ಶಿವಮೊಗ್ಗ, ಸೆ.17 : ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಅಭಿನಯದ ಏಕವ್ಯಕ್ತಿ ನಾಟಕ `ಸಾಯುವವನೇ ಚಿರಂಜೀವಿ’ ಸೆ.18ರಂದು ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣದಲ್ಲಿ ನಡೆಯಲಿದೆ.

ಶಶಿಧರ ಭಾರೀಘಾಟ್ ಅವರು ನಾಟಕ ರಚಿಸಿದ್ದು, ಸ್ವಾಮಿ ಉಮಾಶಂಕರ್ ನಿರ್ದೇಶಿಸಿದ್ದಾರೆ. ಮಹಾಭಾರತದ ಶೌರ್ಯದ ಪ್ರತೀಕವಾದ ಗುರುಪುತ್ರ ಅಶ್ವತ್ಥಾಮ ಅನುಭವಿಸಿದ ಹಸಿವು, ಅವಮಾನ, ತವಕ-ತಲ್ಲಣ ಇವೆಲ್ಲದರ ಪ್ರತೀಕವಾಗಿ ಅವನು ಬದುಕಿನುದ್ದಕ್ಕೂ ಅನುಭವಿಸಿದ ದುರಂತದ ಚಿತ್ರಣ ಒಂದೆಡೆಯಾದರೆ, ಪಾತ್ರವನ್ನು ಅನುಭವಿಸುವ ಕಲಾವಿದನ ಬದುಕು ಮತ್ತೊಂದೆಡೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ತನ್ನೊಳಗೆ ಬಣ್ಣ ಕಳಚುವ ಎರಡು ಪಾತ್ರಗಳು ನಾಟಕದ ಕೊನೆಗೆ ಯಾರು ಅಶ್ವತ್ಥಾಮ? ಯಾರು ಕಲಾವಿದ ಎನ್ನುವ ಗೊಂದಲವನ್ನು ಸೃಷ್ಟಿಸುತ್ತದೆ.

ಕಲಾವಿದ ತನ್ನ ಜೀವನ ಯಾನದಲ್ಲಿ ಚೆಂಡೆಯ ಶಬ್ದ, ಗೆಜ್ಜೆಯ ನಾದದ ಜೊತೆ ಜೊತೆಗೆ ಬಳೆಗಳ ಸದ್ದಿಗೆ ಮರುಳಾಗಿ ಪ್ರೀತಿಯ ನೇತ್ರಾವತಿಯಲ್ಲಿ ಬೀಳುತ್ತಾನೆ. ಪ್ರೀತಿಯಲ್ಲಿ ಕೊಚ್ಚಿ ಹೋಗುವ ಕಲಾವಿದ ಬದುಕಿನ ವಾಸ್ತವತೆಯ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ನೆರಳು ಕಾಣದಾಗಿ ಹತಾಶನಾಗುತ್ತಾನೆ. ಹೀಗೆ ಸಾಮಾನ್ಯನೊಬ್ಬ ಅಸಾಮಾನ್ಯನಾಗುವ ಪ್ರಕ್ರಿಯೆ ಈ ನಾಟಕದ ಉದ್ದಕ್ಕೂ ದುರಂತದ ಛಾಯೆಯನ್ನು ಚೆಲ್ಲುತ್ತಾ ಹೋಗುತ್ತದೆ.

ಸಾಯುವವನೇ ಚಿರಂಜೀವಿ ಅಡಿಗರ ಕವನದ ಸಾಲನ್ನು ಈ ನಾಟಕ ತನ್ನೊಡಲೊಳಗೆ ಇಟ್ಟುಕೊಂಡು ಚಿರಂಜೀವಿ ಬದುಕುತ್ತಾನೆ, ಕ್ಷಣ ಕ್ಷಣ ಸಾಯುತ್ತಾನೆ ಅಥವಾ ಕ್ಷಣಕ್ಷಣ ಸಾಯುತ್ತಾ ಬದುಕುತ್ತಾನೆ ಎನ್ನುವ ಸಾವಿರಾರು ಪ್ರಶ್ನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟಿಸುತ್ತದೆ.
ನಾಟಕದ ಪೂರ್ವದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ನಾಟಕಕ್ಕೆ 30ರೂ. ಪ್ರವೇಶ ಶುಲ್ಕವಿದ್ದು, ರಂಗಾಯಣದಲ್ಲಿ ಪಡೆಯಬಹುದು. ರಂಗಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಕೋರಿದ್ದಾರೆ.

error: Content is protected !!