ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣ, ಶಿವಮೊಗ್ಗ ಇಲ್ಲಿ 2 ದಿನಗಳ “ಜಾನುವಾರುಗಳ ರೋಗ ಪತ್ತೆಯಲ್ಲಿ ಇತ್ತೀಚಿನ ಆವಿಷ್ಕಾರಗಳು” ಎಂಬ ಶಿರ್ಷಿಕೆಯ ತಾಂತ್ರಿಕ ಕಾರ್ಯಾಗಾರವನ್ನು ದಿನಾಂಕ 17-18 ಮಾರ್ಚ್ 2021 ರಂದು ಏರ್ಪಡಿಸಿದ್ದು, ಇದರಲ್ಲಿ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳ ರೋಗ ಪತ್ತೆ ವಿಧಾನದ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಸಮೇತ ತರಬೇತಿಯನ್ನು ವಿಷಯ ತಜ್ಞರಿಂದ ಒದಗಿಸಲಾಯಿತು. ಈ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 35 ಪಶುವೈದ್ಯರು ಭಾಗವಹಿಸಿದ್ದು ಕ್ಷೇತ್ರ ಮಟ್ಟದ ಪಶುವೈದ್ಯರ ಜ್ಞಾನ ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ ಎಂದು ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾಗಿರುವ ಡಾ: ಎನ್.ಬಿ.ಶ್ರೀಧರ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ: ಎಸ್.ಬಿ.ರವಿಕುಮಾರ್, ನಿವೃತ್ತ ಯೋಜನಾ ನಿರ್ದೇಶಕರು, ಜಿಲ್ಲ ಪಂಚಾಯತ್, ಶಿವಮೊಗ್ಗ ಇವರು ಭಾಗವಹಿಸಿ, ಕ್ಷೇತ್ರ ಮಟ್ಟದಲ್ಲಿರುವ ಪಶುವೈದ್ಯರು ರೈತರ ಒಳಿತಿಗಾಗಿ ಶ್ರಮಿಸಬೇಕೆಂದರು. ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದ ಡೀನ್ರವರಾದ ಡಾ: ಪ್ರಕಾಶ್ ನಡೂರ್ ಮಾತನಾಡುತ್ತಾ ಪಶುಚಿಕಿತ್ಸೆಯಲ್ಲಿ ಔಷಧಗಳನ್ನು ಎಚ್ಚರಿಕೆಯೆಂದು ಬಳಸಬೇಕೆಂದು, ಜೀವನಿರೋಧಕ ಮತ್ತು ಜಂತುನಾಶಕಗಳ ಶೇಷವು ಹಾಲಿನಲ್ಲಿ ಅತ್ಯಂತ ಕಡಿಮೆಯಿರುವಂತೆ ಪಶುಚಿಕಿತ್ಸೆ ಮಾಡಬೇಕೆಂದು ಕರೆಯಿತ್ತರು.
ಡಾ: ಕವಿತಾ ರಾಣಿ, ಡಾ: ಪ್ರದೀಪ್, ಡಾ: ಮಂಜುನಾಥ್, ಡಾ: ಪ್ರಶಾಂತ್, ಡಾ:ಸುಂದರೇಶನ್, ಡಾ:ಶೀಲಾ, ಡಾ: ಪಟೇಲ್ ಸುರೇಶ್ ರೇವಣ್ಣ, ಡಾ: ಮಾಲತೇಶ್, ಡಾ:ಜಯರಾಮು, ಡಾ:ಅರುಣ್, ಡಾ:ಅನಂತಕೃಷ್ಣ ಇವರು ವಿಷಯ ತಜ್ಞರು ಮತ್ತು ಸಂಪೂನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.