ಜಿಲ್ಲೆಯ ರೇಷ್ಮೆ ಬೆಳೆಗಾರರು ಉತ್ತಮ ಸಾಧನೆ ಮಾಡಿದ್ದಾರೆ: ಡಾ.ನಾರಾಯಣ ಗೌಡ

ಶಿವಮೊಗ್ಗ, ಸೆಪ್ಟೆಂಬರ್ 24: ಶಿವಮೊಗ್ಗದ ರೇಷ್ಮೆ ಬೆಳೆಗಾರರು ವರ್ಷಕ್ಕೆ 10 ರಿಂದ 11 ಬೆಳೆ ಬೆಳೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆ ಮಾಡಿರುವ ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.
ಇಂದು ಶಿವಮೊಗ್ಗ ತಾಲ್ಲೂಕಿನ ಕಾಚಿನಕಟ್ಟೆ ಗ್ರಾಮದ ಮಂಜುನಾಥ ಎಂಬ ರೇಷ್ಮೆ ಬೆಳಗಾರರ ರೇಷ್ಮೆ ತಾಕಿಗೆ ಭೇಟಿ ನೀಡಿ ಪರಿಶೀಲಿಸಿ, ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.
ಬೇರೆ ಕಡೆಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಉತ್ತಮ ರೀತಿಯಲ್ಲಿ ರೇಷ್ಮೆ ಇಳುವರಿ ಇದೆ. ಬೇರೆಡೆ ವರ್ಷಕ್ಕೆ 8 ಬೆಳೆ ಮೇಲೆ ಬೆಳೆದಿಲ್ಲ. ಆದರೆ ಇಲ್ಲಿನ ರೈತರು 10 ರಿಂದ 11 ಬೆಳೆ ವಾರ್ಷಿಕವಾಗಿ ಬೆಳೆದು ಉತ್ತಮ ಸಾಧನೆ ಮಾಡಿದ್ದಾರೆಂದು ಶ್ಲಾಘಿಸಿದ ಅವರು ರೈತರನ್ನು ಗೌರವ ಮತ್ತು ಪ್ರೀತಿಯಿಂದ ಕಾಣಬೇಕು. ಅಧಿಕಾರಿಗಳು ಸಮರ್ಪಕ ಸಲಹೆ, ಸಹಕಾರ ನೀಡಿ ಉತ್ತಮವಾಗಿ ಸ್ಪಂದಿಸಬೇಕೆಂದು ಕಿವಿ ಮಾತು ಹೇಳಿದರು.
ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ರೇಷ್ಮೆಗೆ ಬೇಡಿಕೆ ಇರಲಿಲ್ಲ. ಹಾಗೂ ರೇಷ್ಮೆ ಚೀನಾದಿಂದ ಆಮದು ಆಗುತ್ತಿತ್ತು. ಈಗ ಚೀನಾ ಆಮದು ಬಂದ್ ಆದ ಹಿನ್ನೆಲೆಯಲ್ಲಿ ಸ್ಥಳೀಯ ರೇಷ್ಮೆಗೆ ಒಳ್ಳೆಯ ಬೇಡಿಕೆ ಇದೆ. ಪ್ರಸ್ತುತ ಉತ್ತಮ ದರ ಕೂಡ ಇರುವುದು ಸಂತಸದ ವಿಚಾರವಾಗಿದೆ.
ರೇಷ್ಮೆ ಒಂದು ಒಳ್ಳೆಯ ಬೆಳೆ. ರೇಷ್ಮೆ ಹುಳು ಸಾಕಾಣೆ ಮನೆ ದೇವಸ್ಥಾನ ಇದ್ದ ಹಾಗೆ. ಅಷ್ಟು ಸ್ವಚ್ಚತೆಯನ್ನು ಅಲ್ಲಿ ಕಾಪಾಡಬೇಕು. ನಾನು ಸಹ ರೈತರ ಮಗನಾಗಿದ್ದು ರೇಷ್ಮೆ ಬೆಳೆದ ಅನುಭವ ಇದೆ. ರೇಷ್ಮೆ ಶ್ರೇಷ್ಟತೆ ಮತ್ತು ಗೌರವದ ಸಂಕೇತ. ಮೈಸೂರು ಸಿಲ್ಕ್ ಸೀರೆಗೆ ಅತ್ಯಂತ ಗೌರವ ಇದೆ ಎಂದರು.
ರೇಷ್ಮೆ ರೈತರ ತಾಕುಗಳಲ್ಲಿ ಕೀಟ ಬಾಧೆ ಕಾಣಿಸುತ್ತಿದ್ದು ರೇಷ್ಮೆ ಇಲಾಖೆಯವರು ಇದಕ್ಕೆ ಸಮರ್ಪಕ ಕೀಟ ನಾಶಕವನ್ನು ಸಿಂಪಡಿಸುವಂತೆ ಸೂಚನೆ ನೀಡಿದ ಅವರು ರಾಮನಗರದಲ್ಲಿ ಒಂದು ಅತ್ಯುತ್ತಮ, ನವೀನವಾದ ಹಾಗೂ ರೈತಸ್ನೇಹಿಯಾದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ಯೋಜಿಸಲಾಗುತ್ತಿದ್ದು ಇದರಿಂದ ರಾಜ್ಯದ ಎಲ್ಲ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆ : ರೇಷ್ಮೆ ಮಾರುಕಟ್ಟೆ ವೃದ್ದಿಸಲು ಪ್ರತಿ ವಿಮಾನ ನಿಲ್ದಾಣಗಳಲ್ಲಿ ರೇಷ್ಮೆ ಮಳಿಗೆಗಳನ್ನು ತೆರೆಯಲು ಯೋಜನೆ ತಯಾರಿಸಲಾಗುತ್ತಿದೆ. ನಮ್ಮ ರಾಜ್ಯದ ರೇಷ್ಮೆ ಅತ್ಯಂತ ನೈಜವಾದ ಕಾರಣ ಜಗತ್‍ಪ್ರಸಿದ್ದವಾಗಿದೆ. ಇದಕ್ಕೆ ಸರಿಸಾಟಿ ಮತ್ತೊಂದಿಲ್ಲ. ಮುಂದೆ ರೂ.10 ಲಕ್ಷಕ್ಕೆ ಒಂದು ಸೀರೆ ಮಾರಾಟ ಮಾಡುವ ಯೋಚನೆ ಕೂಡ ಇದೆ. ಹಾಗೂ ರೇಷ್ಮೆ ಬೆಳೆಗಾರರ ಕುಂದು ಕೊರತೆಗಳನ್ನು ಆಲಿಸಲು ಹಾಗೂ ಸಹಕರಿಸಲು ಶೀಘ್ರದಲ್ಲೇ ಸಹಾಯವಾಣಿ ತೆರೆಯಲಾಗುವುದು ಎಂದು ಮಾಹಿತಿ ನೀಡಿದ ಅವರು ಯಾವುದೇ ಕಾರಣಕ್ಕೂ ಮಾರುಕಟ್ಟೆ ಸೊರಗಲು ಬಿಡುವುದಿಲ್ಲವೆಂದು ಭರವಸೆ ನೀಡಿದರು.
ರೇಷ್ಮೆ ಬೆಳೆಗಾರರಿಗೆ ಪಾಸ್…
ರೇಷ್ಮೆ ಬೆಳೆಗಾರರು ತಮ್ಮ ಬೆಳೆಯನ್ನು ಗೂಡ್ಸ್ ಗಾಡಿಗಳ ಮೂಲಕ ರಾಮನಗರದಲ್ಲಿರುವ ಮಾರುಕಟ್ಟೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಪೊಲೀಸರು ಹಿಡಿದು ನಿಲ್ಲಿಸುತ್ತಾರೆ ಎಂದು ರೈತರು ತಿಳಿಸಿದ್ದು, ಇನ್ನು ಮುಂದೆ ರೈತರಿಗೆ ಹಾಗೆ ದಾರಿ ಮಧ್ಯೆ ತೊಂದರೆ ಕೊಡದಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗುತ್ತದೆ. ಹಾಗೂ ರೈತರಿಗೆ ವಿಐಪಿ ರೀತಿಯಲ್ಲಿ ಪಾಸ್ ಒದಗಿಸುವ ವ್ಯವಸ್ಥೆ ಮಾಡಲಾಗುವುದು.
– ಡಾ.ನಾರಾಯಣಗೌಡ, ಸಚಿವರು

ಹಿಂದೆ ರೇಷ್ಮೆ ಬೆಳೆಗಾರರು ಕಷ್ಟ-ನಷ್ಟ ಅನುಭವಿಸುತ್ತಿದ್ದರು. ಆದರೆ ಈಗ ಉತ್ತಮ ಇಳುವರಿ ಮತ್ತು ಲಾಭ, ಜೊತೆಗೆ ಅಧಿಕಾರಿಗಳ ಸಹಕಾರ ಇದೆ. ಈ ಬೆಳೆಯಲ್ಲಿ ಶೇ.80 ಯಶಸ್ಸು ಸಾಧಿಸಿದ್ದೇವೆ. ಗ್ರಾಮದಲ್ಲಿ ಪ್ರತಿ ವರ್ಷ 8 ರಿಂದ 10 ರೈತರು ಈ ಬೆಳೆಗೆ ಸೇರ್ಪಡೆಯಾಗುತ್ತಿದ್ದು ಅಡಿಕೆಗೆ ಸಮನಾದ ಬೆಲೆ ಇದೆ. ವರ್ಷದಲ್ಲಿ 10 ರಿಂದ 11 ಬೆಳೆ ಬೆಳೆಯುತ್ತಿದ್ದು ಸಂತೃಪ್ತತೆ ಇದೆ. ಮಾರುಕಟ್ಟೆಗಾಗಿ ರಾಮನಗರಕ್ಕೆ ನಾವೆಲ್ಲ ತೆರಳುತ್ತಿದ್ದು ಇಲ್ಲೂ ಮಾರುಕಟ್ಟೆಯಾದರೆ ಅನುಕೂಲವಾಗಲಿದೆ.
– ಮಂಜುನಾಥ, ರೇಷ್ಮೆ ಬೆಳೆಗಾರ

ರೇಷ್ಮೆ ಬೆಳೆಗೆ ಅಗತ್ಯವಾದ ಔಷಧಿಗಳನ್ನು ರಾಮನಗರದಿಂದಲೇ ತರಬೇಕು. ರೈತರ ಸಂಖ್ಯೆ ಹೆಚ್ಚುತ್ತಿದ್ದು, ಔಷಧೋಪಚಾರದ ಪೂರೈಕೆಯನ್ನು ಸಹ ಹೆಚ್ಚಿಸಬೇಕು.
  • ಅನಿಲ್, ರೇಷ್ಮೆ ಬೆಳೆಗಾರ
    ಮಾರುಕಟ್ಟೆಗೆ ರೇಷ್ಮೆಗೂಡುಗಳನ್ನು ತೆಗೆದುಕೊಂಡು ಗೂಡ್ಸ್ ಗಾಡಿಯಲ್ಲಿ ತೆರಳುವಾಗ ಪೊಲೀಸರು ತಡೆ ಹಿಡಿಯುತ್ತಿರುವುದು ಅನಾನುಕೂಲವಾಗಿದೆ.
    -ಕುಮಾರ್ ರೇಷ್ಮೆ ರೈತ
    ಇಲಾಖೆ ಜಂಟಿ ನಿರ್ದೇಶಕ ಭೈರಪ್ಪ ಮಾತನಾಡಿ ಜಿಲ್ಲೆಯ ಶಿವಮೊಗ್ಗ, ಭದ್ರಾವತಿ, ಸಾಗರ ಮತ್ತು ಸೊರಬದ ಒಟ್ಟು 509 ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 321 ರೇಷ್ಮೆ ಬೆಳೆಗಾರರು ಇದ್ದಾರೆ. 86 ರೇಷ್ಮೆ ಗ್ರಾಮಗಳು ಇದ್ದು 1.168 ಚಾಕಿಯಾದ ಮೊಟ್ಟೆಗಳು ಇವೆ. ಪ್ರಸಕ್ತ ಸಾಲಿನಲ್ಲಿ 87.3 ಟನ್ ರೇಷ್ಮೆ ಗೂಡು ಉತ್ಪಾದನೆಯಾಗಿದ್ದು ರೂ.42.5 ಲಕ್ಷ ಸಹಾಯಧನವನ್ನು 279 ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
    ಕಾರ್ಯಕ್ರಮದಲ್ಲಿ ಕಾಚಿನಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಮಹೇಶ್, ರೈತರಾದ ದಾಸಪ್ಪ, ನಾಗೇಶ್, ರೇಷ್ಮೆ ಉಪ ನಿರ್ದೇಶಕ ಮುರಳೀಧರ್, ವಿಜ್ಞಾನಿಗಳಾದ ತಿಮ್ಮಾರೆಡ್ಡಿ, ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು.
    (ಫೋಟೊ ಇದೆ.)
error: Content is protected !!