ಶಿವಮೊಗ್ಗ, : ಜಿಲ್ಲೆಯಲ್ಲಿ ವಿಶೇಷ ಅಗತ್ಯವುಳ್ಳ ಪ್ರತಿಯೊಂದು ಮಗುವಿಗೂ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲು ಅನುಕೂಲವಾಗುವಂತೆ ತಜ್ಞ ವೈದ್ಯರು ತಾಲೂಕು ಮಟ್ಟದಲ್ಲಿ ಶಿಬಿರಗಳನ್ನು ಆಯೋಜನೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮನ್ವಯ ಶಿಕ್ಷಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶೇ.40ಕ್ಕಿಂತ ವೈಕಲ್ಯ ಕಡಿಮೆ ಇರುವ ವಿಕಲಚೇತನರಿಗೆ ವೈದ್ಯಾಧಿಕಾರಿಗಳು ಪ್ರಮಾಣಪತ್ರ ನೀಡುತ್ತಿಲ್ಲ. ಆರೊಗ್ಯ ತಪಾಸಣೆಯ ನಂತರ ಅರ್ಹ ವಿಕಲಾಂಗರಿಗೆ ಪ್ರಮಾಣಪತ್ರ ನೀಡುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ಗ್ರಾ.ಪಂ.ಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗಾಗಿ ನಿಗಧಿಪಡಿಸಲಾದ ಶೆ.5ರಷ್ಟು ಅನುದಾನವನ್ನು ನಿಗಧಿಪಡಿಸಿದ ಉದ್ದೇಶಕ್ಕಾಗಿಯೇ ಬಳಸುವಂತೆ ಸೂಚಿಸಿದ ಅವರು, ಸುಮಾರು 21ರೀತಿಯ ವಿಶೇಷ ಚೇತನ ಮಕ್ಕಳನ್ನು ಗುರುತಿಸಲು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂಧಿಗಳಿಗೆ ಮಾಹಿತಿಯ ಕೊರತೆ ಇದ್ದು, ಇದನ್ನು ನಿವಾರಿಸುವಲ್ಲಿ ಸಿಬ್ಬಂಧಿಗಳಿಗೆ ಶೀಘ್ರದಲ್ಲಿ ಒಂದುದಿನದ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದವರು ನುಡಿದರು.
ಈಗಾಗಲೆ ಗುರುತಿಸಲಾದ ಮಕ್ಕಳ ವೈಯಕ್ತಿಕ ಶಿಕ್ಷಣ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಕ್ರಿಯಾ ಯೋಜನೆ ತಯಾರಿಸಿ ಕಲಿಕೆಗೆ ಒತ್ತು ನೀಡಲಾಗುವುದು ಎಂದ ಅವರು, ವಿಕಲಚೇತನ ಮಕ್ಕಳ ಆರೋಗ್ಯ, ಅನಾರೋಗ್ಯ, ಪಾಲನೆ, ಪೋಷಣೆ ಮತ್ತು ಶಿಕ್ಷಣ ನೀಡುವ ಕುರಿತು ಮಗುವಿನ ಪೋಷಕರಿಗೆ ಜಿಲ್ಲೆಯ ಆಯಾ ತಾಲೂಕುಗಳ ಆಯ್ದ ಮೂರ್ನಾಲ್ಕು ಸ್ಥಳಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದರು.
ಫಿಸಿಯೋಥೆರಪಿ, ಸ್ಪೀಚ್ ಥೆರಪಿ, ಇತರೆ ಸಹಾಯ ಒದಗಿಸುವ ಕುರಿತು ಪ್ರತಿ ತಾಲೂಕು ಕೇಂದ್ರದಲ್ಲಿ ಓರ್ವ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಅವರು, ದೃಷ್ಟಿದೋಷ, ದೈಹಿಕ ವೈಕಲ್ಯ ಹೊಂದಿದ ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲು ಯತ್ನಿಸಲಾಗುವುದು. ಈಗಾಗಲೇ ದೃಷ್ಠಿದೋಷ ಹೊಂದಿದ ಮಕ್ಕಳಿಗೆ ನಗರದ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಯ ನಂತರ ಮಗುವಿನ ಅಗತ್ಯ ವೆಚ್ಚಗಳನ್ನು ನಗರದ ಪ್ರದೇಶದಲ್ಲಿ ಮಹಾನಗರಪಾಲಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಗ್ರಾಮ ಪಂಚಾಯಿತಿಗಳಿಂದ ಭರಿಸುವಂತೆ ಸೂಚಿಸಲಾಗುವುದು ಎಂದವರು ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ವಿಕಲಚೇತನ ಮಕ್ಕಳ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಾಗಿದ್ದು ಅದನ್ನು ಇನ್ನಷ್ಟು ಬಲವರ್ಧನೆಗೊಳಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿರಿಸಿದ ಅನುದಾನವನ್ನು ಪಡೆದು, ಅಗತ್ಯ ಪರಿಕರಗಳನ್ನು ಖರೀದಿಸುವ ಉದ್ದೇಶ ಹೊಂದಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿದ 1072ಮಕ್ಕಳನ್ನು ಗುರುತಿಸಲಾಗಿದೆ. ಅಲ್ಲದೇ 763ಮಕ್ಕಳನ್ನು ಗುರುತಿಸಿ ಶಿಕ್ಷಣದ ಮುಖ್ಯವಾಹಿನಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದವರು ನುಡಿದರು.
ಮುಂದುವರೆದ ದೇಶಗಳಲ್ಲಿ ಮಕ್ಕಳನ್ನು ಹೊಂದಬಯಸುವ ಪೋಷಕರು ಮುಂಚಿತವಾಗಿ ತಜ್ಞ ವೈದ್ಯರಿಂದ ಸಲಹೆ-ಮಾರ್ಗದರ್ಶನ ಪಡೆದು, ಮದ್ಯಪಾನ, ಧೂಮ್ರಪಾನದಂತಹ ವ್ಯಸನಗಳಿಂದ ಹೊರಬಂದು ನಂತರ ಮಕ್ಕಳನ್ನು ಹೊಂದುತ್ತಾರೆ. ಇದರಿಂದಾಗಿ ಹುಟ್ಟುವ ಮಕ್ಕಳ ಅಂಗವೈಕಲ್ಯತೆಯನ್ನು ನಿಯಂತ್ರಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಇಂತಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದು ವಿಕಲಾಂಗ ಮಕ್ಕಳ ಜನನಕ್ಕೆ ಒಂದು ಕಾರಣವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಮೋದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಸುಮಂಗಲಾ ಪಿ.ಕುಚಿನಾಡ, ಡಾ.ರಜಿನಿ ಪೈ ಸೇರಿದಂತೆ ಆಯುಷ್ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಕೃಷಿ ವಿಜ್ಞಾನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

error: Content is protected !!