ಶಿವಮೊಗ್ಗ, ಆಗಸ್ಟ್ 21 : ಜಿಲ್ಲೆಯಲ್ಲಿ ಈಗಾಗಲೇ ಕೈಗೊಂಡಿರುವ ಪ್ರಮುಖ ಕಾಮಗಾರಿಗಳನ್ನು ನಿಗಧಿಪಡಿಸಿದ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃಧ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲೆಯಲ್ಲಿ ಕೈಗೊಂಡಿರುವ ವಿಮಾನ ನಿಲ್ದಾಣ, ಸಿಗಂಧೂರು ಸೇತುವೆ, ವರ್ತುಲ ರಸ್ತೆ, ರೈಲ್ವೇ ಮೇಲ್ಸೇತುವೆ, ಪ್ರವಾಸಿ ತಾಣಗಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈವರೆಗೆ ನಡೆದಿರುವ ಕಾಮಗಾರಿಗಳು ಗುಣಮಟ್ಟದ್ದಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಸೆಪ್ಟಂಬರ್ 18ರಂದು ಈ ಕಾಮಗಾರಿಗಳ ಸ್ಥಳಗಳಿಗೆ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ರನ್‍ವೇ ನಿರ್ಮಾಣ ಮತ್ತು ಕಟ್ಟಡ ಕಾಮಗಾರಿಗಳು ಭರದಿಂದ ಸಾಗಿವೆ. ಎರಡನೇ ಹಂತದ ಕಾಮಗಾರಿಗಳು ಆರಂಭಗೊಂಡಿವೆ. ವಿಶೇಷವಾಗಿ ಈ ಕಾಮಗಾರಿಗೆ ಯಾವುದೇ ಹಣಕಾಸಿನ ಅಡಚಣೆಯಾಗದಂತೆ ಕ್ರಮವಹಿಸಲಾಗುವುದು ಎಂದ ಅವರು, ಕೈಗೊಂಡ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಗತ್ಯವಾಗಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಧನ ಬಿಡುಗಡೆಯಾಗಿದ್ದು, ಅರ್ಹ ರೈತರು ದಾಖಲಾತಿಗಳನ್ನು ಒದಗಿಸಿದಲ್ಲಿ ಪರಿಹಾರ ಧನ ವಿತರಿಸಲು ಕ್ರಮ ವಹಿಸಲಾಗುವುದು. ಈ ಪೈಕಿ 8ರೈತರ 24ಎಕರೆ ಭೂಮಿಗೆ ಸಂಬಂಧಿಸಿದಂತೆ ಜಿಜ್ಞಾಸೆ ಇದ್ದು, ಮುಂದಿನ ಒಂದು ವಾರದೊಳಗಾಗಿ ಮಾತುಕತೆ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಚಿವರಿಗೆ ತಿಳಿಸಿದರು.
ಶಿವಮೊಗ್ಗ ರೈಲ್ವೇ ನಿಲ್ದಾಣದ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ರೈಲ್ವೇ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ಕುರಿತು ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದಲ್ಲದೆ ಪೇಯ್ಡ್ ಆಟೋ ಕೌಂಟರ್, ಏಕಮುಖ ಸಂಚಾರಕ್ಕೆ ಗಮನಹರಿಸಲಾಗುವುದು ಎಂದರು.
ಜೋಗದಲ್ಲಿ ಕೈಗೊಳ್ಳುವ ಅಭಿವೃಧ್ಧಿ ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸ್ಥಳೀಯರು, ಅಲ್ಲಿನ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದು ಚರ್ಚಿಸಿ, ಅವರ ವಿಶ್ವಾಸ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕು _ಹರತಾಳು ಹಾಲಪ್ಪ.
ಕೋಟೆಗಂಗೂರಿನಲ್ಲಿ ರೈಲ್ವೇ ಕೋಚಿಂಗ್ ಡಿಪೋ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಿವಮೊಗ್ಗ-ಹರಿಹರ ಮಾರ್ಗದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ದಾವಣಗೆರೆ ಜಿಲ್ಲೆಯ 7ಗ್ರಾಮಗಳು ಹಾಗೂ ಶಿವಮೊಗ್ಗ ಜಿಲ್ಲೆಯ 21ಗ್ರಾಮಗಳ 543ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಸಂಬಂಧ ದಾವಣಗೆರೆ ಜಿಲ್ಲೆಯ 7ಗ್ರಾಮಗಳ ಭೂಮಾಲೀಕರಿಗೆ ತಮ್ಮ ಜಮೀನಿಗೆ ದರ ನಿಗಧಿಪಡಿಸಿದ್ದು, ಪರಿಹಾರ ಧನ ಮಂಜೂರು ಮಾಡುವಂತೆ ಕೆ.ಐ.ಎ.ಡಿ.ಬಿ. ಬೆಂಗಳೂರು ಇವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಿಗಂಧೂರು ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 2023ರ ಮೇ ಮಾಹೆಯೊಳಗಾಗಿ ಪೂರ್ಣಗೊಳ್ಳಬೇಕಾಗಿದ್ದು, ನಿರೀಕ್ಷೆಯಂತೆ ಕಾಮಗಾರಿಗಳು ನಡೆಯುತ್ತಿವೆ ಎಂದು ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರು ಮಾತನಾಡಿ, ಕರಾವಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಸಿಗಂಧೂರಿನಿಂದ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ ರಸ್ತೆ ಅಭಿವೃಧ್ಧಿಪಡಿಸಲು ಹಾಗೂ ಈ ನಡುವಿನ ಅರಣ್ಯ ಭೂಮಿಯಲ್ಲಿ ಕಾಮಗಾರಿಗಳನ್ನು ನಡೆಸಲು ಅನುಕೂಲವಾಗುವಂತೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಏಷ್ಯಾ ಖಂಡದಲ್ಲಿಯೇ ಮೊದಲ ಹಾಗೂ ಯಶಸ್ವಿಯಾದ ಮೂಡಿ ಏತ ನೀರಾವರಿ ಯೋಜನೆ. ಈ ಯೋಜನೆಯಿಂದಾಗಿ ಹೊಸೂರು, ತಾಳಗುಂದ ಹಾಗೂ ಉಡುಗುಣಿ ಹೋಬಳಿಯ 255ಕೆರೆಗಳಿಗೆ ನೀರನ್ನು ತುಂಬಿಸಲಾಗಿದೆ. 1250ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಯನ್ನು ಅತ್ಯಲ್ಪ ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. -ಸಂಸದ. ಬಿ.ವೈ.ರಾಘವೇಂದ್ರ.
ಸಭೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಏತ ನೀರಾವರಿ ಯೋಜನೆಗಳು, ಪ್ರವಾಸಿ ತಾಣಗಳ ಅಭಿವೃಧ್ಧಿ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮೇಲ್ಸೇತುವೆ, ವರ್ತುಲ ರಸ್ತೆ ಮುಂತಾದ ಯೋಜನೆಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದರು.
ಸಭೆಯಲ್ಲಿ ಶಾಸಕ ಹರತಾಳು ಹಾಲಪ್ಪ, ಕೆ.ಬಿ.ಅಶೋಕನಾಯ್ಕ್, ರುದ್ರೇಗೌಡರು, ಕುಮಾರ್ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ||ನಾಗೇಂದ್ರ ಎಫ್.ಹೊನ್ನಳ್ಳಿ, ಕೃಷಿ ವಿವಿ. ಕುಲಪತಿ ಡಾ| ಎಂ.ಕೆ.ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.