ಶಿವಮೊಗ್ಗ, ಏಪ್ರಿಲ್ 15 : ಕೋವಿಡ್ ಸೋಂಕು ರಾಜ್ಯದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಂದಾಯ ಗ್ರಾಮಗಳಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಮುಂಜಾಗ್ರತೆ, ಸುರಕ್ಷತೆ ಹಾಗೂ ಅದರ ನಿಯಂತ್ರಣ ಕ್ರಮವಾಗಿ ಗ್ರಾಮೀಣ ಕಾರ್ಯಪಡೆ ರಚಿಸಿ, ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದು, ಸರ್ಕಾರ ಈಗಾಗಲೇ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.


ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಕೋವಿಡ್ ಕುರಿತು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್, ಗ್ರಾಮದ ಆರೋಗ್ಯ ಸಿಬ್ಬಂಧಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ನೋಂದಾಯಿತ ಸ್ಥಳೀಯ ವೈದ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೊಳಗೊಂಡಂತೆ ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿಯನ್ನು ರಚಿಸಲಾಗಿದೆ ಎಂದ ಅವರು, ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಕಂದಾಯ ಗ್ರಾಮಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಗ್ರಾಮೀಣ ಕಾರ್ಯಪಡೆಯನ್ನು ರಚಿಸಲು ಸೂಚಿಸಲಾಗಿದೆ ಎಂದವರು ತಿಳಿಸಿದರು.
ಈ ಸಮಿತಿಯು ಗ್ರಾಮೀಣ ಪ್ರದೇಶದಲ್ಲಿ 65ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಸಮೀಕ್ಷೆಯನ್ನು ಗ್ರಾಮ ಮಟ್ಟದಲಿ ಗುರುತಿಸಿ ನಿಯಮಿತವಾಗಿ ಇವರ ಆರೋಗ್ಯವನ್ನು ಗಮನಿಸಲಿದೆ. ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ಸಣ್ಣ ಸಣ್ಣ ತಂಡಗಳಲ್ಲಿ ವಿಂಗಡಿಸಿ, ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಿದೆ. ಉದ್ಯೋಗ ಸ್ಥಳದಲ್ಲಿ ನಿಯಮಿತವಾಗಿ ಸ್ವಚ್ಚತೆಯಿಂದ ಇರುವ ಬಗ್ಗೆ ತಿಳುವಳಿಕೆ ನೀಡಲಿದೆ ಅಲ್ಲದೆ ಕೆಲಸಕ್ಕೆ ಬರುವ ಕೆಲಸಗಾರರಲ್ಲಿ ಕೊರೋನ ವೈರಸ್‍ನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಜಿಲ್ಲಾಡಳಿತದಿಂದ ಸೂಕ್ತ ಮಾರ್ಗದರ್ಶನ ಪಡೆಯಲಿದೆ ಎಂದರು.
ಗರ್ಭಿಣಿ, ಬಾಣಂತಿಯರನ್ನು ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಿತವಾಗಿ ಭೇಟಿ ನೀಡಿ, ಇವರುಗಳ ಆರೋಗ್ಯ ಮೇಲ್ವಿಚಾರಣೆ ಮಾಡಲಿದೆ ಮತ್ತು ಅಂಗನವಾಡಿ ಶಾಲೆಯ ಮಕ್ಕಳ ಆರೈಕೆ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹೆಚ್ಚಿನ ಕಾಳಜಿ ವಹಿಸುವರು. ಮಹಿಳಾ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ನಿಗಾ ವಹಿಸಲಿದ್ದಾರೆ. ಕೆಮ್ಮು, ನೆಗಡಿ, ತಲೆನೋವು, ಜ್ವರ ಮತ್ತು ಗಂಟಲಲ್ಲಿ ಉರಿತ ಲಕ್ಷಣಗಳು ಕಾಣಿಸುವಂತಹ ಜನರನ್ನು ತಕ್ಷಣ ಗುರುತಿಸಿ, ಸಮೀಪದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದವರು ನುಡಿದರು.
ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯನ್ನು ಸಾರ್ವಜನಿಕರು ತಪ್ಪದೇ ಪಾಲಿಸಬೇಕು ಎಂದ ಅವರು ಗ್ರಾಮಗಳ ಬಾವಿ, ಕೆರೆ, ನದಿ ಮತ್ತಿತರ ಸ್ಥಳಗಳಲ್ಲಿ ಅನವಶ್ಯಕವಾಗಿ ಜನ ಗುಂಪು ಸೇರುವುದನ್ನು ನಿಯಂತ್ರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿರುವ ಅವರು, ಕೊರೋನ ಕುರಿತು ಇರುವ ಸುಳ್ಳು ವದಂತಿಗಳನ್ನು ಹರಡದಂತೆ ಕಾರ್ಯಪಡೆ ನೋಡಿಕೊಳ್ಳಲಿದೆ ಎಂದ ಅವರು, ಗ್ರಾಮೀಣ ಸಂತೆ, ಮದುವೆ, ಜಾತ್ರೆ, ಮೆರವಣಿಗೆ ಹಾಗೂ ಗುಂಪು ಸೇರುವುದನ್ನು ಗ್ರಾಮೀಣ ಕಾರ್ಯಪಡೆ ನಿಯಂತ್ರಿಸಲಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರವು ರಾಜ್ಯಕ್ಕೆ ನೀಡಲಾಗಿದ್ದ 13ಕೋಟಿ ಮಾನವದಿನಗಳನ್ನು ಫೆಬ್ರವರಿ ಮಾಸಾಂತ್ಯಕ್ಕೆ ಪೂರ್ಣಗೊಳಿಸಿದ್ದೇವೆ. ಅಂತೆಯೇ ಹೆಚ್ಚಿನ ಮಾನವದಿನಗಳನ್ನು ಮಂಜೂರು ಮಾಡುವಂತೆ ಮಾಡಿದ ಮನವಿಗೆ ಮಾನ್ಯ ಪ್ರಧಾನ ಮಂತ್ರಿಗಳು 15ಕೋಟಿ ಮಾನವದಿನಗಳನ್ನು ಮಂಜೂರು ಮಾಡಿ ಹೆಚ್ಚಿನ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಒದಗಿಸಿ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದವರು ತಿಳಿಸಿದರು.
ಜಲಶಕ್ತಿ ಅಭಿಯಾನ : ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಮಾರ್ಚ್ 22ರಿಂದ ನವೆಂಬರ್ 30ರವರೆಗೆ ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದ ಅವಧಿಯಲ್ಲಿ ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಮುಂಗಾರು ಪೂರ್ವ ಅವಧಿಯಲ್ಲಿ ನರೇಗಾ ಯೋಜನೆಯಡಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯನ್ನು ಮಳೆ ನೀರು ಸಂರಕ್ಷಣೆಗೆ ವೆಚ್ಚ ಮಾಡುವಂತೆ ಹಾಗೂ ಏಪ್ರಿಲ್ 01ರಿಂದ ಮುಂದಿನ 100ದಿನಗಳ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪ್ರಧಾನ ಮಂತ್ರಿಯವರು ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮಗ್ರ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಇದರೊಂದಿಗೆ ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದುಹೋಗುವ ಕಾಲುವೆಗಳ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಉದ್ದೇಶಿಸಲಾಗಿದೆ ಎಂದರು.
ಅಷ್ಟೇ ಅಲ್ಲದೇ ಬದು ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ನಾಲಾ ಪುನಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಕೆರೆ ನಿರ್ಮಾಣ, ಸೋಕ್ ಫಿಟ್ ನಿರ್ಮಾಣ, ಮಲ್ಟಿ ಆರ್ಚ್ ಚೆಕ್‍ಡ್ಯಾಂ ನಿರ್ಮಾಣ, ಕೊಳವೆಬಾವಿಗಳ ಮರುಪೂರಣ, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಈ ಯೋಜನೆಯಡಿ ಫಲಾನುಭವಿಗೆ ನೀಡಲಾಗುತ್ತಿದ್ದ ಕೂಲಿ 275/-ರೂ.ಗಳಿಂದ 299/-ರೂ.ಗೆ ಹೆಚ್ಚಿಸಲಾಗಿದ್ದು, 15ದಿನಗಳೊಳಗಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದರು.
ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿಯಲ್ಲಿ ಏಪ್ರಿಲ್ 19ರಂದು ಜಲಶಕ್ತಿ ಅಭಿಯಾನ ಯೋಜನೆಗೆ ಚಾಲನೆ ನೀಡಲಾಗುವುದು. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಆಯಾ ಕ್ಷೇತ್ರದ ಶಾಸಕರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

error: Content is protected !!