ನಗರದ ಸಹಚೇತನ ನಾಟ್ಯಾಲಯದಿಂದ ನಿನ್ನೆ ಹಮ್ಮಿಕೊಂಡಿದ್ದ ಹತ್ತನೇ ವರ್ಷದ ಭಾರತೀಯಂ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಿ. ಎಸ್. ಸುಬ್ರಮಣ್ಯ ಹಾಗೂ ಯೋಗ ಸಾಮ್ರಾಟ್ ಗೋಪಾಲ ಕೃಷ್ಣ ಎಸ್. ಅವರಿಗೆ ಅಜಿತಶ್ರೀ ಪುರಸ್ಕಾರ್ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಖ್ಯಾತ ಕೈಗಾರಿಕೋದ್ಯಮಿಗಳಾದ ಡಿ. ಎಸ್. ಅರುಣ್ ರವರು ಇಂದಿನ ದಿನಗಳಲ್ಲಿ ಸಮಾಜಸೇವೆಯೆಂಬುದು ತೋರಿಕೆಯ ವಿಷಯವಾಗಿದೆ. ತಮ್ಮ ಗುರುತಿನ ಚೀಟಿಗಳಲ್ಲಿ ಪ್ರತಿಯೊಬ್ಬರೂ ತಾನೊಬ್ಬ ಸಮಾಜ ಸೇವಕ ಎಂದು ಬಿಂಬಿಸುವ ಈ ದಿನಗಳಲ್ಲಿ ಹೆಸರಿಗಾಗಿ ಹಾತೊರೆಯದೆ ನಿಸ್ವಾರ್ಥ ಸೇವೆಯನ್ನು ಗೈದು ಯೋಗ, ತ್ಯಾಗದ ದ್ಯೋತಕವಾಗಿ ತಮ್ಮ ಜೀವನವನ್ನು ಸಾಗಿಸಿದ ಅಜಿತ್ ಕುಮಾರ್‍ರವರ ಜೀವನ ನಿಜಕ್ಕೂ ಎಲ್ಲರಿಗೂ ಮಾದರಿ ಎಂದರು.

ಹಿಂದುಳಿದ ಬಡಾವಣೆಯ ಮಕ್ಕಳಿಗೆ ಸತತವಾಗಿ ಹತ್ತನೇ ವರ್ಷ ನೃತ್ಯಕ್ಕಾಗಿ ತಯಾರು ಮಾಡಿ ವೇದಿಕೆಯನ್ನು ನೀಡುತ್ತಿರುವುದು ಒಂದು ಘನ ಕಾರ್ಯ. ಅವರ ಈ ಸೇವಾ ಚಟುವಟಿಕೆಗಳು ಮುಂದಿನ ಹಲವು ವರ್ಷಗಳು ಯುವ ಪೀಳಿಗೆಗೆ ಮಾದರಿಯಾಗಲಿ ಎಂದರು.

ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಯೋಗ ಸಾಮ್ರಾಟ್ ಗೋಪಾಲಕೃಷ್ಣ ಎಸ್. ಯೋಗ ವ್ಯಾಪಾರೀಕರಣವನ್ನಾಗಿ ಮಾಡಲು ಹಲವು ವಿಭಿನ್ನ ಶೈಲಿಯ ಯೋಗಾಭ್ಯಾಸಗಳು ಸಮಾಜದಲ್ಲಿ ನಡೆಯುತ್ತಿವೆ. ಪತಂಜಲಿ ಮಹರ್ಷಿಯವರ ಯೋಗ ಅದರ ಮೂಲ ಬೇರಾಗಿರುವುದು ಸುಳ್ಳಲ್ಲ. ಬಿ.ಕೆ.ಎಸ್ ಅಯ್ಯಂಗಾರ್ ಹಾಗೂ ಅವರ ನೇರ ಶಿಷ್ಯ ಅಜಿತ್ ಕುಮಾರ್‍ರವರ ಸತತ ನಿಷ್ಠೆಯ ಪರಿಶ್ರಮ ಎಂದಿಗೂ ಈ ನಿಟ್ಟಿನಲ್ಲಿ ವ್ಯಯವಾಗುವುದಿಲ್ಲ ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಪಾಲಿಕೆಯ ಉಪಮೇಯರ್ ಎಸ್. ಎನ್. ಚನ್ನಬಸಪ್ಪ ಮಾತನಾಡಿ ಭಾರತೀಯಂನ ದಶಮಾನೋತ್ಸವದ ಈ ಸುಸಂಧರ್ಭದಲ್ಲಿ ತಾವು ಕಲಿತ ನೃತ್ಯವನ್ನು ಸೇವೆಯ ದಿಕ್ಕಿನಲ್ಲಿ ಹರಿಯಗೊಡುತ್ತಿರುವ ನೃತ್ಯಗುರು ಸಹನಾ ಚೇತನ್ ದಂಪತಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

error: Content is protected !!