ಲಾಕ್ಡೌನ್ನಿಂದ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಬೆಳೆದ ಹಣ್ಣುಗಳಿಗೆ ಮಾರುಕಟ್ಟೆಯಿಲ್ಲದೆ ನೆಲ ಕಚ್ಚುತ್ತಿವೆ. ಪಶ್ಚಿಮಘಟ್ಟದ ಶ್ರೇಣಿಯ ನಿತ್ಯಹರಿದ್ವರ್ಣದ ಕಾಡಿನಿಂದ ಕೂಡಿರುವ ಶರಾವತಿ ಕಣಿವೆಯ ಹಳ್ಳಿಗಳಲ್ಲಿ ಯಥೇಚ್ಛವಾಗಿ ಕಲ್ಲಂಗಡಿ ಬೆಳೆಯುತ್ತಾರೆ. ಟನ್ಗಟ್ಟಲೇ ಬೆಳೆದ ಕಲ್ಲಂಗಡಿ ಈಗ ತೋಟದಲ್ಲಿಯೇ ಕೊಳೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರಿನ ಪ್ರಗತಿಪರ ಕೃಷಿಕ ಜಯರಾಮಶೆಟ್ಟಿತಮ್ಮ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದು ಸರಿಯಾದ ಬೆಲೆ ಸಿಗದ ಕಾರಣ ಕಲ್ಲಂಗಡಿಯಲ್ಲಿ ಬೆಲ್ಲ ತಯಾರಿಸಿ ದೇಶದಲ್ಲಿಯೇ ಹೊಸ ಆವಿಷ್ಕಾರ ನಡೆಸಿದ್ದಾರೆ.
ಕಲ್ಲಂಗಡಿ ಹಣ್ಣನ್ನು ಹೋಳುಗಳನ್ನಾಗಿ ಹೆಚ್ಚಿ ಅದನ್ನು ಸರಿಯಾಗಿ ಮಿಶ್ರಣ ಮಾಡಿ ಎರಡು ಬಾರಿ ಸೋಸಿ ಕೊಪ್ಪರಿಗೆಗೆ ಹಾಕಿ ನಾಲ್ಕೈದು ಗಂಟೆಗಳ ಕಾಲ ನೀರು ಆವಿಯಾಗುವಂತೆ ಕುದಿಸಿದರೆ ಬೆಲ್ಲದ ರೀತಿಯ ಪಾಕ ಉಳಿಯುತ್ತದೆ. ಹದ ನೋಡಿ ಕೊಪ್ಪರಿಗೆ ಇಳಿಸಿದರೆ ಬೆಲ್ಲ ಸಿದ್ಧ. ಈಗ ಇವರು ತಯಾರು ಮಾಡಿರುವ ಬೆಲ್ಲಕ್ಕೆ ಬಹುಬೇಡಿಕೆ ನಿರ್ಮಾಣವಾಗಿದೆ. ಕಬ್ಬಿನ ರಸದಿಂದ ಬೆಲ್ಲ, ಸಕ್ಕರೆ ತಯಾರು ಮಾಡುವುದನ್ನು ನೋಡಿದ್ದೆವು. ಈಗ ಲಾಕ್ಡೌನ್ ಸಂದರ್ಭದಲ್ಲಿ ಮಾಡಿರುವ ಆವಿಷ್ಕಾರ ಮುಂದೆ ರೈತರಿಗೆ ದಾರಿದೀಪವಾಗಬಹುದು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಬೆಲ್ಲದ ಮಾದರಿಯನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಒಟ್ಟಾರೆ ಈ ಪ್ರಯತ್ನ ಮಲೆನಾಡಿಗರಲ್ಲಿ ಸಂತಸ ತಂದಿದೆ.
ಜಯರಾಮಶೆಟ್ಟಿ, ಪ್ರಗತಿಪರ ಕೃಷಿಕ, ಕಲ್ಲಂಗಡಿ ಬೆಳೆಗಾರ ಹಾಗು ಕಲ್ಲಂಡಿಯಿಂದ ಬೆಲ್ಲತಯಾರಿಸಿದವರು ಮಾಧಯಮದೊಂದೊಗೆ ಮಾತನಾಡಿ
ಕೊರೊನಾ ಮತ್ತು ಲಾಕ್ಡೌನ್ ಸಂಕಷ್ಟದಿಂದ ಕಲ್ಲಂಗಡಿ ಹಣ್ಣಿನ ಬೆಲೆ ನೆಲ ಕಚ್ಚಿದಾಗ ಸ್ನೇಹಿತರು ಸೇರಿ ಎಂಟು ಎಕರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿದ್ದೆವು. ಸುಮಾರು 15 ಟನ್ ಕಲ್ಲಂಗಡಿ ನೆಲ ಪಾಲಾಗುವ ಸಾಧ್ಯತೆ ಕಂಡುಬಂದಾಗ ನಮ್ಮ ಕಗ್ಗಾಡಿನಿಂದ ನಿಟ್ಟೂರಿನ ಸಂಪದಮನೆಯಲ್ಲಿ ಬೆಲ್ಲದ ಮಾದರಿಯ ಆಲೆಮನೆ ಸೃಷ್ಟಿಸಿ ಕಲ್ಲಂಗಡಿಯಿಂದ ಬೆಲ್ಲ ತಯಾರಿಸಿದ್ದೇವೆ. ಇದು ವ್ಯಾಪಾರಕ್ಕಾಗಿ ಅಲ್ಲ. ಎಲ್ಲ ರೈತರೂ ಇಂತಹ ಪ್ರಯತ್ನ ಮಾಡಿದರೆ ಕಲ್ಲಂಗಡಿಗೆ ಬೇಡಿಕೆ ನಿರ್ಮಿಸಬಹುದು.
ಡಾ. ಕಿರಣ್ಕುಮಾರ್, ವಿಜ್ಞಾನಿ ಮಾಧ್ಯಮದೊಂದೊಗೆ ಮಾತನಾಡಿ ಮಲೆನಾಡಿನಲ್ಲಿ ಜನ ನಿರಂತರವಾಗಿ ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಕೊರೊನಾದಂತಹ ಈ ಸಂದರ್ಭದಲ್ಲಿ ಮಾರುಕಟ್ಟೆ ಇಲ್ಲದೇ ಕಲ್ಲಂಗಡಿ ನೆಲ ಕಚ್ಚಿದೆ. ಇದಕ್ಕೆ ಹೊಸ ಆವಿಷ್ಕಾರ ಮಾಡಿ ಪ್ರಗತಿಪರ ಜಯರಾಮಶೆಟ್ಟಿ ಬೆಲ್ಲ ತಯಾರಿಸಿದ್ದಾರೆ. ಇದು ರುಚಿಯಾಗಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿದ್ದು ಉತ್ತಮ ಪ್ರೊಟೀನ್ ಅಂಶಗಳಿದ್ದು, ಮುಂದಿನ ದಿನಗಳಲ್ಲಿ ಯಶಸ್ವಿಯಾಗುವ ಲಕ್ಷಣಗಳಿವೆ.
ಚಂದ್ರಶೇಖರ ಶೆಟ್ಟಿ, ಸಂಪದಮನೆ, ಪ್ರಗತಿಪರ ಕೃಷಿಕರು ಮಾತನಾಡಿ ನಾನು ಬೆಳೆದ ಕಲ್ಲಂಗಡಿ ಬೆಳೆಗೆ ಮಾರುಕಟ್ಟೆ ಇಲ್ಲದೇ ಚಿಂತೆಯಲ್ಲಿದ್ದೆ. ಜಯರಾಮಶೆಟ್ಟಿಯ ಈ ಪ್ರಯತ್ನ ನಮಗೆ ಹೊಸ ದಿಕ್ಕನ್ನು ತೋರಿಸಿದೆ. ಇಂತಹ ಪ್ರಯತ್ನಗಳು ರೈತರಿಂದ ಹೆಚ್ಚಾಗಬೇಕು.
ಕಲ್ಲಂಗಡಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ. ಜಯರಾಮಶೆಟ್ಟಿ ಮತ್ತು ಸ್ನೇಹಿತರು ತಮ್ಮ ಎಂಟು ಎಕರೆ ಜಾಗದಲ್ಲಿ ಈ ಬಾರಿ ಕಲ್ಲಂಗಡಿ ಬೆಳೆದಿದ್ದರು. ಅದೆಲ್ಲವೂ ನೆಲ ಕಚ್ಚುವ ಸಂದರ್ಭ ಕಂಡುಬಂದಾಗ ಸದಾ ಹೊಸ ದಿಕ್ಕಿನೆಡೆಗೆ ಚಿಂತನೆ ಮಾಡುವ ಜಯರಾಮಶೆಟ್ಟಿ ಕಲ್ಲಂಗಡಿಯಿಂದ ಬೆಲ್ಲ ತಯಾರಿಸಿ ಬೇರೆಯವರಿಗೂ ಇದನ್ನು ತಯಾರಿಸಿ ಎಂದು ತಿಳಿಸಿಕೊಡುತ್ತಿದ್ದಾರೆ. ಈ ಪ್ರಯತ್ನ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಯೋಜನೆಯ ಸಫಲತೆಗೆ ಹಿಡಿದ ಕನ್ನಡಿಯಾಗಿದೆ. ಒಂದು ಟನ್ ಕಲ್ಲಂಗಡಿಯಲ್ಲಿ 700 ಲೀಟರ್ ಜ್ಯೂಸ್ ಸಿಗುತ್ತದೆ.ಕಲ್ಲಂಗಡಿ ಹಣ್ಣಿನಿಂದ ಒಂದು ಹೊಸ ಉತ್ಪನ್ನವನ್ನು ಕೊಟ್ಟ ಖುಷಿ ಜಯರಾಮಶೆಟ್ಟಿ ಮತ್ತು ಅವರೊಡನೆ ಕೈಗೂಡಿಸಿದ ಅವರ ಸ್ನೇಹಿತರುಗಳಿಗೆ ಸಿಕ್ಕಿದೆ.