ತೆಂಗು ಬಯಲುಸೀಮೆ ಮತ್ತು ಕರಾವಳಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಸ್ಯ ಸಂಕುಲದಲ್ಲಿಯೇ ಕಲ್ಪವೃಕ್ಷವೆಂದು ಪ್ರಸಿದ್ಧವಾಗಿರುವ ತೆಂಗಿನ ಮರದ ಪ್ರತಿಯೊಂದು ಭಾಗವು ಮಾನವರಿಗೆ ಪ್ರಯೋಜನಕಾರಿ. ಈ ವಾಣಿಜ್ಯ ಬೆಳೆಗೆ ಹಲವಾರು ಕೀಟ ಮತ್ತು ರೋಗಗಳ ಸಮಸ್ಯೆಯಿಂದ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಅವುಗಳಲ್ಲಿ ಪ್ರಮುಖವಾಗಿ ಎಲೆತಿನ್ನುವ ಕಪ್ಪುತಲೆಯ ಹುಳುವೂ ಒಂದು. ಮೊದಲಿಗೆ ಇದರ ಹಾವಳಿ ಪಶ್ಚಿಮ ಕರಾವಳಿಗೆ ಮಾತ್ರ ಸೀಮಿತವಾಗಿದ್ದು ಕ್ರಮೇಣ ಒಳನಾಡಿನ ಮುಖ್ಯ ತೆಂಗು ಬೆಳೆಯುವ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿಯೂ ಪಸರಿಸಿ ಇದರ ಹಾವಳಿಯು ವ್ಯಾಪಕವಾಗಿರುವುದು ಕಂಡುಬಂದಿದೆ.
ಕಪ್ಪು ತಲೆ ಹುಳು (ಓಪಿಸೀನಾ ಅರಿನೋಸೆಲ್ಲಾ)ವಿನ ಜೀವನ ಚಕ್ರ:
ಎಲೆ ತಿನ್ನುವ ಕಪ್ಪು ತಲೆ ಹುಳುವು ನಾಲ್ಕು ಹಂತದ ಜೀವನ ಕ್ರಮವನ್ನು ಹೊಂದಿದ್ದು ಮೊಟ್ಟೆ, ಮರಿಹುಳು, ಕೋಶ, ಪ್ರೌಢ (ಪತಂಗ) ಕೀಟಗಳಾಗಿ ಕಂಡುಬರುತ್ತದೆ. ಇದನ್ನು ವೈಜಾÐನಿಕವಾಗಿ ಓಪಿಸೀನಾ ಅರಿನೋಸೆಲ್ಲಾ ಎಂದು ಕರೆಯುತ್ತಾರೆ. ಈ ಕೀಟವು ಜೀವನ ಚಕ್ರ ಪೂರ್ಣಗೊಳಿಸಲು 55 ರಿಂದ 70 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರಾಂiÀiದ ಪತಂಗವು ತಿಳಿ ಬೂದಿಬಣ್ಣದಿಂದ ಕೂಡಿದ್ದು, ರಾತ್ರಿವೇಳೆಯಲ್ಲಿ ಹರಡಿ ಗರಿಗಳ ತಳಭಾಗದಲ್ಲಿ ಮರಿಹುಳುಗಳು ಈಗಾಗಲೇ ಕಟ್ಟಿರುವ ಬಲೆಯ ಮೇಲೆ ಸಣ್ಣ ಸಣ್ಣ ಗುಂಪುಗಳಲ್ಲಿ ಮೊಟ್ಟೆಯನ್ನಿಡುತ್ತದೆ. ಒಂದು ಹೆಣ್ಣು ಪತಂಗವು ಸುಮಾರು 150 ರಿಂದ 350 ಮೊಟ್ಟೆಗಳನ್ನು ತನ್ನ ಜೀವಿತಾವಧಿಯ ಒಂದು ವಾರದಲ್ಲಿ ಇಡುತ್ತದೆ. ಈ ಮೊಟ್ಟೆಗಳಿಂದ ಮರಿಹುಳುಗಳು ಹೊರಬರಲು 6 ರಿಂದ 10 ದಿನಗಳು ಬೇಕಾಗುತ್ತದೆ. ಮರಿಹುಳು ತನ್ನ ಬೆಳೆವಣಿಗೆ ಮುಗಿಸಿ ಕೋಶಾವಸ್ಥೆಗೆ ಬರಲು 5 ರಿ0ದ 7 ವಾರಗಳು ಬೇಕಾಗುತ್ತದೆ. ಪೂರ್ತಿ ಬೆಳೆದ ಮರಿಹುಳು ತಿಳಿ ಹಸಿರು ಬಣ್ಣದಿಂದ ಕೂಡಿದ್ದು ಮೈ ಉದ್ದಕ್ಕೂ ಕೆಂಪುಬಣ್ಣದ ಗೆರೆಗಳಿರುತ್ತದೆ. ತಲೆ ಮತ್ತು ಎದೆಯ ಹೆಚ್ಚಿನ ಭಾಗ ಕಂದು ಅಥವಾ ಕಪ್ಪಾಗಿರುತ್ತದೆ. ಮರಿಹುಳುವನ್ನು ಸ್ವಲ್ಪ ಮುಟ್ಟಿದರೆ ಸಾಕು ಅದು ಹಿಂದಕ್ಕೂ ಮುಂದಕ್ಕೂ ಬಹಳ ಚುರುಕಾಗಿ ಹರಿದಾಡುತ್ತದೆ. ಪೂರ್ಣ ಬೆಳೆದ ಮರಿಹುಳು ತಾನೇ ದಟ್ಟವಾಗಿ ಹೆಣೆದ ಬಲೆಯ ಸುರಂಗದಲ್ಲಿ ಗೂಡು ಮಾಡಿಕೊಂಡು ಕೋಶಾವಸ್ಥೆಗೆ ಹೋಗುತ್ತದೆ. ಒಂದು ವಾರದ ನಂತರ ಕೋಶದಿಂದ ಪೂರ್ಣ ಬೆಳೆದ ಪತಂಗವು ಹೊರಬರುತ್ತವೆ. ಇದೇ ರೀತಿ ತನ್ನ ಜೀವನ ಚಕ್ರವನ್ನು ಮುಂದುವರಿಸುತ್ತದೆ. ಈ ಕೀಟವು ವರ್ಷಕ್ಕೆ 6 ಸಂತತಿಗಳನ್ನು ಪೂರ್ಣಗೊಳಿಸುತ್ತದೆ.
ಕಪ್ಪು ತಲೆ ಹುಳುವಿನ ಹಾನಿಯ ಲಕ್ಷಣಗಳು:
ಕಪ್ಪು ತಲೆ ಹುಳುವಿನ ಜೀವನ ಚಕ್ರದಲ್ಲಿ ಮರಿಹುಳುವು ಬೆಳೆಗಳಿಗೆ ಹಾನಿಮಾಡುವ ಹಂತವಾಗಿರುತ್ತದೆ. ಈ ಮರಿಹುಳುಗಳು ಗರಿಗಳ ತಳಭಾಗದಲ್ಲಿ ದಟ್ಟವಾದ ಬಲೆಗಳನ್ನು ಹೆಣೆದು ಅದರಲ್ಲಿ ಸೇರಿಕೂಳ್ಳುತ್ತವೆ. ನಂತರ ಗರಿಯ ಹಸಿರುಭಾಗವನ್ನು ಕೆರೆದು ತಿನ್ನುತ್ತವೆ. ಈ ಕೆರೆದು ತಿಂದ ಭಾಗವು ಒಣಗಿ, ಕಂದು ಬಣ್ಣದ ಮಚ್ಚೆಗಳಂತೆ ಕಾಣುತ್ತದೆ. ಕ್ರಮೇಣ ಈ ಮಚ್ಚೆಗಳು ಒಂದಕ್ಕೊಂದು ಸೇರಿಕೊಂಡು ಇಡೀ ಗರಿಗಳೆಲ್ಲ ಒಣಗಿದ ಹಾಗೆ ಕಾಣುತ್ತವೆ. ಹುಳುವಿನ ಹಾವಳಿ ಕೆಳಗಡೆ ಇರುವ ಗರಿಗಳಲ್ಲಿ ಪ್ರಾರಂಭವಾಗಿ ಕ್ರಮೇಣ ಮೇಲಿನ ಗರಿಗಳಿಗೂ ವ್ಯಾಪಿಸುತ್ತದೆ. ತೀವ್ರ ಹಾನಿಗೊಳಗಾದ ಗಿಡಗಳು ದೂರದಿಂದ ನೋಡಿದಾಗ ಇಡೀ ಗರಿಗಳು ಸುಟ್ಟಂತೆ ಕಾಣುತ್ತವೆ.
ಎಲೆ ತಿನ್ನುವ ಕಪ್ಪು ತಲೆ ಹುಳುವಿನ ಸಮಗ್ರ ಹತೋಟಿ ಕ್ರಮಗಳು:
ಸಾಂಪ್ರದಾಯಿಕ ಹತೋಟಿ ಕ್ರಮಗಳು :
ಕಪ್ಪುತಲೆ ಹುಳು ಮುಕ್ತ ಸಸಿಗಳನ್ನು ನೆಡುವುದರಿಂದ ಪ್ರಾಥಮಿಕ ಹಂತದಲ್ಲಿ ಈ ಕೀಟಬಾದೆಯನ್ನು ತಡೆಗಟ್ಟಬಹುದು. ಬೆಳೆದ ಮರಗಳಲ್ಲಿ ಹುಳುಬಾದಿತ ಗರಿಗಳನ್ನು ಕತ್ತರಿಸಿ ಸುಟ್ಟುಹಾಕುವುದು ಅಥವಾ ಗುಂಡಿ ತೆಗೆದು sಹೂತುಹಾಕುವುದರಿಂದ ಮರದ ಉಳಿದ ಗರಿಗಳಿಗೆ ಹಾಗೂ ಬೇರೆ ಮರಗಳಿಗೆ ಹರಡದಂತೆ ತಡೆಗಟ್ಟಬಹುದು.
ಜೈವಿಕ ಹತೋಟಿ ಕ್ರಮಗಳು:
ಮರಿಹುಳುವಿನ ಮಧ್ಯಹಂತದ ಹುಳುಗಳನ್ನು ಮೈಕ್ರೊಬ್ರೇಕನ ಬ್ರೆವಿಕಾರ್ನಿಸ್ ಎಂಬ ಪರೋಪ ಜೀವಿಯು ತಿಂದುಹಾಕುತ್ತದೆ. ಹಾಗೆಯೇ ಗೋನಿಯೋಜಸ್ ನೆಫ್ಯಾಂಟಿಢಿಸ್ ಎಂಬ ಪರೋಪಜೀವಿ ಹೆಚ್ಚಾಗಿ ಬೆಳೆದ ಹುಳುಗಳನ್ನು ಕೊಲ್ಲುತ್ತದೆ.
ಗೋನಿಯೋಜಸ್ ನೆಫ್ಯಾಂಟಿಢಿಸ್ ಎಂಬ ಪರೋಪಜೀವಿಯನ್ನು ಪ್ರಯೋಗಾಲಯಗಳಲ್ಲಿ ಬೆಳೆಸಿ ಪ್ರತಿ ಕೀಟಬಾದಿತ ಮರಕ್ಕೆ ಸುಮಾರು 15 ರಂತೆ ಪ್ರತಿ 15 ದಿನಗಳಿಗೊಮ್ಮೆ ಕನಿಷ್ಟ ನಾಲ್ಕು ಬಾರಿ ಬಿಡುಗಡೆ ಮಾಡುವುದರಿಂದ, ಈ ಪರೋಪ ಜೀವಿಗಳು ಮರಿಹುಳುಗಳನ್ನು ಹುಡುಕಿ ಚುಚ್ಚಿ ನಿಶ್ಕ್ರಿಯಗೊಳಿಸಿ ಅವುಗಳ ಮೇಲೆ ತನ್ನ ಮೊಟ್ಟೆಗಳನ್ನಿಡುತ್ತವೆ ಜೊತೆಗೆ ತಮ್ಮ ವಂಶವನ್ನು ವೃದ್ಧಿಗೊಳಿಸುತ್ತವೆ.
ರಾಸಾಯನಿಕ ಹತೋಟಿ ಕ್ರಮಗಳು:
ಸಾಂಪ್ರದಾಯಿಕ ಮತ್ತು ಜೈವಿಕ ವಿಧಾನದಿಂದ ಕೀಟಬಾದೆಯು ಹತೋಟಿಗೆ ಬಾರದಿದ್ದಲ್ಲಿ, ರಾಸಾಯನಿಕ ಹತೋಟಿಯ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಪ್ರಮುಖವಾಗಿ
ಸಿಂಪರಣೆ:-
ಚಿಕ್ಕ ಮರಗಳಾದರೆ ಸಿಂಪರಣೆ ಸಾಧ್ಯವಾಗುವುದರಿಂದ 15 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್. ಎಲ್. ಕೀಟನಾಶಕವನ್ನು 10 ಲೀ. ನೀರಿನಲ್ಲಿ ಬೆರೆಸಿ ಗರಿಗಳು ಪೂರ್ಣವಾಗಿ ಒದ್ದೆಯಾಗುವಂತೆ ಸಿಂಪಡಿಸಬೇಕು.
ಬೇರಿನ ಮೂಲಕ ಉಪಚಾರ :
ಮರದ ಬುಡದಿಂದ ಸುಮಾರು 60 ರಿಂದ 90 ಸೆಂ.ಮೀ ದೂರದಲ್ಲಿ ಭೂಮಿಯನ್ನು ಸ್ವಲ್ಪ ಅಗೆದರೆ ಬೇರುಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಂಪು ಅಥವಾ ಕಂದು ಬಣ್ಣದ ಬಲಿತ ಕಿರುಬೆರಳಿನ ಗಾತ್ರದ ಬೇರನ್ನು ಆಯ್ಕೆ ಮಾಡಿ ಓರೆಯಾಗಿ ಕತ್ತರಿಸಿ ಸಿದ್ಧ ಮಾಡಿಕೊಳ್ಳಬೇಕು. 4 ಸೆಂ.ಮೀ ಅಗಲ ಮತ್ತು 15 ಸೆಂ.ಮೀ ಉದ್ದದ ಪಾಲಿಥೀನ್ ಚೀಲದಲ್ಲಿ 10 ಮೀ.ಲೀ. ಮೊನೊಕ್ರೋಟೊಫಾಸ್ ಮತ್ತು 10 ಮಿ.ಲೀ ನೀರನ್ನು ಬೆರೆಸಿ ಸಿದ್ಧ ಮಾಡಿದ ಬೇರು ಔಷಧಿಯೊಳಗೆ ಸರಿಯಾಗಿ ಮುಳುಗುವಂತೆ ಇಟ್ಟು ಪಾಲಿಥೀನ್ ಚೀಲದ ಬಾಯಿಯನ್ನು ಕಟ್ಟಬೇಕು.
ಸೂಚನೆ:
ಪರೋಪಕಾರಿ ಜೀವಿಗಳನ್ನು ಉಪಯೋಗಿಸುವುದರಿಂದ ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಹಾಗೂ ಕೀಟನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪಪರಿಣಾಮವನ್ನು ತಪ್ಪಿಸಬಹುದು.
ಬೇರಿನ ಮೂಲಕ ಉಪಚರಿಸಿದ ರಾಸಾಯನಿಕವು 24 ಗಂಟೆಗಳೊಳಗೆ ಬೇರು ಹೀರಿಕೊಳ್ಳದಿದ್ದಲ್ಲಿ, ಇನ್ನೊಂದು ಸೂಕ್ತ ಬೇರನ್ನು ಆಯ್ಕೆಮಾಡಿ ಮೇಲೆ ಸೂಚಿಸಿರುವ ರೀತಿಯಲ್ಲಿ ಬೇರಿನ ಮೂಲಕ ಉಪಚಾರ ಕೈಗೊಳ್ಳಬೇಕು.
ಕೀಟನಾಶಕ ಉಪಯೋಗಿಸಿದ ಮರಗಳಿಂದ 30-40 ದಿನಗಳ ತನಕ ಮರಗಳ ಕಾಯಿಗಳನ್ನು (ಅಡುಗೆಗೆ) ಅಥವಾ ಎಳನೀರನ್ನು (ಕುಡಿಯಲಿಕ್ಕೆ) ಉಪಯೋಗಿಸಬಾರದು.
¸ಡಾ. ಕಲ್ಲೇಶ್ವರ ಸ್ವಾಮಿ ಸಿ. ಎಮ್.,
ಸಹಾಯಕ ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,
ನವಿಲೆ, ಶಿವಮೊಗ್ಗ Mobile No: 94495 37578