ಶಿವಮೊಗ್ಗ, ಜೂನ್ 11 :  ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದ್ದು,  ಎಲ್ಲಾ ಜಿಲ್ಲೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಅವರು ಶುಕ್ರವಾರ ಶಿಕಾರಿಪುರ ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್ ಮುಂದಿನ ಒಂದು ವಾರದಲ್ಲಿ ಹತೋಟಿಗೆ ಬರುವ ನಿರೀಕ್ಷೆ ಹೊಂದಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರೋನಾ ಪ್ರಮಾಣ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದ ಹಲವು ವರ್ಗಗಳ ಜನರಿಗೆ ಸರ್ಕಾರ ಈಗಾಗಲೇ ಆರ್ಥಿಕ ನೆರವು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಫಲಾನುಭವಿಗಳ ಹಳೆ ಸಾಲ ಬಾಕಿಯನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಈ ಹಣದಿಂದ ಮುರಿದುಕೊಳ್ಳಬಾರದು. ಈ ರೀತಿ ಹಳೆ ಸಾಲ ಚುಕ್ತಾ ಮಾಡುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶಿಕಾರಿಪುರ ತಾಲೂಕಿನ ಪ್ರಮುಖ ನೀರಾವರಿ ಯೋಜನೆಗಳು ಬಹುತೇಕ ಅಂತಿಮ ಹಂತದಲ್ಲಿವೆ. ಈ ಯೋಜನೆಗಳ ಮೂಲಕ ಬರಪೀಡಿತವಾಗಿರುವ ಉಡುಗುಣಿ, ತಾಳಗುಂದ ಮತ್ತು ಹೊಸೂರು ಹೋಬಳಿಗಳ ಬಹುತೇಕ ಕೆರೆಗಳನ್ನು ಈ ಮಳೆಗಾಲದಲ್ಲಿ ತುಂಬಿಸುವ ವಿಶ್ವಾಸ ನನಗಿದೆ. ಶೇ.90ರಷ್ಟು ಕಾಮಗಾರಿಗಳು ಈಗಾಗಲೇ ಮುಗಿದಿದ್ದು, ಈ ಭಾಗದ ಹಲವು ವರ್ಷಗಳ ಕನಸು ಇದರಿಂದ ನನಸಾಗಲಿದೆ ಎಂದರು.ಜಿಲ್ಲೆಯಲ್ಲಿ  ಹಲವಾರು ಅಭಿವೃದ್ಧಿ ಕಾಮಗಾರಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಅನುದಾನ ಒದಗಿಸಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಹಳಿ ನಿರ್ಮಾಣ ಯೋಜನೆಯನ್ನು ತ್ವರಿತಗೊಳಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ ಯೋಜನೆ ಅನುಷ್ಟಾನಗೊಳಿಸಬೇಕು. ತಾಲೂಕಿನಲ್ಲಿ ಮಂಜೂರಾಗಿರುವ 10ಕೆವಿ ವಿದ್ಯುತ್ ಸ್ಟೇಷನ್‍ಗಳ ನಿರ್ಮಾಣ ಕಾರ್ಯವನ್ನು ಸಹ ಚುರುಕುಗೊಳಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕಿನ ಪ್ರತಿಯೊಬ್ಬರ ಅರ್ಹ ಬಡವರಿಗೂ ಮನೆ ನಿರ್ಮಿಸಿ ನೀಡಬೇಕು. ಇದಕ್ಕಾಗಿ ಆಶ್ರಯ ನಿವೇಶನ ಲಭ್ಯವಿಲ್ಲದಿದ್ದರೆ, ನಿವೇಶನ ಖರೀದಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಪ್ರತಿ ಅರ್ಹರಿಗೂ ಮನೆಯನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 
ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ: ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು. ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಸಕಾಲದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ತಾಲೂಕಿನಲ್ಲಿ ಹಲವು ನೀರಾವರಿ ಯೋಜನೆಗಳು ನಿರೀಕ್ಷೆಯಂತೆ ಅನುಷ್ಟಾನಗೊಳ್ಳುತ್ತಿದೆ. ಉಡುಗುಣಿ ತಾಳಗುಂದ ಏತ ನೀರಾವರಿ ಯೋಜನೆ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಕಸಬಾ ನೀರಾವರಿ ಯೋಜನೆ ಶೇ.50ರಷ್ಟು ಪೂರ್ಣಗೊಂಡಿದೆ. ಹೊಸಳ್ಳಿ-ಅಂಜನಾಪುರ ಯೋಜನೆಯ ಪೈಪ್‍ಲೈನ್ ಕಾರ್ಯ ನಡೆಯುತ್ತಿದೆ. ಯೋಜನೆಗೆ ಯಾವುದೇ ಆರ್ಥಿಕ ಅಡಚಣೆ ಇರುವುದಿಲ್ಲ. ತಾಲೂಕಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಇದುವರೆಗೆ ತಾಲೂಕಿನಲ್ಲಿ 45ಸಾವಿರ ಮಂದಿಗೆ ಪ್ರಥಮ ಡೋಸ್ ಮತ್ತು 5ಸಾವಿರ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.
ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.Attachments area

error: Content is protected !!