ಶಿವಮೊಗ್ಗ: ನಾನು ಅಧಿಕಾರ ಸಾಕು ಎನ್ನುವವನಲ್ಲ. ಪಕ್ಷ ನನಗೆ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದು ನನ್ನ ಅಭಿಲಾಷೆ. ಪಕ್ಷದ ಹೈಕಮಾಂಡ್ ಯಾವ ಸ್ಥಾನ ನೀಡಿದರೂ ಅದನ್ನು ಸ್ವೀಕರಿಸುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ತಮ್ಮ ಇಂಗಿತವನ್ನು ಹೊರಹಾಕಿದರು.
ಗುರುವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷ ತಮಗೆ ಉಪಮುಖ್ಯಮಂತ್ರಿ, ಸಚಿವ, ಕೊನೆಗೆ ಶಾಸಕನಾಗಿಯೇ ಇರು ಎಂದರೂ ಸರಿಯೇ ಹಾಗೆಯೇ ಇರುತ್ತೇನೆ. ಆದರೆ ಯಾವುದಕ್ಕೂ ಲಾಭಿ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ನನಗೆ ಸಚಿವ ಸ್ಥಾನ ಸಿಗತ್ತದೆಯೋ ಬಿಡುತ್ತದೆಯೋ ಅದರ ಬಗ್ಗೆ ಬೇಸರವಿಲ್ಲ. ಇಂತಹದ್ದೇ ಖಾತೆ ಬೇಕು ಅಂತ ನಾನು ಎಂದೂ ಕೇಳಿಲ್ಲ.
ರಾಜ್ಯದ ಅನೇಕ ಕಡೆಗಳಿಂದ ಪಕ್ಷದ ಕಾರ್ಯಕರ್ತರು, ಮಠಾಧೀಶರು, ಹಿಂದುಳಿದ ವರ್ಗದ ನಾಯಕರು ನನಗೆ ಕರೆ ಮಾಡಿ ನೀವು ಉಪಮುಖ್ಯಮಂತ್ರಿ ಯಾಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ಆಶಯದಂತೆ ನಾನು ಈ ಕೋರಿಕೆ ಹೊಂದಿದ್ದೇನೆ. ಮಾಜಿ ಸಚಿವ ಜಗದೀಶ್ ಶೆಟ್ಟರ್ ನಾನು ಮಂತ್ರಿಯಾಗುವುದಿಲ್ಲ ಎಂದಿದ್ದಾರೆ. ಅವರಂತೆ ನಾನು ಅಧಿಕಾರ ಸಾಕು ಎನ್ನುವವನಲ್ಲ. ಪಕ್ಷ ಕೊಟ್ಟ ಜವಾಬ್ದಾರಿ ನಿಬಾಯಿಸುತ್ತೇನೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಬಂದಿದ್ದ ಆಡಿಯೋಕ್ಕೆ ನಾನು ಸೊಪ್ಪು ಹಾಕೋಲ್ಲ ಎಂದ ಅವರು, ಪಕ್ಷ ಸಂಘಟನೆ ಹಾಗೂ ಜನಹಿತಕ್ಕಾಗಿ ಮಾತ್ರ ಗಮನ ನೀಡುತ್ತೇನೆ.
ಮುಖ್ಯಮಂತ್ರಿ ಯಾರಾಗಿದ್ದರೂ ಜಿಲ್ಲೆಯ ಅಭಿವೃದ್ಧಿ ನಿಲ್ಲುವುದಿಲ್ಲ. ಈಗ ಆರಂಭವಾದ ಎಲ್ಲಾ ಕೆಲಸಗಳೂ ನಡೆಯುತ್ತವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಕ್ಯಾಬಿನೆಟ್ನಲ್ಲಿ ಜಿಲ್ಲೆಯಿಂದ ಆಯ್ಕೆಯಾಗಿರುವ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ಸಿಗಲಿ ಎಂದು ಅಭಿಪ್ರಾಯಪಟ್ಟರು.
ಸಚಿವರು ಹೊಸಬರಾಗುತ್ತಾರೋ, ಹಳಬರಿಗೆ ಅವಕಾಶ ಕೊಡುತ್ತಾರೋ ನನಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಎಲ್ಲವೂ ಆಗಲಿದೆ. ಬಹುತೇಕ 1 ವಾರದೊಳಗೆ ಸಂಪುಟ ರಚನೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಬಿಜೆಪಿಯಲ್ಲಿನ ಅಚ್ಚರಿಯ ಬೆಳವಣಿಗೆಯಿಂದ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಸಂತಸ ತಂದಿದ್ರೆ, ಇದನ್ನೇ ರಾಜಕೀಯವಾಗಿ ಲಾಭ ಪಡೆಯಲು ಹೋಗಿದ್ದ ಕಾಂಗ್ರೆಸ್ಗೆ ನಿರಾಸೆಯಾಗಿದೆ. ಮುಂದಿನ ಎರಡು ವರ್ಷದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ದಿ ಮಾಡಿ ಚುನಾವಣೆಗೆ ಹೋಗುವವರಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರು, ಸಂಘಟನೆಯ ಪರಿಶ್ರಮದಿಂದ ಪೂರ್ಣ ಪ್ರಮಾಣದ ಸರ್ಕಾರ ತರುವ ಪ್ರಯತ್ನ ಮಾಡಲಾಗುವುದು. ಎಲ್ಲರಿಗೂ ಅಚ್ಚರಿಯ ರೀತಿ ನಮ್ಮ ಬಿಕ್ಕಟ್ಟನ್ನು ವರಿಷ್ಟರು ಬಂದು ನಿವಾರಿಸಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.
ನಾನು ಸಾವಿರಾರು ಕಾರ್ಯಕರ್ತರ ನಡುವೆ ಒಂದು ಬಿಂದು ಅಷ್ಟೇ. ಸಿಎಂ ಸ್ಥಾನಕ್ಕೆ ನನಗಿಂತ ಅನೇಕ ಹಿರಿಯರು, ಅನುಭವಸ್ಥರು ಇದ್ದಾರೆ. ಬೊಮ್ಮಯಿರವರು ಸಿಎಂ ಆಗಿರುವುದು ಒಂದು ರಾಜಕೀಯ ಅಚ್ಚರಿಯ ಬೆಳವಣಿಗೆ. ರಾಜಕೀಯ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಈಗ ಕೃಷ್ಣನ ತಂತ್ರಗಾರಿಕೆ ಮಾಡಿದ್ದೇವೆ. ಮುಂದೆ ಪೂರ್ಣ ಬಹುಮತ ಬಂದ ಬಳಿಕ ರಾಮರಾಜ್ಯ ಮಾಡುತ್ತೇವೆ ಎಂದರು.
ಮಧು ಬಂಗಾರಪ್ಪ ರಾಜಕೀಯ ಆಶಾವಾದಿ:
ಮಧು ಬಂಗಾರಪ್ಪ ಕಾಂಗ್ರೆಸ್ ಸೇರುವ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಮಧು ಬಂಗಾರಪ್ಪ ರಾಜಕೀಯ ಆಶಾವಾದಿ. ಅವರು ಜೆಡಿಎಸ್ನಲ್ಲಿ ಇದ್ದಾಗ ಗೆಲ್ಲುತ್ತೇವೆ ಎಂದರು. ಈಗಲೂ ಅದೇ ಹೇಳುತ್ತಾರೆ. ಮಧು ಬಂಗಾರಪ್ಪಗೆ ರಾಜಕೀಯದಲ್ಲಿ ಎಂದೂ ಯಶಸ್ವಿ ಸಿಗುವುದಿಲ್ಲ. ನಮ್ಮ ಜಿಲ್ಲೆಗೆ ಸೋನಿಯಾಗಾಂಧಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಂದು ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ ಸಹ ನಾವು ಸೋಲಿಸುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಎಸ್. e್ಞÁನೇಶ್ವರ್, ಅಣ್ಣಪ್ಪ, ನಾಗರಾಜ್, ವಿಶ್ವಾಸ್ ಮೊದಲಾದವರಿದ್ದರು.