ಶಿವಮೊಗ್ಗ, ಜನವರಿ 25 : ನಮ್ಮನ್ನಾಳುವ ಸಮರ್ಥ ಜನನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸದವಕಾಶವೇ ಚುನಾವಣೆ. ಈ ಅವಧಿಯಲ್ಲಿ ಅರ್ಹ ಮತದಾರರೆಲ್ಲರೂ ವಿವೇಚನೆಯಿಂದ ಮತ ಚಲಾಯಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಪ್ರಭಾವತಿ ಎಂ. ಹಿರೇಮಠ್ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಚುನಾವಣೆ ಶಾಖೆ ಹಾಗೂ ಮಹಾನಗರಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರಿಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೌದ್ಧಿಕ ಹಾಗೂ ಮಾನಸಿಕವಾಗಿ ಅರ್ಹರಾದ ಮತದಾರರೆಲ್ಲರೂ ಯಾವುದೇ ಒತ್ತಡ, ಆಮಿಷಕ್ಕೊಳಗಾಗದೇ ನಿರ್ಬೀತಿಯಿಂದ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಉಳಿಸುವಂತೆ ಅವರು ಮನವಿ ಮಾಡಿದರು.
ಜನನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಹತ್ವದ ಪಾತ್ರ ವಹಿಸಲಿದೆ ಎಂದ ಅವರು, ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಅಲಕ್ಷ್ಯ ತೋರದೇ ಮತ ಚಲಾಯಿಸಿ, ದೇಶದ ಅಭಿವೃದ್ದಿ ಪಾಲ್ಗೊಳ್ಳುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬದಾಮಿ ಅವರು ಮಾತನಾಡಿ, ಸಂವಿಧಾನದತ್ತವಾಗಿ ಅರ್ಹರಾದ ಭಾರತೀಯರೆಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿರುವಂತೆ ಮತದಾನದ ಹಕ್ಕನ್ನು ನೀಡಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಯ ರೀತಿ ಎತ್ತ ಸಾಗುತ್ತಿದೆ ಎಂಬ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.
ಸಂವಿಧಾನದ ಆಶಯವನ್ನು ಈಡೇರಿಸಲು ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಆಗ ಸಹಜವಾಗಿ ಸಮೃದ್ಧ ದೇಶವನ್ನು ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮಾತನಾಡಿ, ಮತದಾರರು ಸಮರ್ಥ ಪ್ರಜಾ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ, ಸಕಾಲಿಕವಾಗಿ ನಿರ್ಣಯ ಕೈಗೊಂಡು ಮತ ಚಲಾಯಿಸುವಲ್ಲಿ ಸೋತಿದ್ದೇವೆ. ಚುನಾವಣಾ ಆಯೋಗದ ಆಡಳಿತ ವ್ಯವಸ್ಥೆಯನ್ನು ಮನೆ-ಮನಗಳಿಗೆ ತಲುಪಿಸಿದ ಟಿ.ಎನ್.ಶೇಷನ್, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಖ್ಯಾತನಾಮರಾಗಿದ್ದ ಕೋಟ ಶಿವರಾಮ ಕಾರಂತ್‍ರಂತಹವರು ಚುನಾವಣೆಯಲ್ಲಿ ಆಯ್ಕೆಯಾಗಲಿಲ್ಲ. ದೇಶದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್‍ರಂತಹ ಮಹನೀಯರು ಅನೇಕ ಚುನಾವಣೆಯಲ್ಲಿ ಸೋತರೆಂಬುದು ಬೇಸರದ ಸಂಗತಿ ಎಂದರು.
ಅರ್ಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಾಗ ಸಂವಿಧಾನಕ್ಕೆ ನಿಜವಾದ ಅರ್ಥ ಬರುತ್ತದೆ. ಸಮೃದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವಲ್ಲಿ, ಇನ್ನಷ್ಟು ಬಲಗೊಳ್ಳುವಲ್ಲಿ ಪ್ರಜ್ಞಾವಂತರಾದ ನಾವು ಅರಿತು ಮತದಾನ ಮಾಡಬೇಕು ಎಂದವರು ನುಡಿದರು.
ನಮ್ಮನ್ನು ನಾವೇ ಆಳಿಕೊಳ್ಳುವ ವ್ಯವಸ್ಥೆಯ ಭಾಗವೇ ಚುನಾವಣೆ. ಸಂವಿಧಾನ ಧರ್ಮಗ್ರಂಥವಿದ್ದಂತೆ. ಭಾರತ ತನ್ನ ಸಂಸ್ಕøತಿ, ದೇಶ, ಭೌಗೋಳಿಕ ವ್ಯವಸ್ಥೆಯನ್ನಾಧರಿಸಿ ಸಂವಿಧಾನ ರಚಿಸಿದೆ. ಸಂವಿಧಾನದ ಆಶಯಗಳು ಈಡೇರಲು ಚುನಾವಣೆ ಅಗತ್ಯವಾಗಿದೆ. ಮತದಾನ ಎಲ್ಲರೂ ಜವಾಬ್ದಾರಿ ಹಾಗೂ ಕರ್ತವ್ಯವೂ ಹೌದು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮತದಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಉಪವಿಭಾಗಾಧಿಕಾರಿ ಪ್ರಕಾಶ್, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರತಾಪ್, ಇಮ್ತಿಯಾಜ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಮತದಾರರೆಲ್ಲರಿಗೆ ಪ್ರತಿಜ್ಞಾವಿಧಿ ಬೋದಿಸಿದರು. ನೂತನವಾಗಿ ಹೆಸರು ನೋಂದಾಯಿಸಿದ ಯುವ ಮತದಾರರಿಗೆ ಗುರುತಿನ ಚೀಟಿ ಹಾಗೂ ಅಂಧ ಮತದಾರರಿಗೆ ಬ್ರೈಲ್ ಲಿಪಿ ಇರುವ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.

error: Content is protected !!