ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಪಂಚದಾದ್ಯಂತ ಸುಮಾರು 8 ಲಕ್ಷಕ್ಕೂ ಹೆಚ್ಚಿನ ಜನ ಮರಣ ಹೊಂದುತ್ತಿದ್ದು, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಮನವರಿಕೆ ಮಾಡಿ, ಆತ್ಮಹತ್ಯೆ ತಡೆಯುವ ಉದ್ದೇಶದಿಂದ ಸೆ.10 ರಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಆಚರಿಸಲಾಗುತ್ತಿದೆ.
ಭಾರತದಲ್ಲಿ ಪ್ರತಿ ವರ್ಷ 1,80,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದು, ಕರ್ನಾಟಕವು 5ನೇ ಸ್ಥಾನದಲ್ಲಿದೆ. ಆದ್ದರಿಂದ ಸುಮುದಾಯದಲ್ಲಿ ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಅಂತರಾಷ್ಟ್ರೀಯ ಆತ್ಮಹತ್ಯೆಯನ್ನು ತಡೆಗಟ್ಟುವ ಸಂಸ್ಥೆಯು (IಂSP) ಪ್ರಸಕ್ತ ಸಾಲಿನಲ್ಲಿ “ಕ್ರಿಯಾತ್ಮಕ ಕೆಲಸಗಳ ಮೂಲಕ ಭರವಸೆ ಮೂಡಿಸೋಣ” ಎಂಬ ಘೋಷಣೆಯಡಿ ಈ ದಿನವನ್ನು ಆಚರಿಸುತ್ತಿದೆ.
ಆತ್ಮಹತ್ಯೆಯ ಮಾಡಿಕೊಳ್ಳುವವರ ಅಂಕಿ ಅಂಶಗಳು: ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ ಆಗುತ್ತಿದ್ದು ಪ್ರತಿ ವರ್ಷ 8 ಲಕ್ಷ ಜನ ಆತ್ಮಹತ್ಯೆಗೆ ಬಲಿ ಆಗುತ್ತಾರೆ. 15 ರಿಂದ 30 ವರ್ಷದೊಳಗಿನವರೇ ಹೆಚ್ಚಾಗಿ ಇದಕ್ಕೆ ತುತ್ತಾಗುತ್ತಿದ್ದಾರೆ.
ಆತ್ಮಹತ್ಯೆಯ ಅಪಾಯದಲ್ಲಿರುವವರು : ಆತ್ಮಹತ್ಯೆಗೆ ಪಕ್ಷಪಾತವಿಲ್ಲ. ಎಲ್ಲಾ ವಯಸ್ಸಿನ, ಎಲ್ಲಾ ವರ್ಗದ ಜನರು ಆತ್ಮಹತ್ಯೆಯ ಅಪಾಯದಲ್ಲಿರಬಹುದು. ಆದರೂ ಅತೀ ಅಪಾಯದಲ್ಲಿರುವವರ ಅಂಶಗಳು ಹೀಗಿದೆ.
ಖಿನ್ನತೆ ಕಾಯಿಲೆಯಿಂದ ಬಳಲುವವರು. ಇತರೆ ಮಾನಸಿಕ ಕಾಯಿಲೆಯಿಂದ ಬಳಲುವವರು ಮತ್ತು ಮದ್ಯ, ಮಾದಕ ವಸ್ತು ವ್ಯಸನಿಗಳು.
ಈಗಾಗಲೇ ಆತ್ಮಹತ್ಯೆಗೆ ಪ್ರಯತ್ನಿಸಿರುವವರು, ದೈಹಿಕ ಮತ್ತು ಲೈಂಗಿಕ ಶೋಷಣೆಯ ಸಹಿತ ಕೌಟುಂಬಿಕ ದೌರ್ಜನ್ಯಗಳು ಅನುಭವಿಸಿದವರು.
(ಬಂಧನ) ಕಾರಾಗೃಹವಾಸದಲ್ಲಿರುವವರು.
ಬಾಲ್ಯಾವಸ್ಥೆಯಲ್ಲಿನ ಅಹಿತಕರ ಘಟನೆಗಳು ಮತ್ತು ಅನುಭವಗಳನ್ನು ಹೊಂದಿರುವವರು.
ಇತ್ತೀಚಿಗೆ ಜೀವನದಲ್ಲಿ ಸಂಭವಿಸಿದ ಕ್ಲಿಸ್ಟ ಘಟನೆಗಳು, ವೈಯಕ್ತಿಕ ನಷ್ಠ ದಿವಾಳಿ, ಸಾಲಬಾಧೆ, ಬರಗಾಲ, ಬೆಳೆಹಾನಿ , ಪ್ರತಿಷ್ಠೆ , ಮಾನಹಾನಿ, ಪ್ರತಿ ಪಾತ್ರರ ಸಾವು ನೋವುಗಳು ಅನುಭವಿಸಿರುವವರು.
ದೀರ್ಘಕಾಲಕ ಹಾಗೂ ಗುಣಪಡಿಸಲಾಗದ ದೈಹಿಕ ಕಾಯಿಲೆಗಳು ಇರುವವರು.
ಹತಾಶಿ, ನಿರಾಸೆ, ಭಯ, ಸಿಟ್ಟು ಇರುವವರು.
ತನ್ನವರು ಯಾರೂ ಇಲ್ಲ ಎಂಬ ಮನೋಭಾವನೆ ಹೊಂದಿರುವವರು.
ಮನಸ್ಸು, ಬಿಚ್ಚಿ ಮಾತಾಡಿ: ನಮ್ಮ ಒಳಗಿರುವ ಎಲ್ಲಾ ಭಾವನೆಗಳನ್ನು ಹೊರಗೆ ಹಾಕಬೇಕು. ಆತ್ಮೀಯರ ಬಳಿ ಮನಸ್ಸಿನ ನೋವನೆಲ್ಲಾ ಹೇಳಿಕೊಳ್ಳಬೇಕು. ಇದರಿಂದ ಶೇ.70 ರಷ್ಟು ಸಮಾಧಾನ ಸಿಗುತ್ತದೆ. ಮನುಷ್ಯನ ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಆದರೆ ಕೋಪ, ದುಃಖದಲ್ಲಿ
ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳ್ಳಬಾರದು. ಇಂದು ದೊಡ್ಡ ಬೆಟ್ಟವಾಗಿ ಕಾಣುವ ಸಮಸ್ಯೆ ನಾಳೆ ಕುಳಿತು ಯೋಚಿಸಿದರೆ ಅದು ಸಮಸ್ಯೆಯೇ ಅಲ್ಲ ಎನ್ನಿಸಬಹುದು.
ಆತ್ಮಹತ್ಯೆಯನ್ನು ತಡೆಗಟ್ಟುವುದು ಹೇಗೆ: ಖಿನ್ನತೆಯಲ್ಲಿರುವವರಿಗೆ ಆಪ್ತ ಸಮಾಲೋಚನೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸುವುದು. ಅತಿಯಾಗಿ ಒಂಟಿತನ ಬಯಸುವವರ ಮೇಲೆ ನಿಗಾ ಇಡುವುದು. ಜೀವನದ ಮಹತ್ವವನ್ನು ತಿಳಿಸುವುದು. ತನ್ನ ಕುಟುಂಬ, ಸ್ನೇಹ ಬಳಗದ ಜೊತೆ ಅದಷ್ಟು ಸಂಪರ್ಕದಲ್ಲಿರುವಂತೆ ಮಾಡುವುದು. ಉತ್ತಮ ಹವ್ಯಾಸಗಳನ್ನು ಸೃಜನಾತ್ಮಕ ಚಟುವಟಿಕೆಗಳನ್ನು ಪರಿಚಯಿಸುವುದು.
ಮನೋಚಿಕಿತ್ಸೆ:
ಮಾತಾಡುವ ಚಿಕಿತ್ಸೆಯು ಆತ್ಮಹತ್ಯೆಯ ಅಪಾಯವನ್ನು ಬಹಳಷ್ಟು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ. ಆತ್ಮಹತ್ಯೆಯ ಅಪಾಯದಲ್ಲಿರುವವರ ಜೊತೆ ಆಪ್ತ ಸಮಾಲೋಚನೆ ಮಾಡಿ.
ಅವರ ದುಃಖ ಸಂಕಟಗಳ ಬಗ್ಗೆ ಸಮಾಲೋಚಿಸಿ, ಅವುಗಳನ್ನು ತಮ್ಮ ಮನಸ್ಸಿನಿಂದ ಹೊರಹಾಕುವಂತೆ ಅವರೊಡನೆ ಮಾತನಾಡಿ. ಅವರು ತಮ್ಮ ಮನಸ್ಸಿನ ದುಃಖ ಸಂಕಟಗಳನ್ನು ಬೇರೆಯವರೊಡನೆ ಹಂಚಿಕೊಂಡಾಗ ಇವುಗಳ ಕಡಿಮೆಯಾಗುತ್ತವೆ.
ಮನಸ್ಸಿದ್ದಲ್ಲಿ ಮಾರ್ಗವಿದೆ. ಸಮಸ್ಯೆಗಳು ಜೀವನದ ಒಂದು ಭಾಗವಾಗಿದೆ. ಕಷ್ಟ ನಷ್ಟಗಳ ಮನುಷ್ಯರಿಗೆ ಬಾರದೇ ಮರಗಳಿಗೆ ಬರುವುದಿಲ್ಲ ಎಂದು ತಿಳಿಸುವುದು.
ಆತ್ಮಹತ್ಯೆ ಯೋಚನೆ ಬಂದಾಗ ಪರ್ಯಾಯ ಕಾರ್ಯಗಳಾದ ಧ್ಯಾನ, ಯೋಗ, ಪ್ರಾರ್ಥನೆ, ಸಂಗೀತ ಕೇಳುವುದು. ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು.
ಸದಾ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮನೋಭಾವನೆಯನ್ನು ಬಿಂಬಿಸುವ ಮೂಲಕ ಸಮಾಜಿಕ ಬೆಂಬಲ ನೀಡುವುದು.
ಆತ್ಮಹತ್ಯೆ ಎಂಬ ಸಾಮಾಜಿಕ ಪಿಡುಗÀನ್ನು ಹೋಗಲಾಡಿಸಲು, ಕುಟುಂಬ, ಸಮುದಾಯ, ಸ್ನೇಹಿತ ವರ್ಗ, ಸಹೋದ್ಯೋಗಿ ವರ್ಗ ಎಲ್ಲರೊಂದಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ಈ ಸಮಾಜಕ್ಕೆ ಒಂದೊಳ್ಳೆ ಕೊಡುಗೆ ನೀಡೋಣ.
ಯಾರಿಗಾದರೂ ಮಾನಸಿಕ ಒತ್ತಡಗಳಿದ್ದಲ್ಲಿ ಈ ದೂರವಾಣಿ ಸಂಖ್ಯೆಗೆ 080-25497777 ಕರೆ ಮಾಡಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ತಿಳಿಸಿದ್ದಾರೆ.