ಶಿವಮೊಗ್ಗ, ಸೆ. 27 –

ಕರ್ನಾಟಕ ಯುವ ನೀತಿಯನ್ನು ಪರಿಷ್ಕರಿಸಿ ಜಾರಿಗೆ ತರಲಾಗುವುದು. ಈ ಸಂಬಂಧ ಸಮಿತಿಯನ್ನು ರಚಿಸಿ ಕರಡು ಸಿದ್ದಪಡಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದರು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಎನ್ ಎಸ್ ಎಸ್, ಎನ್ ವೈ ಕೆ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಯುವ ಸಂಘಗಳ ಜೊತೆ ಇಂದು ಸಚಿವರು ಸಂವಾದ ನಡೆಸಿದರು. ಸುಮಾರು 8 ವರ್ಷಗಳ ಬಳಿಕ ಜಿಲ್ಲಾ ಮಟ್ಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಸಂವಾದ ನಡೆಸಿದರು. ಕರ್ನಾಟಕ ಯುವ ನೀತಿ ಪರಿಷ್ಕರಣೆ ಆಗಬೇಕು. ಅದಕ್ಕಾಗಿ ಸಮಿತಿಯನ್ನು ಶೀಘ್ರದಲ್ಲೇ ರಚನೆ ಮಾಡುತ್ತೇವೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯುವ ಸಬಲೀಕರಣಕ್ಕಾಗಿ ಹತ್ತಾರು ಯೋಜನೆ ಜಾರಿಗೆ ತಂದಿದೆ. ಆದರೆ ಯುವಜನತೆಗೆ ಇದು ಸರಿಯಾಗಿ ತಲುಪುತ್ತಿಲ್ಲ. ಕೇಂದ್ರ ಸರ್ಕಾರದ ಮುದ್ರಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಯುವ ಜನತೆಗೆ ಉದ್ಯೋಗ ಕಂಡುಕೊಳ್ಳಲು ಅವಕಾಶ ಮಾಡಿಕೊಡುತ್ತವೆ. ಯುವಕರಲ್ಲಿ ಸೇವಾ ಮನೋಭಾವ ಬೆಳೆಯಬೇಕು. ಅದರಿಂದ ಯುವಜನತೆ ಅಡ್ಡದಾರಿಗೆ ಹೋಗುವುದು ತಪ್ಪುತ್ತದೆ ಎಂದು ಯುವಜನರಿಗೆ ಸಚಿವರು ತಿಳಿಹೇಳಿದರು.

ನಾಮಕಾವಸ್ತೆಯ ಕಾರ್ಯಕ್ರಮಗಳನ್ನು ಸಹಿಸಲ್ಲ

ಎನ್ ಎಸ್ ಎಸ್, ಎನ್ ವೈ ಕೆ, ಯುವ ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಿಸಬಹುದು. ನಿರುದ್ಯೋಗ ತಗ್ಗಿಸಬಹುದು. ಯುವ ಜನರನ್ನು ಸ್ವಾವಲಂಬಿಗಳಾಗಿ ಮಾಡಬಹುದು. ಆದರೆ ಸೇವಾ ಮನೋಭಾವ ಇಲ್ಲದೆ, ಕಾಟಾಚಾರಕ್ಕೆ ಎಂಬಂತೆ ಕಾರ್ಯಕ್ರಮಗಳನ್ನು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಸಚಿವರು ಖಡಕ್ಕಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ರಾಜ್ಯ ಅಧಿಕಾರಿ ಪ್ರತಾಪಲಿಂಗಯ್ಯ, ಎನ್ ವೈ ಕೆ ರಾಜ್ಯ ನಿರ್ದೇಶಕ ನಟರಾಜ್, ಕ್ರೀಡಾ ಇಲಾಖೆ ಉಪನಿರ್ದೇಶಕ ರಮೆಶ್, ಮತ್ತಿತರ ಪ್ರಮುಖರು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!