BY: LOKESH JAGANNATH
23 September 2021
ಶಿವಮೊಗ್ಗ, ಸೆಪ್ಟೆಂಬರ್: 23: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ತುಂತುರು ಮಳೆ ಹಾಗೂ ವಾತಾವರಣದಲ್ಲಿನ ಹೆಚ್ಚಿನ ಆದ್ರ್ರತೆ ಹಾಗೂ ತಾಪಮಾನದಿಂದಾಗಿ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಮತ್ತು ನಾಟಿ ಮಾಡಿದ ಭತ್ತದ ಬೆಳೆಯಲ್ಲಿ ದುಂಡಾಣು ಅಂಗಮಾರಿ ಮತ್ತು ಬೆಂಕಿ ರೋಗದ ಬಾಧೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿದ್ದು ರೋಗಗಳ ಲಕ್ಷಣ ಹಾಗೂ ನಿರ್ವಹಣಾ ಕ್ರಮಗಳನ್ನು ಈ ಕೆಳಗೆ ತಿಳಿಸಲಾಗಿದೆ.
ದುಂಡಾಣು ಅಂಗಮಾರಿ ರೋಗ ಲಕ್ಷಣಗಳು : ತೆನೆಯ ಅಂಚಿನ ಗರಿಗಳು ಒಣಗಿದಂತಾಗಿ ತುದಿ ಹೆಡೆಯಂತೆ ಬಾಗಿರುತ್ತದೆ. ಎಲೆಯ ಅಂಚಿನಲ್ಲಿ ಉದ್ದನೆಯೆ ಒಣಗಿದ ಪಟ್ಟಿಗಳು ಕಂಡು ಬರುತ್ತವೆ.
ಹತೋಟಿ ಕ್ರಮಗಳು : ರೋಗದ ಲಕ್ಷಣ ಕಂಡು ಬಂದಲ್ಲಿ ಗದ್ದೆಯಲ್ಲಿನ ನಿಂತ ನೀರನ್ನು ಸಂಪೂರ್ಣವಾಗಿ ಬಸಿಯಬೇಕು. 0.5 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು. ರೋಗದ ತೀವ್ರತೆ ಜಾಸ್ತಿ ಇದಲ್ಲಿ 0.4 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 1 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಬೆಂಕಿ ರೋಗದ ಲಕ್ಷಣಗಳು : ಎಲೆ ಮೇಲೆ ಕಂದು ಬಣ್ಣದ ಶಂಕಾಕೃತಿ ಅಥವಾ ವಜ್ರಾಕೃತಿ ಆಕಾರದ ಚುಕ್ಕೆಗಳು ಕಂಡು ಬರುತ್ತದೆ. ಉಂಟಾದ ಕಂದು ಚುಕ್ಕೆಗಳು ಒಂದಕ್ಕೊಂದು ಸೇರಿ ಇಡೀ ಎಲೆ ಒಣಗಿ ಸುಟ್ಟಂತೆ ಕಾಣುತ್ತದೆ. ಮತ್ತು ಈ ಲಕ್ಷಣಗಳು ಬೆಳೆಯ ಎಲ್ಲಾ ಭಾಗಗಳ ಮೇಲೂ ಕಾಣಿಸಬಹುದಾಗಿದೆ. ತೆಂಡೆ ಬರುವ ಹಂತದಲ್ಲಿ ಗಣ್ಣು ಬಾಧೆಗೊಳಗಾದರೆ ಗಣ್ಣಿನ ಮೇಲಿನ ಗಿಡದ ಭಾಗ ಸಾಯುತ್ತದೆ ಹಾಗೂ ಪೂರ್ತಿ ತೆನೆ ಮುರಿದು ಬೀಳುತ್ತದೆ.
ಹತೋಟಿ ಕ್ರಮಗಳು : ರೋಗದ ಲಕ್ಷಣ ಕಂಡು ಬಂದಲ್ಲಿ ಗದ್ದೆಯಲ್ಲಿನ ನಿಂತ ನೀರನ್ನು ಸಂಪೂರ್ಣವಾಗಿ ಬಸಿಯಬೇಕು. ಅಧಿಕ ಸಾರಜನಕಯುಕ್ತ ರಸಗೊಬ್ಬರಗಳನ್ನು (ಯೂರಿಯಾ) ಕೊಡಬಾರದು. 1 ಗ್ರಾಂ ಕಾರ್ಬೆನ್‍ಡಾಜಿಮ್ ಅಥವಾ 1 ಮಿ.ಲೀ ಕಿಟಾಜಿನ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು. ರೋಗದ ತೀವ್ರತೆ ಜಾಸ್ತಿ ಇದಲ್ಲಿ 0.6 ಗ್ರಾಂ ಟ್ರೈಸೈಕ್ಲೋಜೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.