ತೊಗರಿ ಪೂರ್ಣ ಬೆಳೆಯಾಗಿ ಮತ್ತು ಹೆಸರು, ಉದ್ದು, ಸೋಯಾಬಿನ್, ಜೋಳ, ಸಜ್ಜೆ ಮತ್ತು ಎಳ್ಳಿನ ಬೆಳೆಗಳಲ್ಲಿ ಅಂತರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ತೊಗರಿಯಲ್ಲಿ ಆಧುನಿಕ ಕೃಷಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಭೂ ಹಾಗೂ ಪರಿಸರವನ್ನು ಸುಸ್ಥಿತಿಯಲ್ಲಿಟ್ಟು ಉತ್ಪಾದನೆಯ ಮತ್ತು ಹೆಚ್ಚಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಅದಕ್ಕಾಗಿ ಈ ಕೆಳಗೆ ತಿಳಿಸಿದ ತೊಗರಿ ಬೆಳೆಯ ಸುಧಾರಿತ ಬೇಸಾಯ ತಂತ್ರಜ್ಞಾನಗಳನ್ನು ಅನುಸರಿಸುವುದು ಬಹಳಷ್ಟು ಸೂಕ್ತವಾಗಿದೆ.
ಮಣ್ಣು ಮತ್ತು ಹವಾಗುಣ: ಸಾಮಾನ್ಯವಾಗಿ ಎಲ್ಲಾ ತರಹದ ಮಣ್ಣಿನಲ್ಲಿ ತೊಗರಿಯನ್ನು ಬೆಳೆÀಯಬಹುದಾಗಿದ್ದು ಆಳವಾದ ಕಪ್ಪು ಮಣ್ಣು ಹಾಗೂ 6.5 ರಿಂದ 7.5 ರಸಸಾರ ಇರುವ ಮಣ್ಣು ತೊಗರಿಗೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ಸವಳು, ಕ್ಷಾರಯುಕ್ತ ಮಣ್ಣು ಹಾಗೂ ಜೌಗು ಹಿಡಿಯುವ ಮಣ್ಣು ತೊಗರಿ ಬೆಳೆಗೆ ಸೂಕ್ತವಾÀಗಿರುವುದಿಲ್ಲ. ಎಲ್ಲಾ ತರಹದ ಹವಾಮಾನಕ್ಕೆ ಹೊಂದಿಕೊಳ್ಳುವ ಶಕ್ತಿ ಪಡೆದಿರುವ ಈ ಬೆಳೆಯನ್ನು ವಾರ್ಷಿಕ 700 ರಿಂದ 900 ಮಿ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದು.
ಭೂಮಿ ತಯಾರಿಕೆ: ಬಿತ್ತನೆಗೆ ಮುಂಚೆ ಭೂಮಿಯನ್ನು ಒಂದು ಸಲ ಆಳವಾಗಿ ಉಳುಮೆ ಮಾಡಿ ಎರಡು ಸಲ ಹರಗಿ ಭೂಮಿಯಲ್ಲಿ ಕಳೆ ಇಲ್ಲದಂತೆ ನೋಡಿಕೊಳ್ಳಬೇಕು. ಭೂಮಿಯ ಸಮತಟ್ಟಾಗಿದ್ದು ಹೆಚ್ಚಾಗಿರುವ ನೀರು ಬಸಿದು ಹೋಗುವಂತೆ ಇರಬೇಕು.
ಬೀಜ ಮತ್ತು ಬೀಜೋಪಚಾರ: ಆಯಾ ವಲಯ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ತಳಿಗಳನ್ನು ಬಿತ್ತನೆಗೆ ಬಳಸಬೇಕು ಮತ್ತು ಜೂನ್ 2ನೇ ವಾರದಲ್ಲಿ 90 ಸೆ.ಮಿ. ಅಂತರದ ಹರಿಗಳಲ್ಲಿ ಒಣ ಬಿತ್ತನೆ ಮಾಡುವುದರಿಂದ ಬಿತ್ತನೆ ಕಾಲವನ್ನು ಕಾಯ್ದುಕೊಂಡು ಹರಿಗಳಲ್ಲಿ ತೇವಾಂಶ ಸಂಗ್ರಹಣೆಗೆ ಅನುಕೂಲವಾಗಿ ಬೀಜದ ಮೊಳಕೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ತೊಗರಿಯ ಕಾಯಿ ಕೊರಕದ ಬಾಧೆಯನ್ನು ಮುಂಬರುವ ದಿನಗಳಲ್ಲಿ ತಕ್ಕ ಮಟ್ಟಿಗೆ ತಪ್ಪಿಸಬಹುದು. ಒಂದು ಎಕರೆ ಭೂಮಿ ಬಿತ್ತನೆಗೆ ಇಡಿ ಬೆಳೆಯಾದರೆ ಸರಾಸರಿ 4-5, ಕಿ. ಗ್ರಾಂ. ಮತ್ತು ಮಿಶ್ರ ಬೆಳೆಯಾದರೆ 2.4-3.2 ಕಿ.ಗ್ರಾಂ. ಒಂದೇ ಗಾತ್ರದ ಉತ್ತಮ ಮೊಳಕೆ ಸಾಮಥ್ರ್ಯ ಹೊಂದಿದ ಬೀಜಗಳು ಬೇಕಾಗುತ್ತವೆ. ಬಿತ್ತನೆಗೆ ಮುಂಚೆ ಪ್ರತಿ ಕಿ. ಗ್ರಾಂ. ಬೀಜಗಳನ್ನು ಶೇ. 2 ರ ಸುಣ್ಣದ ಕ್ಲೋರೈಡ್ ದ್ರಾವಣದಲ್ಲಿ (ಪ್ರತಿ ಕಿ. ಗ್ರಾಂ. ಬೀಜಕ್ಕೆ 20 ಗ್ರಾಂ/ಲೀ ನೀರಿಗೆ) ಒಂದು ಗಂಟೆ ನೆನೆಸಿ ನೆರಳಿನಲ್ಲಿ 7 ರಿಂದ 8 ಗಂಟೆ ಒಣಗಿಸಬೇಕು. ಇದರಿಂದ ಬೀಜಗಳು ಏಕಕಾಲಕ್ಕೆ ಮೊಳಕೆಯೊಡೆದು ಬೆಳೆ ಚೆನ್ನಾಗಿ ಬೆಳೆಯುತ್ತದೆ. ಸಸಿಗಳಿಗೆ ಬರ ನಿರೋಧಕ ಶಕ್ತಿ ಬಂದು ಉತ್ತಮ ಬೆಳವಣಿಗೆ ಹೊಂದುತ್ತವೆ. ರೈಜೋಬಿಯಂ ಎಂಬ ಅಣುಜೀವಿ ಗೊಬ್ಬರಿದಿಂದ (200 ಗ್ರಾಂ/ಎಕರೆಗೆ) ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೆಳೆಯ ಬೇರುಗಳಲ್ಲಿ ಸಾರಜನಕ ತುಂಬಿದ ಗಂಟುಗಳ ಸಂಖ್ಯೆ ಹೆಚ್ಚಾಗಿ ಸಾರಜನಕ ಗೊಬ್ಬರದ ಉಳಿತಾಯವಾಗುತ್ತದೆ. ರಂಜಕ ಕರಗಿಸುವ ಅಣುಜೀವಿ ಗೊಬ್ಬರ (200 ಗ್ರಾಂ/ಕಿ.ಗ್ರಾಂ ಬೀಜಕ್ಕೆ) ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಿದರೆ ಭೂಮಿಯಲ್ಲಿ ಸಿಗದೇ ಇರುವ ರಂಜಕವು ಬೆಳೆÀಗಳಿಗೆ ಸಿಗುವಂತೆ ಮಾಡುತ್ತದೆ. ನೆಟೆ ರೋಗ ಬರುವ ಜಮೀನಿನಲ್ಲಿ ಟ್ರೈಕೋಡರ್ಮಾ (4 ಗ್ರಾಂ/ಕಿ.ಗ್ರಾಂ) ಎಂಬ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಿದರೆ ನೆಟೆ ರೋಗ ಮತ್ತು ಮಣ್ಣಿನಿಂದ ಬರುವ ಇತರೆ ರೋಗಗಳನ್ನು ಬರದಂತೆ ತಡೆಯಬಹುದು. ಹೀಗಾಗಿ ಕಡಿಮೆ ಖರ್ಚಿನ ಈ ಉಪಚಾರಗಳನ್ನು ಕೈಗೊಂಡರೆ ಮುಂದೆ ರೋಗದಿಂದ ಬರಬಹುದಾದ ಸಮಸ್ಯೆಗಳನ್ನು ಮುಂಚಿತವಗಿ ತಡೆಗಟ್ಟಿ ಹೆಚ್ಚಿನ ಹಾನಿಯನ್ನು ನಿಯಂತ್ರಿಸಬಹುದು.
ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಿತ್ತುವುದಕ್ಕಿಂತ 2-3 ವಾರ ಮುಂಚೆ ಪ್ರತಿ ಎಕರೆಗೆ 2.5 ಟನ್ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸಬೇಕು. ರಂಜಕಯುಕ್ತ ಕಾಂಪೋಷ್ಟ ಗೊಬ್ಬರ 1 ಟನ್ ಪ್ರತಿ ಎಕರೆಗೆ ಹಾಕುವುದರಿಂದ ಶೇ. 50 ರಷ್ಟು ರಾಸಾಯನಿಕ ಗೊಬ್ಬರಗಳನ್ನು ಉಳಿತಾಯ ಮಾಡಬಹುದು. ಇದರಿಂದ ಮಣ್ಣಿನ ರಚನೆ ಚೆನ್ನಾಗಿ ಆಗುವುದಲ್ಲದೆ ಬೆಳೆಗೆ ಸಮಗ್ರ ಪೋಷಕಾಂಶಗಳು ದೊರೆತು ನೀರು ಹಿಡಿಯುವ ಸಾಮಥ್ರ್ಯೆ ಹೆಚ್ಚಾಗುತ್ತದೆ. ಮಣ್ಣಿನಲ್ಲಿರುವ ಉಪಯೋಗಕಾರಿ ಜೀವಿಗಳ ಸಂಖ್ಯೆ ವೃದ್ಧಿಯಾಗಿ ಹೆಚ್ಚಿನ ಇಳುವರಿಗೆ ಸಹಾಯಕವಾಗುತ್ತದೆ.

ಪ್ರತಿ ಎಕರೆ ತೊಗರಿ ಬೆಳೆಗೆ 10 ಕಿ. ಗ್ರಾಂ. ಸಾರಜನಕ, 20 ಕಿ. ಗ್ರಾಂ. ರಂಜಕ, 8 ಕಿ. ಗ್ರಾಂ. ಗಂಧಕ ಮತ್ತು 6 ಕಿ. ಗ್ರಾಂ. ಸತು ಒದಗಿಸುವ ಗೊಬ್ಬರ ಕೊಡಬೇಕಾಗುತ್ತದೆ. ಸಾರಜನಕ, ರಂಜಕ ಮತ್ತು ಗಂಧಕಗಳನ್ನು ಬಿತ್ತುವಾಗಲೇ ಕೊಡುವುದರ ಜೊತೆಗೆ ಬಿತ್ತನೆಯ ಸಾಲಿನಲ್ಲಿ ಎಕರೆಗೆ 1.6 ಟನ್ನ ಕೊಟ್ಟಿಗೆ ಗೊಬ್ಬರ ಅಥವಾ 0.8 ಟನ್ನ ಎರೆಹುಳು ಗೊಬ್ಬರ ಹಾಕುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು. ಬೀಜ ಮತ್ತು ರಸಗೊಬ್ಬರಗಳನ್ನು ಏಕಕಾಲಕ್ಕೆ ಹಾಕುವ ಕೊರಿಗೆಯಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ಅಲ್ಪಾವಧಿ ತಳಿಗಳಾದಲ್ಲಿ ಬೀಜವನ್ನು 45 ಸೆ.ಮೀ. ಅಂತರದ ಸಾಲುಗಳಲ್ಲಿ ಬಿತ್ತಿ, ಸಾಲಿನಲ್ಲಿ ಹತ್ತು ಸೆ.ಮೀ.ಗೆ ಒಂದರಂತೆ ಸಸಿ ಉಳಿಸಿಕೊಂಡು ಉಳಿದ ಸಸಿಗಳನ್ನು ಕಿತ್ತುಹಾಕಬೇಕು. ಮಧ್ಯಮ ಅವಧಿಯ ತಳಿಗಳಾದಲ್ಲಿ ಬೀಜವನ್ನು 90 ಸೆಂ. ಮೀ. ಅಂತರ ಸಾಲುಗಳಲ್ಲಿ ಬಿತ್ತಿ 30 ಸೆಂ. ಮೀ. ಗೆ ಒಂದರಂತೆ ಸಸಿ ಇಟ್ಟು ಉಳಿದ ಸಸಿಗಳನ್ನು ಕಿತ್ತು ಹಾಕಿ ಸಸ್ಯೆಗಳ ಸಂಖ್ಯೆಯನ್ನು ಕಾಪಾಡಿಕೊಳ್ಳಬೇಕು. ಇದರಿಂದ ಅನಾವಶ್ಯಕವಾಗಿ ತೇವಾಂಶ ಮತ್ತು ರಸಗೊಬ್ಬರಕ್ಕಾಗಿ ಸ್ಪರ್ಧೆ ಏರ್ಪಡಿಸುವುದನ್ನು ತಪ್ಪಿಸಬಹುದು.
ಕಳೆ ನಿಯಂತ್ರಣ: ಪರಿಣಾಮಕಾರಿ ಕಳೆಗಳ ನಿಯಂತ್ರಣಕ್ಕಾಗಿ ಬಿತ್ತಿದ 24 ಗಂಟೆಯೊಳಗಾಗಿ ಪ್ರತಿ ಲೀಟರ ನೀರಿಗೆ 3 ಮಿ.ಲೀ. ಪೆಂಡಿಮಿಥಾಲಿನ್ ಎಂಬ ರಾಸಾಯನಿಕ ಕಳೆನಾಶಕ ಬೆರೆಸಿ ಬಿತ್ತಿದ ಭೂಮಿಗೆ ಸಿಂಪಡಿಸಬೇಕು. ಎಕರೆಗೆ 250-300 ಲೀ. ಸಿಂಪರಣಾ ದ್ರಾವಣ ಬೇಕು. ಬಿತ್ತನೆ ಮಾಡಿದ 25 ದಿನಗಳ ಮೇಲೆ ಇಮ್ಯಝೆತಾಫೈರ್ 10 ಎಸ್‍ಎಲ್ ಎಂಬ ಕಳೆನಾಶಕವನ್ನು (1 ಮಿ.ಲೀ. ಪ್ರತಿ ಲೀ. ನೀರಿಗೆ) ಬೆರೆಸಿ ಸಿಂಪಡಿಸುವುದರಿಂದ ಕಳೆಗಳ ಹತೋಟಿ ಸಾಧ್ಯ. ಬಿತ್ತನೆಯಾದ 5-6 ವಾರಗಳ ನಂತರ ಒಂದು ಸಲ ಕೈಯಿಂದ ಕಳೆ ತೆಗೆದು ಎರಡು ಸಲ ಅಂತರ ಬೇಸಾಯ ಮಾಡಿರಿ.
ನೀರಿನ ಸಂರಕ್ಷಣೆ: ಪ್ರತಿ 10 ಸಾಲುಗಳಿಗೆ ಒಂದು ಸಾಲು ಆಳವಾಗಿ ಖಾಲಿ ನೇಗಿಲು ಸಾಲು ಹಾಕುವುದರಿಂದ ಮಳೆ ನೀರು ಅಲ್ಲಿ ಸಂಗ್ರಹವಾಗಿ ಬೆಳೆಗಳಿಗೆ ಸಿಗುತ್ತದೆ. ಹೆಚ್ಚು ಮಳೆ ಬಂದಲ್ಲಿ ಅದರ ಮೂಲಕ ನೀರು ಹೊಲದಿಂದ ಹೊರಗೆ ಹೋಗಲು ಇದು ಸಹಾಯವಾಗುತ್ತದೆ. ನೀರಿನ ಸೌಕರ್ಯವಿದ್ದ ಕಡೆಗಳಲ್ಲಿ ಹೂವಾಡುವ ಹಂತ ಮತ್ತು ಕಾಳು ಕಟ್ಟುವ ಹಂತಗಳಲ್ಲಿ 2 ಸಲ ನೀರು ಹಾಯಿಸುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದು.
ಮಣ್ಣು ಬೋದು ಏರಿಸುವಿಕೆ: ಕಡಿಮೆ ಆಳದ ಮಣ್ಣಿನಲ್ಲಿ ಅಂತÀರ ಬೇಸಾಯ ಮಾಡಿ ಸಾಲುಗಳ ಮಧ್ಯದಿಂದ ಬೆಳೆಗಳ ಸಾಲುಗಳಿಗೆ ಮಣ್ಣು ಏರಿಸುವುದರಿಂದ ಬೆಳೆÀಗಳ ಬೇರುಗಳ ಚೆನ್ನಾಗಿ ಬೆಳೆದು ಸಸ್ಯಗಳ ಬೆಳವಣಿಗೆ ಚೆನ್ನಾಗಿ ಉತ್ತಮ ಇಳುವರಿ ಪಡೆಯಬಹುದು.
ತೊಗರಿ ಬೆಳೆಯಲ್ಲಿ ಮಿಶ್ರ/ಆಂತರ ಬೆಳೆ ಪದ್ದತಿಗಳು: ಒಂದೇ ಬೆಳೆಗಿಂತ ಮಿಶ್ರ ಬೆಳೆ/ ಅಂತರ ಬೆಳೆ ಬೆಳೆಯುವುದು ಉಪಯುಕ್ತ ಏಕೆಂದರೆ ಒಂದೇ ಬೆಳೆ ಬೆಳೆಯುವುದರಿಂದ ಆಗುವ ಸಂಪೂರ್ಣ ಹಾನಿಯನ್ನು ಈ ಬೆಳೆ ಪದ್ಧತಿಗಳು ಕಡಿಮೆ ಮಾಡುತ್ತವೆ. ಭೂಮಿಯ ಗುಣಧರ್ಮ, ಮಳೆ ಬೀಳುವ ಪ್ರಮಾಣ, ಅವಧಿ ಮತ್ತು ಮಣ್ಣಿನ ತೇವಾಂಶದ ಕ್ಷೀಣತೆಯ ಅವಧಿಗೆ ಅನುಗುಣವಾಗಿ ಬೆಳೆಗಳನ್ನು ಆರಿಸಬೇಕು. ಭೂಮಿಯನ್ನು ಸಾಕಷ್ಟು ತೇವಾಂಶ ಇರುವಾಗಲೇ ಮಾಗುವಂತೆ ಬೆಳೆ ಮತ್ತು ತಳಿಗಳನ್ನು ಅಯ್ಕೆ ಮಾಡಬೇಕು. ನಿಶ್ಚಿತ ಬೆಳೆ ಪದ್ದತಿಗಳನ್ನು ಅನುಸರಿಸದೇ ಹಮಾಮಾನಕ್ಕೆ ತಕ್ಕಂತೆ ಬೆಳೆ/ ತಳಿಗಳನ್ನು ಬದಲಿಸುವುದು ಅವಶ್ಯಕ. ಕಡಿಮೆ ಆಳದ ಕಪ್ಪು ಭೂಮಿಯಲ್ಲಿ ತೊಗರಿಯನ್ನು ನವಣೆಯೊಂದಿಗೆ 2:1 ಸಾಲುಗಳ ಅನುಪಾತದಲ್ಲಿ ಅಂತರ ಬೆಳೆಯಾಗಿ ಮತ್ತು ಆಳವಾದ ಕಪ್ಪು ಭೂಮಿಯಲ್ಲಿ ಹೆಸರಿನೊಂದಿಗೆ 1:3 ಸಾಲುಗಳ ಅನುಪಾತದಲ್ಲಿ ಅಂತರಬೆಳೆಯಾಗಿ ಬೆಳೆಯುವುದು ಸೂಕ್ತವಾಗಿದೆ.
ಬೆಳೆಯ ಪ್ರಾರಂಭಿಕ ಹಂತದಿಂದ ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ಬೆಳೆಗಳಿಗೆ ಬಾಧಿಸುವ ಕೀಟ ಹಾಗೂ ರೋಗಗಳ ಹತೋಟಿಗಾಗಿ ಸಮಗ್ರ ಪೀಡೆ ನಿರ್ವಹಣೆ ವಿಧಾನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಗಳ ಶಿಫಾರಸ್ಸಿನಂತೆ ಅನುಸರಿಸಬೇಕು. ಹೀಗೆ ತೊಗರಿ ಬೆಳೆಯ ಸುಧಾರಿತ ಬೇಸಾಯ ತಂತ್ರಜ್ಞಾನಗಳನ್ನು ಅನುಸರಿ ರೈತ ಬಾಂಧವರು ವೈಜ್ಞಾನಿಕವಾಗಿ ಬೇಸಾಯ ಕೈಗೊಳ್ಳುವುದರಿಂದ ಯಶಸ್ವಿಯಾಗಬಹುದು.

ಲೇಖಕರು: ಡಾ. ಶ್ರೀನಿವಾಸ ಬಿ.ವಿ., ಡಾ. ಯುಸುಫ್‍ಅಲಿ ನಿಂಬರಗಿ, ಡಾ. ಜಹೀರ್ ಅಹೆಮದ್ ಮತ್ತು ಡಾ. ರಾಜು ಜಿ. ತೆಗ್ಗಳ್ಳಿ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ

error: Content is protected !!