್ತವೆ.
ಬಾಧಿತ ಸಸ್ಯಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತವೆ. ಸಸ್ಯಗಳನ್ನು ಅಲ್ಲಾಡಿಸಿದರೆ ಹೆಚ್ಚಿನ ಸಂಖ್ಯೆಯ ಜಿಗಿಹುಳುಗಳು ನೀರಿಗೆ ಹಾರುವುದನ್ನು ಕಾಣಬಹುದು. ಕಡಿಮೆ ಸಂಖ್ಯೆಯಲ್ಲಿದ್ದು ಸ್ವಲ್ಪ ಪ್ರಮಾಣದಲ್ಲಿ ಹಾನಿ ಮಾಡಿದರೆ ಸಸ್ಯದ ಬೆಳವಣಿಗೆಯ ಚೈತನ್ಯವನ್ನು ಕಡಿಮೆ ಮಾಡುತ್ತವೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು ಸಂತಾನೋತ್ಪತ್ತಿ ಹೊಂದಿ ಹಾನಿ ಮಾಡಿದರೆ ಸಂಪೂರ್ಣ ಒಣಗಲು ಆರಂಭಿಸುತ್ತವೆ.
ಜೀವನ ಚಕ್ರ: ಹಸಿರು ಮಿಶ್ರಿತ ಪಾರದರ್ಶಕ ಮೊಟ್ಟೆಗಳನ್ನು ಎಲೆಯ ಅಂಚಿನಲ್ಲಿ ಇಡುತ್ತವೆ. ಈ ಮೊಟ್ಟೆಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿದಂತೆ 10 ರಿಂದ 15 ಗುಂಪುಗಳಲ್ಲಿ ಇಡುತ್ತವೆ. ಪ್ರತಿ ಹೆಣ್ಣು ಜಿಗಿಹುಳುವು 200-300 ಮೊಟ್ಟೆಗಳನ್ನು ಇಡಬಹುದು. ಮೊಟ್ಟೆಯ ಅವಧಿ 6-7 ದಿನಗಳು. ಅಪ್ಸರೆಗಳು ಮೃದುವಾದ ದೇಹಹೊಂದಿದ್ದು ಬಿಳಿ ಹಳದಿ ಬಣ್ಣದಲ್ಲಿರುತ್ತವೆ. ಕ್ರಮೇಣ ಹಸಿರು ಬಣ್ಣಕ್ಕೆ ಬದಲಾಗುತ್ತದೆ. ಅಪ್ಸರೆಗಳ 5 ಇನ್ಸಾರ್ಸ್ಗಳನ್ನು ಹೊಂದಿದ್ದು, 25 ದಿನಗಳಲ್ಲಿ ಪ್ರೌಢ ಹಂತಕ್ಕೆ ಕಾಲಿಡುತ್ತವೆ. ಪ್ರೌಢ ಹುಳುಗಳು ಹಸಿರು ಬಣ್ಣದಿಂದ ಕೂಡಿದ್ದು ಮುಂದಿನ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆ ಅಥವಾ ಗೆರೆ ಇರುತ್ತದೆ. ಪ್ರೌಢ ಹಂತದಲ್ಲಿ ನೆಪೊಟಿಟಿಕ್ಸ್ ವೈರಸೆನ್ಸ್ ಮತ್ತು ನೆಪೊಟಿಟಿಕ್ಸ್ ನಿಗ್ರೊಪಿಕ್ಸ್ಸ್ ಗುರುತಿಸುವ ಬಗೆ ನೆಪೊಟಿಟಿಕ್ಸ್ ನಿಗ್ರೊಪಿಕ್ಟಸ್ ಗಂಡು ಕೀಟದ ರೆಕ್ಕೆಗಳ ಕಪ್ಪು ಕಲೆಗಳನ್ನು ಹೊಂದಿದ್ದು, ಕಪ್ಪು ಕಲೆಯು ರೆಕ್ಕೆಯ ಕೊನೆಯ ಭಾಗದವರೆಗೂ ವಿಸ್ತರಿಸುತ್ತದೆ. ಇವುಗಳ ಪ್ರೋನೋಟಮ್ ಮುಂಭಾಗದ ಅಂಚಿನಲ್ಲಿ ಕಪ್ಪು ಚುಕ್ಕೆ ಹೊಂದಿರುತ್ತದೆ ಮತ್ತು ಕಲೆಯ ಅಂಚಿನಲ್ಲಿ ಒಮದು ಕಪ್ಪು ಅಡ್ಡಗೆರೆಯುನ್ನು ಹೊಂದಿರುತ್ತವೆ.
ನೆಪೊಟಿಟಿಕ್ಸ್ ವೈರಸೆನ್ಸ್ನಲ್ಲಿ ಗಂಡು ಕೀಟದ ತಲೆಯ ಮೇಲೆ ಅಂಚಿನಲ್ಲಿ ಕಪ್ಪುಗೆರೆ ಇರುವುದಿಲ್ಲ ಮತ್ತು ರೆಕ್ಕೆಗಳ ಮೇಲೆ ಕಪ್ಪು ಗೆರೆಯ ರೆಕ್ಕೆ ಕೊನೆಯ ಭಾಗದವರೆಗೆ ವಿಸ್ತರಿಸುವುದಿಲ್ಲ. ಆದರೆ ಎರಡು ಪ್ರಬೇಧಗಳ ಹೆಣ್ಣು ಕೀಟಗಳು ಕಪ್ಪು ಕಲೆಗಳಿಲ್ಲದೆ ಹಸಿರು ಬಣ್ಣದಿಂದ ಕೂಡಿದ್ದು ಪ್ರಬೇಧಗಳನ್ನು ಗುರುತಿಸುವುದು ಕಷ್ಟಕರ.
ಹಸಿರು ಜಿಗಿಹುಳುವಿನ ಆರ್ಥಿಕ ಹಾನಿಯ ಸಂಖ್ಯೆ: ಪ್ರತಿ ತೆಂಡೆಗೆ 10-20 ಹುಳುಗಳು.
ನಿರ್ವಹಣೆ:
• ಪ್ರತಿ ವರ್ಷ ಹಸಿರು ಜಿಗಿಹುಳುವಿನ ಹಾನಿಗೆ ತುತ್ತಾಗುವ ಪ್ರದೇಶಗಳಲ್ಲಿ ಐ ಆರ್ 50, ವಿಕ್ರಮಾರ್ಯ, ಲಲತ್, ಖೈರಾ, ನಿಧಿ ಮುಂತಾದ ಕೀಟನಿರೋಧಕ ಪ್ರಬೇಧಗಳನ್ನು ಬೆಳೆಯಬಹುದು.
• ಸಸಿಮಡಿಗೆ 2.5 ಕೆ.ಜಿ/ 20 ಸೆಂಟ್ ಪ್ರದೇಶಕ್ಕೆ ಬೇವಿನ ಹಿಂಡಿ ಮೇಲುಗೊಬ್ಬರವಾಗಿ ಹಾಕುವುದರಿಂದ ಕೀಟನಿರೋಧಕ ಶಕ್ತಿ ಹೆಚ್ಚುತ್ತದೆ.
• ಹೆಕ್ಟೆರ್ಗೆ ಒಂದರಂತೆ ಬೆಳಕಿನ ಬಲೆಯನ್ನು ಬಳಸಬಹುದು.
• ಬದುಗಳ ಮೇಲೆ ಮತ್ತು ಸುತ್ತ ಮುತ್ತ ಕಳೆಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು.
• ಅಲಸಂದೆ, ಉದ್ದು, ಹೆಸರು ಅಥವಾ ಇನ್ನಿತರ ದ್ವಿದಳ ಧಾನ್ಯಗಳ ಬೆಳೆಗಳ ಜೊತೆ ಬೆಳೆಪರಿವರ್ತನೆ ಮಾಡುವುದು ಸೂಕ್ತ.
• ಸ್ವಾಭಾವಿಕ ಶತ್ರುಗಳಾದ ಜೇಡಹುಳು, ಮಳೆಚಿಟ್ಟೆ, ಮಿರಿಡ್ಬಗ್ಸ್ ಮುಂತಾದವುಗಳ ಸಂಖ್ಯೆಯು ಗದ್ದೆಗಳಲ್ಲಿ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಕೀಟನಾಶಕಗಳನ್ನು ಮಿತಿಮೀರಿ ಉಪಯೋಗಿಸುವುದು ಅನವಶ್ಯಕ.
• ಅವಶ್ಯವಿದ್ದಲ್ಲಿ ಅಂತರ್ವ್ಯಾಪಿ ಕೀಟನಾಶಕಗಳಾದ ಅಸಿಫೇಟ್ 1.5 ಗ್ರಾಂ./ಲೀ. ಅಥವಾ ಸಂಪರ್ಕ ಮತ್ತು ಅಂತರ್ವ್ಯಾಪಿ ಕೀಟನಾಶಕ ಗುಣಗಳಾಗಿರುವ ಕ್ಲೋರ್ಫೈರಿಫಾಸ್ 2 ಮಿ.ಲೀ./ಲೀ. ಅಥವಾ ಪಿಪ್ರೋನಿಲ್ 1.5 ಮಿ.ಲೀ./ಲೀ. ಸಿಂಪರಣೆಗೆ ಬಳಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ಡಾ.ಸಿ.ಎಂ.ಕಲ್ಲೇಶ್ವರಸ್ವಾಮಿ, ಸಹಾಯಕ ಪ್ರಾಧ್ಯಾಪಕರು, (ಕೀಟಶಾಸ್ತ್ರ), ಕೃಷಿ ಕಾಲೇಜು, ಶಿವಮೊಗ್ಗ
¨